ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳ್ತಮಜಲಿನಲ್ಲಿ ಅಬ್ದುಲ್ ರಹ್ಮಾನ್ ಎಂಬ ಯುವಕನ ಹತ್ಯೆಯನ್ನು ಜಮಾಅತ್ ಇಸ್ಲಾಮೀ ಹಿಂದ್, ಕರ್ನಾಟಕವು ತೀವ್ರವಾಗಿ ಖಂಡಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ಮುಹಮ್ಮದ್ ಸಾದ್ ಬೆಲ್ಗಾಮಿ, “ದ.ಕ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರವು ವಿಶೇಷ ಗಮನಹರಿಸಬೇಕು” ಎಂದು ಒತ್ತಾಯಿಸಿದ್ದಾರೆ.
ರಾಜ್ಯದ ಜನತೆಯು ಯಾವುದೇ ಪ್ರಚೋದನೆಗೆ ಒಳಗಾಗದೆ ಶಾಂತಿ ಕಾಪಾಡುವಂತೆ ನಾವು ವಿನಂತಿಸುತ್ತೇವೆ. ಕರಾವಳಿ ಪ್ರದೇಶದಲ್ಲಿ ದ್ವೇಷ ಭಾಷಣ, ಪ್ರತೀಕಾರದ ಕೊಲೆಗಳು, ಮತ್ತು ಪ್ರಚೋದನಕಾರಿ ರಾಜಕಾರಣವು ಸಾಮಾನ್ಯವಾಗಿದ್ದು, ಇವುಗಳನ್ನು ವ್ಯವಸ್ಥಿತವಾಗಿ ಪೋಷಿಸಲಾಗುತ್ತಿದೆ. ಕೊಲೆಗಾರನಿಗೆ ತಾನು ಯಾಕೆ ಕೊಲೆ ಮಾಡುತ್ತಿದ್ದೇನೆ ಮತ್ತು ಕೊಲೆಯಾಗುವವನಿಗೆ ತಾನು ಯಾಕೆ ಕೊಲೆಯಾಗುತ್ತಿದ್ದೇನೆ ಎಂಬುದೇ ತಿಳಿಯದ ತಲೆಮಾರು ಇಲ್ಲಿ ಸೃಷ್ಟಿಯಾಗುತ್ತಿರುವುದು ದುರಂತವಾಗಿದೆ ಎಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸರ್ಕಾರವು ವಿಶೇಷ ಗಮನಹರಿಸಬೇಕು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋಮು ಹಿಂಸಾಚಾರ ನಿಯಂತ್ರಣಕ್ಕಾಗಿ ‘ಕೋಮು ಹಿಂಸೆ ನಿಗ್ರಹ ಕಾರ್ಯಪಡೆ’ ರಚನೆಯ ಸರ್ಕಾರದ ನಿರ್ಧಾರಕ್ಕೆ ಅಬ್ದುಲ್ ರಹ್ಮಾನ್ ಕೊಲೆ ದೊಡ್ಡ ಸವಾಲು ಎಸೆದಿದೆ. ಯುವಕರನ್ನು ತಪ್ಪುದಾರಿಗೆ ತಳ್ಳುವ ದ್ವೇಷ ಭಾಷಣಕಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಈ ಅಮಾನವೀಯ ಕೃತ್ಯವನ್ನು ನಡೆಸಿದ ಅಪರಾಧಿಗಳನ್ನು ತಕ್ಷಣ ಬಂಧಿಸಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಜಮಾಅತ್ ಇಸ್ಲಾಮೀ ಹಿಂದ್, ಕರ್ನಾಟಕವು ಆಗ್ರಹಿಸಿದೆ.