ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಪತ್ರಕರ್ತರ ಗ್ರಂಥಾಲಯಕ್ಕೆ ಪುಸಕ್ತ ಕೊಡುಗೆ ಕಾರ್ಯಕ್ರಮದಲ್ಲಿ ಹಿರಿಯ ಕವಿ ಡಾ. ಸಿ. ಪಿ. ಕೃಷ್ಣಕುಮಾರ್ ಮಾತನಾಡಿ ‘ ಪ್ರತಿ ಮನೆಯಲ್ಲೂ ಮಕ್ಕಳು ಇದ್ದಂತೆ ಪುಸ್ತಕಗಳು ಇರಬೇಕು ‘ ಎಂದು ಹೇಳಿದರು.
ಪ್ರತಿಯೊಬ್ಬರು ಪುಸ್ತಕಗಳನ್ನ ಓದಬೇಕು. ಇತ್ತೀಚೆಗೆ ಮೊಬೈಲ್ ಹಾವಳಿಯಿಂದ ಪುಸ್ತಕ ಓದುವವರ ಸಂಖ್ಯೆ ಕ್ಷೀಣಿಸಿದೆ. ಉತ್ತಮ ಬರಹಗಾರರು ಕಣ್ಮರೆ ಆಗುತ್ತಿದ್ದಾರೆ. ಪೋಷಕರು ಮಕ್ಕಳಿಗೆ ಮೊಬೈಲ್ ನೀಡುವ ಬದಲು ಪುಸ್ತಕ ನೀಡಿ. ಜ್ಞಾನರ್ಜನೆಗೆ ಓದು ಬಹಳ ಮುಖ್ಯವಾದದ್ದು. ಓದಿನಿಂದ ಎಲ್ಲವೂ ಸಾಧ್ಯ. ಮೊಬೈಲ್ ಬಳಕೆಯಿಂದ ಓದುವ ಹವ್ಯಾಸ ಮರೆಯಾಗುತ್ತಿರುವುದು ಶೋಚನಿಯ. ಮನೆಯಲ್ಲಿಯೇ ಮನೆ ಮಂದಿಗಳ ಸಂಭಂದ ಅರಿಯದ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ಮೊಬೈಲ್ ಇದ್ದರೆ ಸಾಕು ಮತ್ತೇನು
ಬೇಡ ಅನ್ನುವ ಮಟ್ಟಿಗೆ ಆವರಿಸಿದೆ. ಇದನ್ನ ಹೋಗಲಾಡಿಸಿ ಓದಿನ ಆಸಕ್ತಿ ಬೆಳೆಸಿಕೊಳ್ಳಬೇಕು.
ಓದಿನಿಂದ ಎಲ್ಲವನ್ನು ಕಂಡುಕೊಳ್ಳಲು ಸಾಧ್ಯವಿದೆ. ಕೊಂಡುಕೊಳ್ಳಲು ಸಾಧ್ಯವಿಲ್ಲ. ಓದು ತೆರೆದ ಪುಟವಾಗಿದ್ದು ಒಳ್ಳೆಯ ಆಲೋಚನೆ, ಗುರಿಯ ಕಡೆಗೆ ಕರೆದುಕೊಂಡು ಹೋಗುತ್ತದೆ. ಓದಿನಿಂದ ಜೀವನವು ಉತ್ತಮ ರೀತಿಯಲ್ಲಿ ರೂಪುಗೊಳ್ಳುವುದರಿಂದ ಸಮಾಜಕ್ಕೂ ತಮದೇ ಆದ ಕೊಡುಗೆ ನೀಡಲು ಸಾಧ್ಯವಿದೆ.

ಯಾವುದೇ ಆಧುನಿಕತೆ ತೆರೆದುಕೊಂಡರು ಅದೆಲ್ಲವೂ ಓದಿನಿಂದಲೇ ಆಗಿರುತ್ತದೆ. ಈಗೆಲ್ಲವೂ ಮೊಬೈಲ್ ನಲ್ಲಿ ಯುವ ಜನತೆ ಮುಳುಗಿ ಹೋಗಿದ್ದು ಗ್ರಂಥಾಲಯದ ಪ್ರಾಮುಖ್ಯತೆ ಅರಿವಿಲ್ಲದಂತೆ ಮಾಡಿದೆ. ಎಷ್ಟೋ ಗ್ರಂಥಾಲಯಗಳು ಓದುಗರು ಇಲ್ಲದೆ ಬಣಗುಡುತ್ತಿದೆ. ಬಾಗಿಲು ಮುಚ್ಚುತ್ತಿವೆ. ಇದಕ್ಕೆಲ್ಲ ಅವಕಾಶ ನೀಡದೆ ಎಲ್ಲರೂ ಓದುವಂತಾಗಲಿ ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಅತ್ತೂರು ಕೊಲ್ಲಿ ಹಾಡಿಗೆ ಶಾಸಕ ಎ. ಎಸ್. ಪೊನ್ನಣ್ಣ ಭೇಟಿ; ಸರ್ಕಾರದೊಂದಿಗೆ ಚರ್ಚಿಸುವ ಭರವಸೆ
ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಮಾನಸ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ ದೀಪಕ್, ಉಪಾಧ್ಯಕ್ಷ ರವಿ ಪಾಂಡವಪುರ , ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತ ಅಧಿಕಾರಿ ಕರಿಯಪ್ಪ, ಮೈಸೂರಿನ ಸಂಚಾಲಕ ಚಂದ್ರಶೇಖರ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಪುರ ನಾರಾಯಣ ಹಾಗೂ ಇನ್ನಿತರರು ಇದ್ದರು.