ಹಿಂದೂ ಧರ್ಮಕ್ಕೂ ಹಿಂದುತ್ವಕ್ಕೂ ಯಾವುದೇ ಸಂಬಂಧ ಇಲ್ಲ. ಹಿಂದುತ್ವವು ಸಂಘಪರಿವಾರದ ಸುಳ್ಳು, ಹಿಂಸೆಗಳನ್ನು ಒಳಗೊಂಡ ರಾಜಕೀಯ ಅಜೆಂಡಾ ಮಾತ್ರ. ತನ್ನ ರಾಜಕೀಯ ಉದ್ದೇಶವನ್ನು ಸಾಧಿಸಲು ಅದು ಮುಸ್ಲಿಮರನ್ನು ಗುರಿಯಾಗಿಸುತ್ತಿದೆ. ಆ ಮೂಲಕ ಹಿಂದೂಗಳಲ್ಲಿ ಭಯ ಮೂಡಿಸಿ ತನ್ನ ಹಿಂದುತ್ವದ ಜಾಲದೊಳಗಡೆ ಕೆಡವುವ ಕೆಲಸ ಮಾಡುತ್ತಿದೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಡಾ ಕೆ.ಪ್ರಕಾಶ್ ಆರೋಪಿಸಿದರು.

ಅವರು ಸೋಮವಾರ ಮಂಗಳೂರಿನ ಕ್ಲಾಕ್ ಟವರ್ ಬಳಿ ನಡೆದ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿ, “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಮತೀಯ ದ್ವೇಷದ ಕೊಲೆ, ಪ್ರತಿಕೊಲೆಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಮೂರು ದಶಕದ ಅವಧಿಯಲ್ಲಿ ನಡೆದಿರುವ ಕೋಮುವಾದಿ ಕೊಲೆಗಳನ್ನು ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಒಳಪಡಿಸಲು ಒತ್ತಾಯಿಸಿದರು. ಜಿಲ್ಲೆಯಲ್ಲಿ ಮತೀಯ ದ್ವೇಷದ ಸರಣಿ ಕೊಲೆಗಳು ನಡೆಯಲು ಪೊಲೀಸ್ ಅಧಿಕಾರಿಗಳ ಬೇಜವಾಬ್ದಾರಿತನ, ಕೋಮುವಾದಿ ಶಕ್ತಿಗಳ ಜತೆಗಿನ ಒಡನಾಟವೇ ನೇರ ಕಾರಣ. ಸಿಪಿಐಎಂ ಪಕ್ಷದ ಎಚ್ಚರಿಕೆಯನ್ನು ಜಿಲ್ಲೆಯ ಕಾಂಗ್ರೆಸ್ ನಾಯಕತ್ವ ಅಂದು ನಿರ್ಲಕ್ಷಿಸಿತು. ಪೊಲೀಸ್ ಕಮಿಷನರ್ ಅಗ್ರವಾಲ್ ರನ್ನು ಆರೋಪಗಳ ಹೊರತಾಗಿ ರಕ್ಷಿಸಿತು. ಅದರ ಪರಿಣಾಮ ಅಮಾಯಕರು ಕೊಲೆಗೀಡಾಗುವಂತಾಯ್ತು. ಈಗಲಾದರು ಕಾಂಗ್ರೆಸ್ ನಾಯಕತ್ವ ಎಚ್ಚೆತ್ತುಕೊಳ್ಳಲಿ, ನೂತನ ಪೊಲೀಸ್ ಅಧಿಕಾರಿಗಳು ಹಾಗೂ ಕೋಮುವಾದಿ ವಿರೋಧಿ ಪಡೆಗೆ ಬಲತುಂಬುವ ಕೆಲಸ ಮಾಡಲಿ” ಎಂದು ಹೇಳಿದರು.

ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿ, “ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಕೋಮು ದ್ವೇಷದ ಕೊಲೆ, ಪ್ರತಿಕೊಲೆಗಳು ಕನಿಷ್ಠ ಹತ್ತು ನಡೆದಿವೆ. ಬಹುತೇಕ ಪ್ರಕರಣಗಳ ಆರೋಪಿಗಳು ವರ್ಷದ ಒಳಗಡೆ ಜಾಮೀನು ಪಡೆದು ರಾಜೋರೋಷವಾಗಿ ತಿರುಗಾಡುತ್ತಿದ್ದಾರೆ. ಕಳೆದ ಮೂರು ದಶಕದ ಅವಧಿಯಲ್ಲಿ ಇಂತಹ ಕನಿಷ್ಟ ಮೂವತ್ತಕ್ಕೂ ಹೆಚ್ಚು ಕೊಲೆಗಳು ಇಲ್ಲಿ ನಡೆದಿವೆ. ಇವರಿಗೆ ರಾಜಕೀಯ ಆಶ್ರಯ ನೀಡುವವರು ಯಾರು ? ಈ ಕೊಲೆಗಳ ಹಿಂದಿನ ಪಿತೂರಿ ದಾರರು ಯಾರು, ರಾಜಕೀಯ ಫಲಾನುಭವಿಗಳು ಯಾರು? ಎಂಬುದು ಬಯಲಾಗಬೇಕಿದೆ. ಇದರ ಸತ್ಯಗಳು ಜನತೆಯ ಅರಿವಿಗೆ ಬರಬೇಕಾಗಿದೆ” ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕೆ.ಯಾದವ ಶೆಟ್ಟಿ, ದೇವಿ ಮಂಡ್ಯ, ಸುನಿಲ್ ಕುಮಾರ್ ಬಜಾಲ್, ಕೃಷ್ಣಪ್ಪ ಕೊಂಚಾಡಿ, ಸುಕುಮಾರ್ ತೊಕ್ಕೋಟು, ಬಿ ಎಂ ಭಟ್, ಸದಾಶಿವ ದಾಸ್, ಜಯಂತಿ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಪ್ರಮೀಳಾ ಶಕ್ತಿನಗರ, ರಮಣಿ ಮೂಡಬಿದ್ರೆ, ಸಂತೋಷ್ ಬಜಾಲ್, ಬಿ ಕೆ ಇಮ್ತಿಯಾಜ್, ವಸಂತಿ ಕುಪ್ಪೆಪದವು, ಮನೋಜ್ ವಾಮಂಜೂರು, ರಫೀಕ್ ಹರೇಕಳ ಮುಂತಾದವರು ಇದ್ದರು.