ಕಳ್ಳನೋರ್ವ ಕಾರಿನ ಗಾಜು ಹೊಡೆದು 2 ಲಕ್ಷ ರೂ. ಹಣ ದೋಚಿರುವ ಘಟನೆ ಚಿಂತಾಮಣಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
ನಗರದ ಕೋಲಾರ ರಸ್ತೆಯ ಪಟೇಲ್ ಹೋಟೆಲ್ ಮುಂಭಾಗ ಕಳ್ಳತನ ನಡೆದಿದ್ದು, ಕಳ್ಳನ ಕೈಚಳಕ ಹೋಟೆಲ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದೊಡ್ಡಬಳ್ಳಾಪುರ ನಿವಾಸಿ ಶಿವಕುಮಾರ್ ಹಣ ಕಳೆದುಕೊಂಡವರು. ಶಿವಕುಮಾರ್ ಮರ ಕಟ್ ಮಾಡುವ ಯಂತ್ರ ಖರೀದಿಸಲೆಂದು ಬುಧವಾರ ಚಿಂತಾಮಣಿಗೆ ಬಂದಿದ್ದು, ಊಟಕ್ಕೆಂದು ಪಟೇಲ್ ಹೋಟೆಲ್ ಮುಂಭಾಗ ಕಾರು ನಿಲ್ಲಿಸಿ ತೆರಳಿದ್ದಾಗ ಅಪರಿಚಿತ ವ್ಯಕ್ತಿಯೋರ್ವ ಕಾರಿನ ಗಾಜು ಹೊಡೆದು ಕಾರಿನಲ್ಲಿದ್ದ 2 ಲಕ್ಷ ರೂ. ನಗದು ಹಣವನ್ನು ದೋಚಿ ಪರಾರಿಯಾಗಿದ್ದಾನೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ವಕ್ಫ್ ಸಲಹಾ ಸಮಿತಿಯಿಂದ ಆಸ್ತಿ ಪರಿಶೀಲನೆ
ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿ ಮುರಳಿಧರ್, ನಗರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ಹಾಗೂ ಸಿಬ್ಬಂದಿಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳನಿಗಾಗಿ ಬಲೆ ಬೀಸಿದ್ದಾರೆ.
