- ಬಿಟ್ಟಿಭಾಗ್ಯಗಳಿಂದ ಕಾಂಗ್ರೆಸ್ ನೇತ್ರತ್ವದ ರಾಜ್ಯ ಸರ್ಕಾರ ಜನರ ಹಾದಿ ತಪ್ಪಿಸುತ್ತಿದೆ
- ಬರಗಾಲ ಘೋಷಿಸಿ ರೈತರಿಗೆ ನೆರವಾಗಲು ವಿಶೇಷ ಅನುದಾನ ಬಿಡುಗಡೆ ಮಾಡಬೇಕು.
ರಾಜ್ಯದಲ್ಲಿ ತೀವ್ರವಾದ ಬರಗಾಲ ತಾಂಡವವಾಡುತ್ತಿದೆ. ಇಂಥ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ದಾವಿಸಬೇಕಿದ್ದ ಸರ್ಕಾರ ಸಂಪೂರ್ಣ ಬೇಜವಾಬ್ದಾರಿಯಿಂದ ಭ್ರಷ್ಟಾಚಾರದಲ್ಲಿ ಮುಳುಗಿದೆ. ರಾಜ್ಯದಲ್ಲಿ ಮಳೆಯ ಕೊರತೆಯಿಂದ ರೈತ ಸಂಕಷ್ಟದಲ್ಲಿದ್ದಾನೆ ಎಂದು ಬಿಜೆಪಿ ಶಾಸಕ ಎಮ್.ಆರ್.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಕುಂದಗೋಳ ತಾಲೂಕು ಬಿಜೆಪಿ ರೈತ ಮೋರ್ಚಾ ವತಿಯಿಂದ ಪಟ್ಟಣದ ಗಾಳಿ ಮರೆಮ್ಮ ದೇವಸ್ಥಾನದಿಂದ ತಹಶೀಲ್ ಕಚೇರಿವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಅವರು ಮಾತನಾಡಿದರು. “ಈ ನಡುವೆ ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದ ಕೃಷಿಕರು ಹೈರಾಣಾಗಿದ್ದಾರೆ. ಅಳಿದುಳಿದ ಬೆಳೆಗಳನ್ನು ಉಳಿಸಿಕೊಳ್ಳಲು ಪಂಪ್ ಸೆಟ್ ಗಳಿಗೆ ವಿದ್ಯುತ್ ಇಲ್ಲದೇ ರೈತ ಸಂಕಷ್ಟ ಅನುಭವಿಸುವಂತಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರ ಆಡಳಿತದಲ್ಲಿದ ಅವಧಿಯಲ್ಲಿ ರೈತರಿಗಾಗಿ ಜಾರಿಗೊಳಿಸಿದ ಕಿಸಾನ್ ಸಮ್ಮಾನ್ ನಿಧಿ, ರೈತ ವಿದ್ಯಾನಿಧಿ, ಭೂ ಸಿರಿ, ಶ್ರಮ ಶಕ್ತಿ, ರೈತ ಸಂಪದ ಸೇರಿದಂತೆ ಇನ್ನಿತರ ಯೋಜನೆಗಳನ್ನು ರಾಜ್ಯ ಸರ್ಕಾರ ರದ್ದುಪಡಿಸಿ ರೈತರಿಗೆ ಅನ್ಯಾಯ ಮಾಡಿದೆ. ಕಾಂಗ್ರೆಸ್ ಬಿಟ್ಟಿಭಾಗ್ಯಗಳನ್ನು ಕೊಟ್ಟು ಜನರನ್ನು ಹಾದಿತಪ್ಪಿಸುತ್ತಿದೆ” ಎಂದು ಕಿಡಿಕಾರಿದರು.
“ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯಿಂದ ರೈತನ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೂಡಲೇ ರಾಜ್ಯ ಸರ್ಕಾರ ಬರಗಾಲ ಘೋಷಣೆ ಮಾಡಬೇಕು, ರೈತರಿಗೆ ನೆರವಾಗಲು ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು” ಒತ್ತಾಯಿಸಿದರು.
ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಸೆ.14ರಂದು ಕುಂದಗೋಳ ಬಂದ್‌ಗೆ ರೈತ ಸಂಘ ಕರೆ
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಾಘವೇಂದ್ರಗೌಡ ಪಾಟೀಲ್, ಮಂಡಲ ಅಧ್ಯಕ್ಷ ರವಿಗೌಡ ಪಾಟೀಲ್, ತಾಲೂಕ ರೈತ ಮೋರ್ಚಾ ಅಧ್ಯಕ್ಷ ಚನ್ನಪ್ಪ ಹರಕುಣಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು ,ಮುಖಂಡರು ಕಾರ್ಯಕರ್ತರು, ರೈತರು ಉಪಸಿತರಿದ್ದರು.