ಮಂಡ್ಯ ಜಿಲ್ಲೆ, ಪಾಂಡವಪುರ ತಾಲ್ಲೂಕು, ಮೇಲುಕೋಟೆ ಹೋಬಳಿ, ಸುಂಕತಣ್ಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿರುವ ಅಲೆಮಾರಿ ಹಕ್ಕಿಪಿಕ್ಕಿ ಸಮುದಾಯದ ಜನರ ಬದುಕು ಅತಂತ್ರವಾಗಿದೆ. ಭವಿಷ್ಯದ ಚಿಂತೆ ಕಾಡ ತೊಡಗಿದೆ. ವಿದ್ಯಾವಂತರಲ್ಲ, ಊರಿಂದ ಊರಿಗೆ ತೆರಳುತ್ತ ಒಂದೆಡೆ ಬದುಕು ಕಟ್ಟಿಕೊಂಡು ಅತಂತ್ರರಾದವರ ಗೋಳಿದು.
1991 ರಲ್ಲಿ ಚಿನಕುರಳಿ ಹೋಬಳಿ ಕಡಬ ಬೋರೆಯಲ್ಲಿ ಗಲಾಟೆಯಾದ ಬಳಿಕ ನಿರಾಶ್ರಿತರಾದ ಸರಿ ಸುಮಾರು 60 ರಿಂದ 65 ಕುಟುಂಬಗಳಿಗೆ ಅಂದರೆ, 250 ರಿಂದ 400 ಜನಸಂಖ್ಯೆಯ ಕುಟುಂಬಗಳಿಗೆ ಅಂದು ದಿವಂಗತ ಕೆ. ಎಸ್. ಪುಟ್ಟಣ್ಣಯ್ಯ ಹಾಗೂ ಎಸ್. ಹೊನ್ನಯ್ಯ ಅವರ ಹೋರಾಟದ ಮೂಲಕ ಮೇಲುಕೋಟೆ ಹೋಬಳಿಯ ಸುಂಕತಣ್ಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅನುವಾಳು ಬೋರೆ ಶಿಕಾರಿಪುರ ಗ್ರಾಮದಲ್ಲಿ ಸರ್ಕಾರದ ವತಿಯಿಂದ ಗೋಮಾಳ ಜಾಗದಲ್ಲಿ ನಿವೇಶನ ಹಾಗೂ ಮನೆಯನ್ನು ಆಶ್ರಯ ಯೋಜನೆಯಡಿ ಕಲ್ಪಿಸಲಾಯಿತು.

ಹಕ್ಕುಪತ್ರ 37 ಕುಟುಂಬಗಳಿಗೆ ಸಿಕ್ಕರೆ, ಇನ್ನುಳಿದ 22 ಕುಟುಂಬಗಳಿಗೆ ಇದುವರೆಗೆ ಸಿಕ್ಕಿಲ್ಲ. ಹಾಗೆಯೇ, 35 ವರ್ಷ ಕಳೆಯುತ್ತಾ ಬಂದರು ಎಲ್ಲರಿಗೂ ಸರ್ಕಾರದ ಯೋಜನೆಯಡಿಯಲ್ಲಿ ಮನೆ ನಿರ್ಮಾಣ ಆಗಿಲ್ಲ. ಅಂದು ಕೆಲವರಿಗೆ ಮನೆಯಾಯಿತು, ಇತ್ತೀಚಿಗೆ ಗ್ರಾಮ ಪಂಚಾಯತಿ ಪಲಾನುಭವಿ ಪಟ್ಟಿ ಮಾಡಿ ಒಂದಷ್ಟು ಜನರಿಗೆ ಮನೆ ಮಾಡಿಕೊಟ್ಟಿದೆ. ಇನ್ನ ಕೆಲವರಿಗೆ ಮನೆ ಆಯ್ಕೆ ಆಗಿದ್ದರು ಕಲ್ಲು ಕಟ್ಟಡ ( ಬೇಸ್ಮೆಂಟ್, ಪೌಂಡೇಷನ್ ) ಮಾಡಲು ಹಣವಿರದೆ. ಜಿಪಿಎಸ್ ಮಾಡಲು ಆಗದ ಪರಿಸ್ಥಿತಿಯಲ್ಲಿ ಮನೆಗಳು ನಿರ್ಮಾಣವಾಗದೆ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಿನಲ್ಲಿಯೇ ಬದುಕುವ ಸ್ಥಿತಿಯಾಗಿದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದೆ ನರಕದ ಬಾಳಾಗಿದೆ.

ಯಾವುದೇ ಭೂಮಿ ಹೊಂದಿರದ ಬಡ ಕುಟುಂಬಗಳು ಊರೂರು ಸುತ್ತಿ ಹಣೆಬೊಟ್ಟು, ಪಿನ್ನ, ತಲೆ ಕೂದಲು, ಪಾತ್ರೆ, ಪ್ಲಾಸ್ಟಿಕ್ ಅಲಂಕಾರಿಕ ಸಾಧನಗಳ ಮಾರಾಟ ಮಾಡಿಕೊಂಡು ಜೀವನ ಸವೆಸುತ್ತಿವೆ. ಪರಿಸ್ಥಿತಿ ಯಾವ ಹಂತಕ್ಕೆ ಇದೇ ಎಂದರೆ ಜೀವನ ನಿರ್ವಹಣೆಗೆ ಹೆಣ್ಣು ಮಕ್ಕಳು ಮಂಡ್ಯ, ಮೈಸೂರು ಕಡೆಗೆ ಚಿಕ್ಕಪುಟ್ಟ ಮಕ್ಕಳೊಂದಿಗೆ ತೆರಳಿ ಭಿಕ್ಷೆ ಬೇಡಿ ಕುಟುಂಬ ನಿರ್ವಹಣೆ
ಮಾಡಬೇಕಾದ ದುಸ್ಥಿತಿ. ಬೇರೇನೂ ಮಾಡಲಾರದ ಪರಿಸ್ಥಿತಿಯಲ್ಲಿದ್ದಾರೆ.

ಜೀವನಕ್ಕಾಗಿ ಇಂತಹ ಕಸರತ್ತು ಮಾಡುವುದರ ಜೊತೆಗೆ ಅಪವಾದಗಳ ಸರಮಾಲೆ. ಸುತ್ತಮುತ್ತಲಿನಲ್ಲಿ ಯಾವುದೇ ಕಳ್ಳತನ ನಡೆದರು ಶಿಕಾರಿಪುರದವರೇ ಮಾಡಿದ್ದಾರೆ ಎನ್ನುವಂತಾಗಿದೆ. ಎಲ್ಲರ ನೋಟ ಬಡ ಕುಟುಂಬಗಳ ಮೇಲೆ. ಗ್ರಾಮದ ದಬ್ಬಾಳಿಕೆಯು ಹೆಚ್ಚಿದೆ. ಸಂಜೆಯಾದರೆ ಕುಡುಕರ ಹಾವಳಿ. ಗುಡಿಸಲ ಬಳಿ ಬರೋದು ನೀರು ಕೇಳೋದು, ಹೆಣ್ಣು ಮಕ್ಕಳನ್ನ ಪೀಡಿಸುವುದು. ಕೊಡಲಿಲ್ಲ ಎಂದರೆ ಗೂಂಡಾವರ್ತನೆ. ಮಾನಸಿಕವಾಗಿ ಹಿಂಸೆ ನೀಡುವಂತಹ ಕೆಲಸಗಳು ನಡೆಯುತ್ತಿವೆ. ಎಲ್ಲಿಂದಲೋ ಬಂದವರು, ನಮ್ಮ ಊರಿನಲ್ಲಿ ನಾವೇಳಿದ್ದು ಕೇಳಬೇಕು ಎನ್ನುವಷ್ಟು ದಬ್ಬಾಳಿಕೆ. ಸ್ಥಳೀಯವಾಗಿ ಕೆಲಸ ಸಿಗುವುದಿಲ್ಲ. ಯಾರು ಕೆಲಸ ಕೊಡುವುದಿಲ್ಲ.

ಸರ್ಕಾರದ ಯೋಜನೆಗಳು ಗೃಹಲಕ್ಷ್ಮಿ ಯೋಜನೆಯಿಂದ ಹಿಡಿದು ಅನ್ನಭಾಗ್ಯವರೆಗೆ ಸರಿಯಾಗಿ ತಲುಪುತಿಲ್ಲ. ಆಧಾರ್, ಮತದಾನದ ಗುರುತಿನ ಚೀಟಿ, ದಾಖಲೆಗಳು ಇದ್ದರೂ ಸಹ ಪಡಿತರ ಚೀಟಿ ರದ್ದಾಗಿವೆ, ಕೆಲವರದ್ದು ಲಾಕ್ ಆಗಿದೆ. ವೃದ್ದಾಪ್ಯ, ವಿಧವಾ ವೇತನ ಸಿಗುತ್ತಿಲ್ಲ. ಆನ್ಲೈನ್ ಮೂಲಕ ಸಲ್ಲಿಸಿದರೆ ಸಬಂಧಪಟ್ಟ ಅಧಿಕಾರಿಗಳು ರಿಜೆಕ್ಟ್ ಮಾಡುತ್ತಿದ್ದಾರೆ. ಚಿಕ್ಕ ಮಕ್ಕಳಿಗೆ ಆಧಾರ್ ಮಾಡಿಸಲಾಗದೆ ಶಾಲೆಗೆ ಸೇರಿಸಲು ಸಾಧ್ಯವಾಗದ ಪರಿಸ್ಥಿತಿಯು ಸ್ಥಳೀಯವಾಗಿ ಕಾಣಬಹುದು.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೂರು ದಿನಗಳ ಕೆಲಸ ನೀಡುವ ‘ ನರೇಗಾ ‘ ಯೋಜನೆ ಜಾಬ್ ಕಾರ್ಡ್ ಹಲವರಲ್ಲಿ ಇದೇ. ಆದರೇ, ಯಾರಿಂದಲೂ ಕೆಲಸ ಮಾಡಿಸಿಲ್ಲ. ಜೊತೆಗೆ ಯಾರಿಗೂ ಇದುವರಿಗೆ ನಯಾಪೈಸೆ ಬ್ಯಾಂಕ್ ಖಾತೆಗೆ ಪಾವತಿಯಾಗಿಲ್ಲ. ಎಲ್ಲಿಂದಲೋ ಬರೋದು, ಯಾರ್ಯೋರೊ ಬರೋದು ಕೆಲಸ ಮಾಡುತ್ತಿರುವ ಹಾಗೆ ಫೋಟೋ ತೆಗೆದು ನರೇಗಾ ಹಣ ಲಪಾಟಾಯಿಸುವ ಕೆಲಸ ಆಗುತ್ತಿದೆ ಎನ್ನುವ ಗಂಭೀರ ಆರೋಪವಿದೆ. ಸ್ಥಳೀಯರಿಗೆ ಉದ್ಯೋಗ ಭದ್ರತೆ ಇಲ್ಲ.
ವರ್ಷಕ್ಕೆ ಸೀಮಿತವಾಗಿ ಒಂದಷ್ಟು ವ್ಯಾಪಾರ ಮಾಡುತ್ತಾರೆ ಆಯಾ ಸೀಸನ್ ಪ್ರಕಾರವಾಗಿ. ಅದು ಬಿಟ್ಟರೆ ಉಳಿದೆಲ್ಲಾ ಸಮಯ ನಿರುದ್ಯೋಗಿ ಬದುಕು. ಸ್ಥಿತಿವಂತರಲ್ಲ, ಭೂಮಿಯಿಲ್ಲ. ಇನ್ನ ಬದುಕುವುದು ಹೇಗೆ? ಎಂಬ ಪ್ರಶ್ನೆ. ಒಂದೆಡೆಯಿಂದ ಇನ್ನೊಂದೆಡೆಗೆ ತೆರಳಿ ಜೀವನ ನಡೆಸುತ್ತಿದ್ದವರಿಗೆ ಒಂದು ಕಡೆ ನೆಲೆ ಸಿಕ್ಕಿದೆ. ಆದರೇ, ಉಳುಮೆ ಮಾಡಿ ಸ್ವಂತ ಶಕ್ತಿಯಿಂದ ಸ್ವಾವಲಂಬಿ ಬದುಕು ಕಾಣಲು ಒಬ್ಬರಿಗೂ ಭೂಮಿಯಿಲ್ಲ. ಬೇರೆ ಇನ್ನೇನಾದರೂ ಮಾಡಲು ಸಾಧ್ಯವಿಲ್ಲ. ಒಂದು ಕಡೆ ಆರ್ಥಿಕವಾಗಿ ಸಂಕಷ್ಟ, ಇನ್ನೊಂದು ಕಡೆ ಭೂಮಿ ಇಲ್ಲದಿರುವುದು.

ಸರ್ವೇ ನಂಬರ್ 79 ರಲ್ಲಿ 255 ಎಕರೆ ಸರ್ಕಾರಿ ಗೋಮಾಳ ಇತ್ತು. ಈಗ ಅದೇ ಸರ್ವೇ ನಂಬರಿನಲ್ಲಿ ಒತ್ತುವರಿಯಾಗಿ 116 ಎಕರೆಗೆ ಬಂದು ನಿಂತಿದೆ. ಸದರಿ ಸರ್ಕಾರಿ ಭೂಮಿಯಲ್ಲಿ ನಮಗೂ ಬದುಕಲು ಒಂದಷ್ಟು ಭೂಮಿ ಕೊಡಿ. ಪ್ರತಿ ಕುಟುಂಬ ಅನುಸಾರ ಒಂದೆರಡು ಎಕರೆ ಭೂಮಿ ಕೊಟ್ಟರೆ, ಅಲ್ಲಿ ಇಲ್ಲಿ ಹೋಗುವ ಪ್ರಮೇಯ ಇರುವುದಿಲ್ಲ. ಕಷ್ಟಪಟ್ಟು ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತೇವೆ. ಬದುಕು ಕಟ್ಟಿಕೊಳ್ಳಲು, ಜಾನುವಾರು, ಆಡು, ಕುರಿ ಸಾಕಲು ಅನುಕೂಲವಾಗುತ್ತದೆ ಎನ್ನುವುದು ಸ್ಥಳೀಯರ ಬಹುದಿನದ ಬೇಡಿಕೆ.

ಈ ವಿಚಾರವಾಗಿ ಹಲವಾರು ವರ್ಷಗಳಿಂದ ಸಂಭಂದಪಟ್ಟ ಇಲಾಖೆಗಳಿಗೆ ಅರ್ಜಿ ಕೊಡುವುದೇ ಆಯಿತು ವಿನಃ. ಯಾವುದೇ, ಸೂಕ್ತ ಸ್ಪಂದನೆ ಇಲ್ಲ. ಸರ್ಕಾರಿ ಗೋಮಾಳ ಭೂಮಿಯನ್ನು ಉಳ್ಳವರು ಸುತ್ತಮುತ್ತಲಿನಲ್ಲಿ ಒತ್ತುವರಿ ಮಾಡಿಕೊಂಡರು ಕೇಳದ ತಾಲ್ಲೂಕು ಆಡಳಿತ. ಕಡು ಬಡತನದ ಕುಟುಂಬಗಳಿಗೆ ನೆರವಾಗುವಂತೆ ಭೂಮಿ ಕೊಡುತ್ತಿಲ್ಲ. ಗ್ರಾಮ ಪಂಚಾಯತಿ ವ್ಯಾಪ್ತಿಯಿಂದ ನರೇಗಾ, ವರ್ಕ್ ಶೆಡ್ ಆಧಾರಿತವಾಗಿ ಕಸುಬುಗಳಿಗೆ ಉದ್ಯೋಗ ಸೃಷ್ಟಿ ಯಾವುದು ಸಿಗುತ್ತಿಲ್ಲ. ಹೀಗೆ ಆದರೇ ಮುಂದಿನ ಬದುಕು, ಚಿಕ್ಕ ಮಕ್ಕಳ ಓದು, ಭವಿಷ್ಯದಲ್ಲಿ ಏನಾಗುವುದೋ ಎನ್ನುವ ಅತಂತ್ರ ಸ್ಥಿತಿ ಇವರುಗಳದ್ದು.

ಸ್ಥಳೀಯ ಶಶಿಕುಮಾರ್ ಈದಿನ.ಕಾಮ್ ಜೊತೆ ಮಾತನಾಡಿ ” ಶಿಕಾರಿಪುರ ಗ್ರಾಮದಲ್ಲಿ ಯಾರೊಬ್ಬರಿಗೂ ಭೂಮಿಯಿಲ್ಲ. ಭೂಮಿಗಾಗಿ ಹಿಂದಿನವರಿಂದ ಹಿಡಿದು ನಾವುಗಳು ಸಹ ಎಲ್ಲರಿಗೂ ಮನವಿ ಕೊಡುವುದು, ಅರ್ಜಿ ಕೊಡುವುದು ಮಾಡುತ್ತಲೇ ಬಂದಿದ್ದೀವಿ. ಆದರೇ, ಯಾರು ನಮ್ಮಗಳ ಬೆಂಬಲಕ್ಕೆ ಇಲ್ಲದ ಕಾರಣ, ನಾವುಗಳು ಯಾವುದನ್ನೂ ಪಡೆದುಕೊಳ್ಳಲು ಆಗಿಲ್ಲ. ನಮ್ಮಲ್ಲಿ ಇರುವವರೆಲ್ಲ ಊರೂರು ಸುತ್ತಿ ದಿನದ ಸಂಪಾದನೆಯಲ್ಲಿ ಬದುಕುವವರು. ಇದನ್ನ ಬಿಟ್ಟರೆ ಬೇರೆ ಇನ್ಯಾವ ವೃತ್ತಿ ಗೊತ್ತಿಲ್ಲ. ಒಂದು ಕಡೆ ಇದ್ದು ಏನಾದರೂ ಮಾಡೋಣ ಎಂದರೆ ಭೂಮಿಯಿಲ್ಲ. ಸರ್ಕಾರ, ಜಿಲ್ಲಾಡಳಿತ, ತಾಲ್ಲೂಕು ಆಡಳಿತ ನಮ್ಮ ಕಡೆ ಗಮನ ಹರಿಸಿ. ಈಗಿರುವ ಸರ್ಕಾರಿ ಭೂಮಿಯಲ್ಲಿ ನಮ್ಮಗಳಿಗೆ ಭೂಮಿ ಕೊಡಬೇಕು ” ಎಂದು ಮನವಿ ಮಾಡಿದರು.

ಗ್ರಾಮದ ನಿವಾಸಿ ಪೂಜಾ ಮಾತನಾಡಿ ” ಶಿಕಾರಿಪುರದಲ್ಲಿ ಯಾವುದೇ ಮೂಲ ಸೌಕರ್ಯ ಇಲ್ಲ. ಚರಂಡಿ ಗಬ್ಬು ನಾರುತ್ತಿವೆ. ಗ್ರಾಮ ಪಂಚಾಯತಿ ಕಡೆಯಿಂದ ಸ್ವಚ್ಛತಾ ಕಾರ್ಯ ಮಾಡೋರು ಇಲ್ಲ. ಗುಡಿಸಲು ಸುತ್ತಮುತ್ತ ಗಿಡಗಂಟೆಗಳು ಬೆಳೆದುಕೊಂಡು ಹಾವುಗಳ ವಾಸ ಸ್ಥಾನವಾಗಿದೆ. ಓಡಾಡಲು ಸಾಧ್ಯವಿಲ್ಲ. ಕಸ ವಿಲೇ ಆಗದೆ ಇರುವುದರಿಂದ ಅಲ್ಲಲ್ಲಿಯೇ ಕಸದ ರಾಶಿ. ಮಳೆಗೆ ಅಲ್ಲಿಯೇ ಕೊಳೆತು ವಿಪರೀತ ಸೊಳ್ಳೆಕಾಟ. ಇಂತಹ ಪರಿಸ್ಥಿತಿಯಲ್ಲಿ ಇದ್ದೀವಿ. ನಮಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಗೃಹಲಕ್ಷ್ಮಿ ಹಣ ಬರುತ್ತಿಲ್ಲ. ಪಡಿತರ ಚೀಟಿಯಲ್ಲಿ ರೇಷನ್ ಸಿಗುತ್ತಿಲ್ಲ ಲಾಕ್ ಆಗಿದೆ. ಇಷ್ಟೆಲ್ಲಾ ಕಷ್ಟದ ನಡುವೆ ನಾವುಗಳು ಬದುಕುವುದು ಹೇಗೆ? ” ಎಂದರು.
ದಾನಮ್ಮ ಮಾತನಾಡಿ ” ನಮ್ಮೂರಲ್ಲಿ ಭೂಮಿ ಹೋಗಲಿ ಸತ್ತವರಿಗೆ ಸ್ಮಶಾನ ಕೂಡ ಇಲ್ಲ. ಸತ್ತವರನ್ನು ಸರ್ಕಾರಿ ಜಾಗದಲ್ಲಿ, ಕಾಡಿನ ಪ್ರದೇಶದಲ್ಲಿ ಹೂಳುತ್ತೀವಿ. ಅದನ್ನ ಅರಣ್ಯ ಇಲಾಖೆಯವರು ಅಗೆದು, ಬಗೆದು ಅಲ್ಲಿ ನಮ್ಮವರ ಗುರುತೆ ಇರದಂತೆ ಮಾಡುತ್ತಾರೆ. ಇನ್ನ ಕೇಳಿದರೆ ಇದು ಅರಣ್ಯ ಪ್ರದೇಶಕ್ಕೆ ಸೇರಿದ್ದು ಎನ್ನುತ್ತಾರೆ. ಹೀಗಿರುವಾಗ, ನಮ್ಮ ಕುಟುಂಬದವರು ಸತ್ತರೆ ಅವರ ನಡುವಿನ ಕುರುಹು, ಬಾವನಾತ್ಮಕ ಸಂಭಂದಗಳು ಸಹ ಕಡೆದುಹೋಗುತ್ತಿವೆ. ನಮಗೆ ಬದುಕಲು ಅಲ್ಪಸ್ವಲ್ಪ ಭೂಮಿ, ಊರಿಗೊಂದು ಸ್ಮಶಾನ ಕಲ್ಪಿಸಿದರೆ ಅನುಕೂಲವಾಗುತ್ತದೆ ” ಎಂದರು.

ಗ್ರಾಮ ಪಂಚಾಯತಿ ಸದಸ್ಯರಾದ ಕನ್ಯಮ್ಮ ಮಾತನಾಡಿ ” ಗ್ರಾಮ ಪಂಚಾಯತಿ ಸದಸ್ಯೆಯಾಗಿ ನಮ್ಮೂರಿಗೆ ಸಿಗಬೇಕಾದ ಸವಲತ್ತು ತರಲು ಸಾಧ್ಯವಾಗಿಲ್ಲ. ಯಾವುದೇ ಯೋಜನೆ ಬಂದರು ಅಲ್ಲಿಂದ, ಅಲ್ಲಿಗೆ ಆಗುತ್ತದೆ ಹೊರತು ನಮ್ಮವರಿಗೆ ತಲುಪುವುದಿಲ್ಲ.
ಗ್ರಾಮ ಪಂಚಾಯತಿ ಪ್ರವಾಸಕ್ಕೆ ಮಾತ್ರ ಸರಿಯಾಗಿ ಕರೆದುಕೊಂಡು ಹೋಗುತ್ತಾರೆ. ಕರೆದುಕೊಂಡು ಬಂದು ಬಿಡುತ್ತಾರೆ. ಇನ್ನ ಚುನಾವಣೆ ಸಮಯದಲ್ಲಿ ಒಂದು ತಿಂಗಳು ಯಾರಿಗೂ ಕಾಣದಂತೆ ಭದ್ರವಾಗಿ ನೋಡಿಕೊಳ್ಳುವುದು. ಗ್ರಾಮ ಪಂಚಾಯತಿ ನಡಾವಳಿಗಳಿಗೆ ಸಹಿ ಪಡೆಯುವುದು ಬಿಟ್ಟರೆ ಗ್ರಾಮದ ವಿಚಾರವಾಗಿ ಯಾವ ಕೆಲಸವು ಆಗುತ್ತಿಲ್ಲ. ನಾನೇ ನನ್ನ ಸ್ವಂತ ಹಣದಲ್ಲಿ ಶೌಚಾಲಯ ಕಟ್ಟಿಸಿ ಅದರ ಬಿಲ್ ಪಡೆಯಲು ಆಗಿಲ್ಲ. ಅದನ್ನ ಪೂರ್ಣಗೊಳಿಸಲು ಆಗದೆ ಕೈಬಿಟ್ಟಿದ್ದೇನೆ. ನಮ್ಮೂರಲ್ಲಿ ಜನ ಇರೋದು ಚುನಾವಣೆ ಸಮಯಕ್ಕೆ ಮತ ಹಾಕಲು ಅಷ್ಟೇ. ಇನ್ನೇನು ಕೆಲಸವು ಆಗೋದಿಲ್ಲ. ಸ್ವಚ್ಛತೆ ವಿಚಾರ ಕೇಳಬೇಡಿ. ಯಾವುದೇ
ಸವಲತ್ತು ನಮ್ಮ ಊರಿಗೆ ಸಿಗುವುದಿಲ್ಲ ” ಎಂದು ಬೇಸರ ವ್ಯಕ್ತಪಡಿಸಿದರು.

ರುಕ್ಕು ಮಾತನಾಡಿ ” ಶಿಕಾರಿಪುರದಲ್ಲಿ ಕುಡಿಯುವ ನೀರಿಗೆ ವಾಟರ್ ಟ್ಯಾಂಕ್ ಬಿಟ್ಟರೆ ನಲ್ಲಿ ವ್ಯವಸ್ಥೆ ಇಲ್ಲ. ನೀರು ಎರಡು ಮೂರು ದಿನಕ್ಕೊಮ್ಮೆ ಬಿಡುತ್ತಾರೆ. ಜೆಜೆಎಂ ಯೋಜನೆ ನಮ್ಮ ಊರಿಗೆ ಬಂದಿಲ್ಲ. ನಮಗೆ ಕುಡಿಯಲು, ದೈನಂದಿನ ಬಳಕೆಗೆ ನೀರಿನ ಸಮಸ್ಯೆಯಿದೆ. ನಮ್ಮೂರಲ್ಲಿ ಶಾಲೆಯಿದ್ದರು ಸರಿಯಾದ ಪಾಠ ಇರದೆ ನಮ್ಮ ಮಕ್ಕಳನ್ನೆಲ್ಲ ಸುಂಕತಣ್ಣೂರು ಸರ್ಕಾರಿ ಶಾಲೆಗೆ ಕಳಿಸುತಿದ್ದೇವೆ. ಊರಲ್ಲಿರುವ ಶಾಲೆಯಲ್ಲಿ ಸರಿಯಾಗಿ ಪಾಠ ನಡೆಯುತ್ತಿಲ್ಲ. ಅದನ್ನು ಕೇಳುವವರು ಇಲ್ಲ ” ಎಂದು ಹೇಳಿದರು.

ಈದಿನ.ಕಾಮ್ ವರದಿಗಾರ ಕುಡಿಯುವ ನೀರಿನ ಬಗ್ಗೆ ಕೇಳಿದ ಪ್ರತಿಕ್ರಿಯೆಗೆ ಗ್ರಾಮ ಪಂಚಾಯತಿ ಪಿಡಿಓ ಮಹಾದೇವರವರು ಮಾತನಾಡಿ ” ಶಿಕಾರಿಪುರದಲ್ಲಿ ಜೆಜೆಎಂ ಯೋಜನೆಯಲ್ಲಿ ನಲ್ಲಿ ಸಂಪರ್ಕ ಒದಗಿಸಿಲ್ಲ. ಆದರೇ, ದಿನಾಂಕ-05-03-2025 ರಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಪಾಂಡವಪುರ ಇವರಿಗೆ ಸುಂಕತಣ್ಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜೆಜೆಎಂ ಯೋಜನೆಯಡಿ ನಿರ್ವಹಿಸಬೇಕಿರುವ ಸ್ಥಳಗಳ ವಿವರಗಳ ಕ್ರಿಯಾಯೋಜನೆ ಪಟ್ಟಿ ಸಲ್ಲಿಸಿರುವ ಮಾಹಿತಿಯುಳ್ಳ ಪತ್ರವನ್ನು ರವಾನಿಸಿರುವ ಬಗ್ಗೆ ಮಾಹಿತಿ ನೀಡಿರುತ್ತಾರೆ. ಮೇಲಾಧಿಕಾರಿಗಳಿಂದ ಆದೇಶ ಬಂದಲ್ಲಿ ಶೀಘ್ರವೇ ಜೆಜೆಎಂ ಯೋಜನೆಯಡಿಯಲ್ಲಿ ನಲ್ಲಿ ಸಂಪರ್ಕ ಕಲ್ಪಿಸುವುದಾಗಿ ” ಹೇಳಿದ್ದಾರೆ.
ಇದೇ ಜುಲೈ. 25 ರಂದು ಸುಂಕತಣ್ಣೂರು ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕರಾದ ದರ್ಶನ್ ಪುಟ್ಟಣಯ್ಯ ಅವರನ್ನು ಶಿಕಾರಿಪುರ ಗ್ರಾಮಸ್ಥರು ಭೇಟಿ ನೀಡಿ ತಮ್ಮೂರಿನ ಸಮಸ್ಯೆಗಳು, ಸ್ಮಶಾನ ಹಾಗೂ ಸ್ವಾವಲಂಬಿ ಬದುಕಿಗಾಗಿ ಸರ್ಕಾರಿ ಭೂಮಿಯನ್ನು ಪ್ರತಿಯೊಂದು ಕುಟುಂಬಗಳಿಗೆ ಕೊಡಿಸಿಕೊಡುವಂತೆ ಮನವಿ ಮಾಡಿರುತ್ತಾರೆ.

ಶಾಸಕರಾದ ದರ್ಶನ್ ಪುಟ್ಟಣಯ್ಯ ಮಾತನಾಡಿ ” ಶಿಕಾರಿಪುರ ಗ್ರಾಮಕ್ಕೆ ಅಗತ್ಯವಿರುವ ಸವಲತ್ತುಗಳನ್ನು ಕಲ್ಪಿಸಿಕೊಡುವುದರ ಬಗ್ಗೆ ಗ್ರಾಮ ಪಂಚಾಯತಿ, ಸಂಬಂಧಪಟ್ಟ ಇಲಾಖೆಯವರಿಗೆ ಸೂಚಿಸುವುದಾಗಿ ಹೇಳಿದ್ದಾರೆ. ಗ್ರಾಮದ ಕುಡಿಯುವ ನೀರು ಹಾಗೂ ಸ್ಮಶಾನ ವಿಚಾರವಾಗಿ ಗ್ರಾಮ ಪಂಚಾಯತಿ ಪಿಡಿಓ ಅವರಿಗೆ ಸೂಕ್ತ ಕ್ರಮ ವಹಿಸುವಂತೆ ತಿಳಿಸಲಾಗುವುದು. ಭೂಮಿ ವಿಚಾರ ಕಂದಾಯ ಇಲಾಖೆ, ಸರ್ಕಾರದ ಮಟ್ಟಿಗೆ ಇರುವ ವಿಚಾರವಾಗಿರುವುದರಿಂದ ಮುಂದಿನ ದಿನಗಳಲ್ಲಿ ಸಾಧಕಭಾಧಕಗಳ ಕುರಿತಾಗಿ ಗಮನ ಹರಿಸುವ ನಿಟ್ಟಿನಲ್ಲಿ ” ಭರವಸೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಹೇಮಾವತಿ ನಾಲೆ ಅಕ್ರಮ; ಸರ್ಕಾರಿ ಗೋಮಾಳ ಒತ್ತುವರಿ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ
ಶಿಕಾರಿಪುರ ಅಲೆಮಾರಿ ಹಕ್ಕಿಪಿಕ್ಕಿ ಸಮುದಾಯದ ಜನರಿಗೆ ಸರ್ಕಾರ, ಜಿಲ್ಲಾಡಳಿತ, ತಾಲ್ಲೂಕು ಆಡಳಿತ,
ಗ್ರಾಮಾಡಳಿತ ನ್ಯಾಯ ಒದಗಿಸುವುದೇ ಕಾದು ನೋಡಬೇಕಿದೆ.