ಬರ ಪರಿಹಾರ ಹಾಗೂ ಕೂಲಿ ಕಾರ್ಮಿಕರ ವಿವಿಧ ಬೇಡಿಕೆಗಳು ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆಯ ಕಾರ್ಯಕರ್ತರು ಔರಾದ ತಾಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿರೇಂದ್ರಸಿಂಗ್ ಅವರಿಗೆ ಸಲ್ಲಿಸಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಸೈಯದ್ ಇಸಾಮೋದ್ದಿನ್ ಮಾತನಾಡಿ, “ರಾಜ್ಯದಲ್ಲಿ ಮಳೆಯ ತೀವ್ರ ಕೊರತೆ ಉಂಟಾಗಿದೆ. ರಾಜ್ಯದ 236 ತಾಲ್ಲೂಕುಗಳಲ್ಲಿ 223 ತಾಲೂಕುಗಳು ಬರಪೀಡಿತವೆಂದು ಸರ್ಕಾರ ಘೋಷಣೆ ಮಾಡಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ 18 ಸಾವಿರ ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ. 196 ತಾಲೂಕುಗಳಲ್ಲಿ ಬರದ ತೀವ್ರತೆ ಇದೆ. ಕುಡಿಯಲು ಶುದ್ಧ ನೀರು, ಜಾನುವಾರಗಳಿಗೆ ಮೇವಿನ ಕೊರತೆ ಉಂಟಾಗುವ ಸಾಧ್ಯತೆ ಇದೆ. ಮಳೆಯ ಅಭಾವದಿಂದ ಅನ್ನದಾತರು ಸಂಕಷ ಸಿಲುಕಿದ್ದಾರೆ. ಕಳೆದ 10 ವರ್ಷಗಳಲ್ಲಿ ಕಂಡು ಕೇಳರಿಯದ ಬರ ಪರಿಸ್ಥಿತಿ ಉಂಟಾಗಿದೆ. ಕೂಲಿಕಾರದ ಹೊಟ್ಟೆಪಾಡಿಗಾಗಿ ವಲಸೆ ಹೋಗುವುದು ಸಿಕ್ಕಾಪಟ್ಟೆ ಹೆಚ್ಚಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಔರಾದ ತಾಲೂಕಿನ ಬಡ ಕಾರ್ಮಿಕರ ಹಿತದೃಷ್ಟಿಯಿಂದ ಮನರೇಗಾ ಕಾರ್ಮಿಕರಿಗೆ ಆಧಾರ್ ಅಡಿಯಲ್ಲಿ ವೇತನ ನೀಡುವ ಪದ್ಧತಿಯನ್ನು ಕೈಬಿಡಬೇಕು. ಬರಗಾಲ ನಿಮಿತ್ತ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಮಿಕರಿಗೆ ವರ್ಷದಲ್ಲಿ 100 ದಿನಗಳ ಬದಲಾಗಿ 200 ದಿನಗಳ ಕೆಲಸ ಒದಗಿಸಬೇಕು. ಕೂಲಿಕಾರರ ಕನಿಷ್ಠ ದಿನಗೂಲಿ ರೂ.600ಕ್ಕೆ ಹೆಚ್ಚಿಸಬೇಕು. ಕೂಲಿಕಾರರು ಬ್ಯಾಂಕುಗಳಿಂದ ಪಡೆದ ಸಾಲ ಹಾಗೂ ಮೈಕ್ರೋಫೈನಾನ್ಸ್ ಮೂಲಕ ಪಡೆದ ಸಾಲವನ್ನು ಮನ್ನಾ ಮಾಡಬೇಕು. ವಲಸೆ ಕಾರ್ಮಿಕರ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಬರಗಾಲದ ಸಮಯದಲ್ಲಿ ಯಂತ್ರಗಳ ಬಳಕೆ ನಿಲ್ಲಿಸಿ ಕೂಲಿಕಾರರಿಗೆ ಕೆಲಸದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ತಾಲೂಕಿನ ಬರಗಾಲ ಘೋಷಣೆಯಾಗಿರುವ ಬರ ಪರಿಹಾರ ಆದಷ್ಟು ಬೇಗ ಕೂಡಲೇ ಸರಕಾರ ಬಿಡುಗಡೆ ಮಾಡಬೇಕು ಸೇರಿದಂತೆ ಕಾರ್ಮಿಕರ 15 ಬೇಡಿಕೆಗಳು ಈಡೇರಿಸಬೇಕೆಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಜಮೀನು ವಿಚಾರಕ್ಕೆ ಎರಡು ಕುಟುಂಬಗಳ ಮಧ್ಯೆ ಜಗಳ; ರೈತನ ಕೊಲೆ
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ ತಾಲೂಕಾಧ್ಯಕ್ಷ ರಾಮಚಂದ್ರ, ಕಾರ್ಯದರ್ಶಿ ಸಂಗ್ರಾಮ, ಸಹ ಕಾರ್ಯದರ್ಶಿ ಸುರೇಶ ಜಿಲ್ಲಾ ಉಪಾಧ್ಯಕ್ಷ ಮಹೇಶ ಕಾಟೆ, ಸಹ ಕಾರ್ಯದರ್ಶಿ ದೇವಾನಂದ ಗಾಯಕವಾಡ ಹಾಗೂ ಸಚಿನ ಗುಂಡೆ, ಶಿವರಾಜ, ಬಂಡೆಪ್ಪಾ ಸೇರಿದಂತೆ ಇತರರಿದ್ದರು.