ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜೀಮ್ಸ್) ಹಾಗೂ ಇದೇ ಕಟ್ಟದಲ್ಲಿರುವ ಜಯದೇವ ಆಸ್ಪತ್ರೆಯಲ್ಲಿ ನೀರಿನ ಕೊರತೆಯಿಂದ ರೋಗಿಗಳು ಪರದಾಡುತ್ತಿದ್ದು, ಕೂಡಲೇ ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಜೀಮ್ಸ್ ಆಸ್ಪತ್ರೆ ಎದುರುಗಡೆ ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪಾ ಮಮಶೆಟ್ಟಿ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಆಸ್ಪತ್ರೆಯ ನಿರ್ದೇಶಕರಿಗೆ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ʼಗ್ರಾಮೀಣ ಭಾಗದ ರೈತರು, ಕಾರ್ಮಿಕರು, ಮಹಿಳೆಯರು ಚಿಕಿತ್ಸೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಗರದ ಜಿಮ್ಸ್‌ನಲ್ಲಿ ರೋಗಿಗಳಿಗೆ ಕನಿಷ್ಠ ಕುಡಿಯುವ ನೀರು ಒದಗಿಸುವಲ್ಲಿ ಸಂಸ್ಥೆ ವಿಫಲವಾಗಿದೆ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳು ಹೊರಗಡೆ ಕುಡಿಯುವ ನೀರಿನ ಬಾಟಲ್ ಖರೀದಿಸುವುದು ಸಾಮಾನ್ಯವಾಗಿದೆ. ಹಣವಿಲ್ಲದ ಬಡ ರೋಗಿಗಳು ನೀರಿಗಾಗಿ ಪರದಾಡುತ್ತಿದ್ದಾರೆ” ಎಂದು ಹೇಳಿದರು.
ʼತೀವ್ರ ನೀರಿನ ಕೊರತೆ ಇರುವ ಕಾರಣದಿಂದ ಆಸ್ಪತ್ರೆಯ ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ. ಶೌಚಾಲಯ ಬಳಕೆಗಾಗಿ ರೋಗಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳ ಮಧ್ಯೆ ದಿನನಿತ್ಯ ಜಗಳ ನಡೆಯುತ್ತಿವೆ. ಇಂತಹ ಅವ್ಯವಸ್ಥೆಯಿಂದ ಬೇಸತ್ತ ರೋಗಿಗಳು ಆಸ್ಪತ್ರೆಯ ಮುಖ್ಯಸ್ಥರಿಗೆ ಹಿಡಿಶಾಪ ಹಾಕುತ್ತಿದ್ದಾರೆʼ ಎಂದು ನುಡಿದರು.
ʼಜಿಲ್ಲಾ ಆಸ್ಪತ್ರೆಯಲ್ಲಿ ನೀರಿನ ಕೊರತೆಗೆ ಕಾರಣವೇನು ಎಂಬುದರ ಬಗ್ಗೆ ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಮಾನವೀಯತೆ ಹಿತದೃಷ್ಟಿಯಿಂದ ಆಸ್ಪತ್ರೆಯ ಒಳ ಹಾಗೂ ಹೊರ ರೋಗಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕುʼ ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು
ಪ್ರತಿಭಟನೆಯಲ್ಲಿ ಕೆಪಿಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ಸಾಯಬಣ್ಣ ಗುಡುಬಾ ಸೇರಿದಂತೆ ಸಂಘಟನೆಯ ಪ್ರಮುಖರಾದ ಅಲ್ತಾಫ್ ಇನಾಮಂದಾರ್, ದಿಲೀಪ್ ನಾಗೂರೆ, ಪ್ರಕಾಶ ಜಾನೆ, ಪರಮೇಶ್ವರ ಕಾಂತಾ, ಜಾಫರ್ ಖಾನ್, ರೆವಣಸಿದ್ದಪ್ಪಾ ಗೌಡರು ಹಾಗೂ ಇತರರಿದ್ದರು.