ಈ ದಿನ ಸಂಪಾದಕೀಯ | ಬಾಂಗ್ಲಾ ಹಿಂದೂಗಳ ಸಂಕಟ: ದಿಟವೆಷ್ಟು, ಸಟೆಯೆಷ್ಟು?

Date:

ಬಾಂಗ್ಲಾದೇಶದ ಹಿಂದುಗಳ ಮೇಲೆ ಅತ್ಯಾಚಾರಗಳು ಜರುಗಿವೆ ಎಂದು ಸಾರುವ ಬಹುತೇಕ ಫೇಕ್ ಪೋಸ್ಟ್‌ಗಳು ಭಾರತ ಮೂಲದವು ಎಂದು ಫ್ಯಾಕ್ಟ್ ಚೆಕರ್‌ಗಳು ಬೆಳಕು ಚೆಲ್ಲಿದ್ದಾರೆ. ವದಂತಿಗಳ ಒಂದಷ್ಟು ಪ್ರಮಾಣ ಬಾಂಗ್ಲಾದೇಶದ ಒಳಗಿನಿಂದಲೂ ಹಬ್ಬಿರುವುದನ್ನು ಪತ್ತೆ ಹಚ್ಚಿದ್ದಾರೆ.

ಜನಾಕ್ರೋಶದ ಜ್ವಾಲಾಮುಖಿಯ ಮುಂದೆ ಕಂಗೆಟ್ಟು ಜೀವ ಅಂಗೈಯಲ್ಲಿಟ್ಟು ಪರಾರಿಯಾಗಿರುವ ಅನೇಕ ರಾಷ್ಟ್ರಾಧ್ಯಕ್ಷ ರು, ಪ್ರಧಾನಮಂತ್ರಿಗಳಿಗೆ ಇತಿಹಾಸ ಸಾಕ್ಷಿಯಾಗಿದೆ. ಇವರೆಲ್ಲ ಅಭಿವೃದ್ಧಿಯ ಮುಖವಾಡ ಧರಿಸಿದ ಸರ್ವಾಧಿಕಾರಿಗಳು, ಜನತಂತ್ರ ಕಂಟಕರು ಪ್ರಜಾಪೀಡಕರು. ಅಲ್ಲಲ್ಲಿ ಒಂದೆರಡು ಅಪವಾದಗಳಿದ್ದಾವು. ಮೊನ್ನೆ ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ಕೂಡಾ ಹೀಗೆಯೇ ಪರಾರಿಯಾಗಿ ಭಾರತ‌ ತಲುಪಿ ಪ್ರಾಣ ಉಳಿಸಿಕೊಂಡಿದ್ದಾರೆ.

ಕಾಲ ಕೆಳಗಿನ ನೆಲದಡಿ ಜನಾಕ್ರೋಶದ ಲಾವಾರಸ ಹರಿದ ಸೂಚನೆಗಳನ್ನು ಸರ್ವಾಧಿಕಾರಿಗಳು ಲೆಕ್ಕಿಸುವುದೇ ಇಲ್ಲ. ಅಧಿಕಾರ ಮದ ಎಂಬ ಅಪಾಯಕಾರಿ ಅರಿವಳಿಕೆಯಲ್ಲಿ ಮೈಮರೆತಿರುತ್ತಾರೆ. ಕುದಿದು ಕನಲಿದ ಲಾವಾರಸ ಅಗ್ನಿಪರ್ವತವಾಗಿ ಸ್ಫೋಟ ಆದಾಗ ದಿಕ್ಕೆಟ್ಟು ದೌಡಾಯಿಸುತ್ತಾರೆ. ಇವರು ತಮ್ಮ ಸುತ್ತಮುತ್ತ ಕಟ್ಟಿಕೊಂಡ ಅಂಧಭಕ್ತಿಯ ಪಕ್ಷಪಾತೀ ಪ್ರಪಂಚ ಕೂಡ ತತ್ತರಿಸುತ್ತದೆ. ಸಮಾಜಘಾತಕ ಮತ್ತು ಧರ್ಮಾಂಧ ಶಕ್ತಿಗಳು, ಸಂಚುಕೋರ ವಿದೇಶೀ ತಾಕತ್ತುಗಳು ಇಂತಹ ಅರಾಜಕತೆಯ ಬೆಂಕಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತವೆ. ಧಗಧಗಿಸುವ ಜ್ವಾಲೆಗಳಿಗೆ ದ್ವೇಷದ ಎಣ್ಣೆ ಎರಚುತ್ತವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬಾಂಗ್ಲಾದೇಶದ ಇಂತಹುದೇ ಅರಾಜಕತೆಯ ದಳ್ಳುರಿಯಲ್ಲಿ ಬೇಯುತ್ತಿದೆ. ಅಲ್ಲಿನ ಅಲ್ಪಸಂಖ್ಯಾತರಾದ ಹಿಂದುಗಳು ದ್ವೇಷದ ದಾಳಿಗೆ ಗುರಿಯಾಗಿದ್ದಾರೆ. ಆದರೆ, ಕೋಮುವಾದಿ ಶಕ್ತಿಗಳು ಈ ಕುರಿತು ಭಾರತದ ಬಹುಸಂಖ್ಯಾತ ಹಿಂದುಗಳನ್ನು ಎತ್ತಿಕಟ್ಟುವ ದುಷ್ಟ ಆಟ ಆಡತೊಡಗಿವೆ. ಅತಿರಂಜಿತವಷ್ಟೇ ಅಲ್ಲದೆ, ಸುಳ್ಳು ಸುದ್ದಿಗಳ ಪ್ರವಾಹವನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿವೆ.

ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೋರೇಶನ್ ನ (ಬಿಬಿಸಿ) ಫ್ಯಾಕ್ಟ್ ಚೆಕ್ ವಿಭಾಗ ‘ಬಿಬಿಸಿ ವೆರಿಫೈ’ ಈ ಸುಳ್ಳು ಸುದ್ದಿಗಳ ಪರದೆ ಹರಿದಿದೆ. ಅಲ್ಲಿನ ವಾಸ್ತವಾಂಶ ಏನೆಂದು ತೆರೆದಿಟ್ಟಿದೆ. ಹಸೀನಾ ಸರ್ಕಾರ ಬುಡಮೇಲಾದ ನಂತರ ಹಿಂದೂಗಳ ಮೇಲೆ ದಾಳಿಗಳು ನಡೆದಿರುವುದು ಹೌದು. ಆದರೆ, ವಾಸ್ತವದ ಮರೆಯಲ್ಲಿ ಪರಮ ಪ್ರಚೋದಕ ವದಂತಿಗಳನ್ನೂ ಹಬ್ಬಿಸಲಾಗುತ್ತಿದೆ ಎಂದು ‘ಬಿಬಿಸಿ ವೆರಿಫೈ’ ಹೇಳಿದೆ.

ಬಾಂಗ್ಲಾದೇಶ್ ಹಿಂದೂ- ಬೌದ್ಧ- ಕ್ರೈಸ್ತ ಏಕತಾ ಪರಿಷತ್ತು ಮತ್ತು ಬಾಂಗ್ಲಾದೇಶ್ ಪೂಜಾ ಉಜಪನ್ ಪರಿಷತ್ತಿನ ಪ್ರಕಾರ, ಆ ದೇಶದ ಅಲ್ಪಸಂಖ್ಯಾತರ ಮೇಲೆ 52 ಜಿಲ್ಲೆಗಳಲ್ಲಿ ನೂರಾರು ದಾಳಿಗಳು ಜರುಗಿವೆ. ಆದರೆ ಈ ದಾಳಿಗಳು ಧಾರ್ಮಿಕ ಅಲ್ಪಸಂಖ್ಯಾತರೆಂಬ ಏಕೈಕ ಕಾರಣಕ್ಕಾಗಿ ನಡೆದಿವೆಯೇ ಅಥವಾ ಶೇಖ್ ಹಸೀನಾ ಅವರ ಆವಾಮಿ ಲೀಗ್ ಪಕ್ಷದ ಬೆಂಬಲಿಗರೆಂಬ ಆಕ್ರೋಶಕ್ಕಾಗಿ ಜರುಗಿವೆಯೇ ಎಂಬುದು ಇನ್ನೂ ವಿಚಾರಣೆ ಒಳಪಡಬೇಕಿರುವ ಸಂಗತಿ.

ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಕೆಲವೆಡೆಗಳಲ್ಲಿ ನಡೆದಿರುವ ದಾಳಿಗಳನ್ನು ತೀವ್ರ ಕಾಳಜಿಯಿಂದ ಗಮನಿಸಲಾಗಿದೆ. ಈ ಹೀನ ದಾಳಿಗಳನ್ನು ತಡೆಯಲು ಕ್ರಮ ಜರುಗಿಸಲಾಗುತ್ತಿದೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಹೇಳಿದೆ. ಹಿಂದೂಗಳ ಮೇಲಿನ ದಾಳಿಗಳನ್ನೇ ವಿರೋಧಿಸಿ ನಡೆದಿರುವ ಸಾವಿರಾರು ಮಂದಿ ನಾಗರಿಕರು ಮೆರವಣಿಗೆ ನಡೆಸಿದ್ದಾರೆ. ಮುಸ್ಲಿಮರು ಬಹುಸಂಖ್ಯಾತರಾಗಿರುವ ಬಾಂಗ್ಲಾದೇಶದ ಬಹುದೊಡ್ಡ ಅಲ್ಪಸಂಖ್ಯಾತರು ಹಿಂದೂಗಳು. ಬಹುತೇಕರು ಶೇಖ್ ಹಸೀನಾ ಅವರ ಆವಾಮಿ ಲೀಗ್ ಪಾರ್ಟಿಯ ಬೆಂಬಲಿಗರು. ಶೇಖ್ ಹಸೀನಾ ಸರ್ಕಾರ ಮುಸ್ಲಿಮ್ ಮತಾಂಧರನ್ನು ಅಂಕೆಯಲ್ಲಿಟ್ಟಿತ್ತು.

ಬಾಂಗ್ಲಾದೇಶವನ್ನು ಸೌಮ್ಯವಾದಿ ಜನತಾಂತ್ರಿಕ ಮುಸಲ್ಮಾನ ದೇಶವೆಂದು ವಿಶ್ವಸಂಸ್ಥೆಯು ವರ್ಗೀಕರಿಸಿದೆ. ಬಾಂಗ್ಲಾದೇಶದ ಸಂವಿಧಾನದಲ್ಲಿ ಎರಡು ಬಾರಿ ಇಸ್ಲಾಮ್ ಉಲ್ಲೇಖವಿದೆ. ಶೇ.91ರಷ್ಟು ಮುಸಲ್ಮಾನರು, ಶೇ.7.95ರಷ್ಟು ಹಿಂದೂಗಳು, ಶೇ.0.65ರಷ್ಟು ಬೌದ್ಧರು, ಶೇ.0.30ರಷ್ಟು ಕ್ರೈಸ್ತರನ್ನು ಹೊಂದಿರುವ ದೇಶವಿದು. 2022ರ ಜನಗಣತಿಯ ಪ್ರಕಾರ ಇಲ್ಲಿನ ಹಿಂದೂಗಳ ಜನಸಂಖ್ಯೆ 14,230,110.

ಪಶ್ಚಿಮ ಬಂಗಾಳದ ಹಿಂದೂಗಳ ಸ್ವರೂಪವೇ ಸ್ಥೂಲವಾಗಿ ಬಾಂಗ್ಲಾ ಹಿಂದೂಗಳ ಸ್ವರೂಪವೂ ಆಗಿದೆ. ಆಚಾರ ವಿಚಾರ ಪದ್ಧತಿಗಳು ಒಂದನ್ನೊಂದು ಹೋಲುತ್ತವೆ. ಇಸ್ಲಾಮನ್ನು ರಾಜ್ಯಧರ್ಮವೆಂದು ಸಾರಿದ್ದರೂ, ಹಿಂದು, ಬೌದ್ಧ, ಕ್ರೈಸ್ತ ಮತ್ತಿತರೆ ಮತಾವಲಂಬಿಗಳಿಗೆ ಸಮಾನ ಸಾಂವಿಧಾನಿಕ ಹಕ್ಕುಗಳನ್ನು ನೀಡಲಾಗಿದೆ. ಜಾತ್ಯತೀತ ಸ್ವರೂಪದ ಕಾನೂನು ಕಾಯಿದೆಗಳನ್ನು ಪಾಲಿಸಿಕೊಂಡು ಬರಲಾಗಿದೆ.

ಹಿಂದೂಗಳ ಮೇಲೆ ದಾಳಿ ನಡೆಯುತ್ತಿವೆಯಾದರೂ, ಸ್ಥಳೀಯ ಮುಸಲ್ಮಾನರೇ ಮುಂದೆ ನಿಂತು ಹಿಂದೂ ದೇವಾಲಯಗಳಿಗೆ ರಕ್ಷಣೆಯಲ್ಲಿ ತೊಡಗಿದ್ದಾರೆ. ಹಿಂದೂ ಕುಟುಂಬಗಳ ಮೇಲಿನ ಬಹುತೇಕ ದಾಳಿಗಳು, ಲೂಟಿಗಳು, ಈ ಹಿಂದೂ ಕುಟುಂಬಗಳು ಶೇಖ್ ಹಸೀನಾಗೆ ಬೆಂಬಲ ನೀಡಿದ್ದಕ್ಕಾಗಿ ಜರುಗಿವೆ. ಹಳೆಯ ಆಸ್ತಿ ವಿವಾದಗಳ ಹಗೆಯನ್ನೂ ಇದೇ ಸಂದರ್ಭದಲ್ಲಿ ತೀರಿಸಿಕೊಳ್ಳಲಾಗಿದೆ. ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ವಿದೇಶೀ ಬಾತ್ಮೀದಾರ ಶುಭಜಿತ್ ರಾಯ್ ಅವರಿಗೆ ಢಾಕಾದ ಢಾಕೇಶ್ವರಿ ದೇವಿ ದೇವಾಲಯದ ಅಂಗಳದಲ್ಲಿ ಕುಳಿತು ಬಾಂಗ್ಲಾದೇಶ್ ಪೂಜಾ ಉಜಪನ್ ಪರಿಷತ್ ಅಧ್ಯಕ್ಷ ಬಾಸುದೇಬ್ ಧಾರ್ ತಿಳಿಸಿರುವ ಸಂಗತಿಯಿದು. ಈ ದಾಳಿಗಳು ಮುಂಬರುವ ದಿನಗಳಲ್ಲೂ ಮುಂದುವರೆದರೆ ಭಯದ ವಾತಾವರಣ ಕವಿದು ಭಾರತಕ್ಕೆ ವಲಸೆ ಬಯಸುವವರ ಸಂಖ್ಯೆ ಹೆಚ್ಚುವುದು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ ಧಾರ್.

ಬಾಂಗ್ಲಾದೇಶದ ಹಿಂದುಗಳ ಮೇಲೆ ಅತ್ಯಾಚಾರಗಳು ಜರುಗಿವೆ ಎಂದು ಸಾರುವ ಬಹುತೇಕ ಫೇಕ್ ಪೋಸ್ಟ್‌ಗಳು ಭಾರತ ಮೂಲದವು ಎಂದು ಫ್ಯಾಕ್ಟ್ ಚೆಕರ್‌ಗಳು ಬೆಳಕು ಚೆಲ್ಲಿದ್ದಾರೆ. ವದಂತಿಗಳ ಒಂದಷ್ಟು ಪ್ರಮಾಣ ಬಾಂಗ್ಲಾದೇಶದ ಒಳಗಿನಿಂದಲೂ ಹಬ್ಬಿರುವುದನ್ನು ಪತ್ತೆ ಹಚ್ಚಿದ್ದಾರೆ. ಹಿಂದೂಗಳ ಮನೆಗಳ ಜೊತೆಗೆ ಮುಸಲ್ಮಾನರ ಮನೆಗಳಿಗೂ ಬೆಂಕಿ ಹಚ್ಚಲಾಗಿದೆ ಎಂದು ಗಮನ ಸೆಳೆದಿದ್ದಾರೆ.

ಈ ದಾಳಿಗಳ ನೇರ ಗುರಿ ಆಳುವ ಪಕ್ಷವಾಗಿದ್ದ ಆವಾಮಿ ಲೀಗ್‌ನ ತಲೆಯಾಳುಗಳು ಮತ್ತು ಕಾಲಾಳುಗಳೇ ಆಗಿದ್ದಾರೆ. ಯಾವ ರಾಜಕೀಯ ಪಕ್ಷದವರೆಂಬುದು ಮುಖ್ಯವಾಗಿದೆಯೇ ವಿನಾಃ, ಯಾವ ಧರ್ಮಕ್ಕೆ ಸೇರಿದವರು ಎಂಬುದು ದಾಳಿಯ ಮೂಲ ಕಾರಣ ಅಲ್ಲ ಎಂದಿದೆ ಬಿಬಿಸಿ.

ಚಿಟ್ಟಗಾಂಗ್ ಸನಿಹದ ಕಾಳೀಮಾತಾ ಮಂದಿರದ ಮೇಲೆ ದಾಳಿ ನಡೆಯದಂತೆ ಮುಸಲ್ಮಾನರು ಕಾವಲು ಕಾಯುತ್ತಿದ್ದಾರೆ. ಹಿಂದೂ ಮತ್ತು ಮುಸಲ್ಮಾನ ವಿದ್ಯಾರ್ಥಿಗಳು ಕೋಮು ಸಾಮರಸ್ಯ ಕಾಪಾಡಿಕೊಳ್ಳುವ ಕುರಿತು ಚರ್ಚೆ ನಡೆಸಿದ್ದಾರೆ. ‘ದೇವಸ್ಥಾನಗಳು ಮತ್ತು ಚರ್ಚುಗಳನ್ನು ಕಾಪಾಡುವುದು ನಮ್ಮ ಕರ್ತವ್ಯ. ವೈರಲ್ ಆಗುತ್ತಿರುವ ಹಲವು ಸಾಮಾಜಿಕ ಜಾಲತಾಣ ಪೋಸ್ಟ್‌ಗಳನ್ನು ನೋಡಿದ್ದೇನೆ. ಅವುಗಳಲ್ಲಿ ವಾಸ್ತವಾಂಶ ಇಲ್ಲ’ ಎಂದು ಮೊಯ್ನುಲ್ ಎಂಬ ತರುಣ ಬಿಬಿಸಿಗೆ ತಿಳಿಸಿದ್ದಾನೆ.

ವ್ಯಾಪಕ ದಮನ ಮತ್ತು ಹತ್ಯೆಗಳನ್ನು ನಡೆಸಿದ ಶೇಖ್ ಹಸೀನಾ ದೇಶ ತೊರೆದು ತಲೆಮರೆಸಿಕೊಂಡ ಬೆಳವಣಿಗೆ ಪ್ರತಿಪಕ್ಷಗಳು ಮತ್ತು ಪ್ರದರ್ಶನಕಾರರನ್ನು ರೊಚ್ಚಿಗೆಬ್ಬಿಸಿದೆ. ಪೊಲೀಸರು ಕೂಡ ವಿದ್ಯಾರ್ಥಿಗಳ ಪ್ರತೀಕಾರಕ್ಕೆ ಹೆದರಿ ಪ್ರಾಣಭಯದಿಂದಾಗಿ ಠಾಣೆಗಳನ್ನು ತೊರೆದಿದ್ದಾರೆ. ಈ ಅರಾಜಕ ಪರಿಸ್ಥಿತಿಯಲ್ಲಿ ಲೂಟಿ ಹಿಂಸಾಚಾರ ಲಂಗು ಲಗಾಮಿಲ್ಲದೆ ಜರುಗಿದೆ. ಆಳುವ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆದಿದೆ. ಇದೇ ಪರಿಸ್ಥಿತಿಯನ್ನು ಬಳಸಿಕೊಂಡು ಭಾರತದ ತೀವ್ರ ಬಲಪಂಥೀಯ ಸಾಮಾಜಿಕ ಜಾಲತಾಣ ಪ್ರಭಾವಿಗಳು ತಪ್ಪುದಾರಿಗೆಳೆಯುವ ವಿಡಿಯೋಗಳನ್ನು ಪ್ರಸಾರ ಮಾಡಿದ್ದಾರೆ.

ವಿದ್ಯಾರ್ಥಿ ಪ್ರತಿಭಟನಾಕಾರರೆಲ್ಲ ‘ಇಸ್ಲಾಮಿಕ್ ಉಗ್ರಗಾಮಿಗಳು’ ಎಂದೂ ಪ್ರಚಾರ ಮಾಡಿದ್ದಾರೆ. ಹಿಂದೂ ಮನೆಗಳ ಮೇಲೆ ದಾಳಿ ನಡೆದಿರುವ ಪ್ರಕರಣಗಳೂ ಇವೆ. ಆದರೆ ಈ ಮನೆಗಳಿಗೆ ಸಂಬಂಧಪಟ್ಟ ಎಲ್ಲರೂ ಶೇಖ್ ಹಸೀನಾ ಪಕ್ಷದ ಬೆಂಬಲಿಗರು.
ಬಾಂಗ್ಲಾದೇಶದ ಹಿಂದೂ ಕ್ರಿಕೆಟ್ ಆಟಗಾರ ಲಿಟ್ಟೊನ್ ದಾಸ್ ಮನೆಯನ್ನು ಸುಟ್ಟು ಹಾಕಲಾಗಿದೆ ಎಂಬ ಪೋಸ್ಟ್ ವೈರಲ್ ಆಗಿತ್ತು. ಮುಸ್ಲಿಮ್ ಉಗ್ರಗಾಮಿಗಳು ದಾಸ್ ಮನೆಗೆ ಬೆಂಕಿ ಇಟ್ಟರೆಂಬುದಾಗಿ ಪ್ರಚಾರ ಮಾಡಲಾಯಿತು. ಆದರೆ ಸುಟ್ಟು ಹೋದ ಮನೆ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ಮಶ್ರೇಫ್ ಬಿನ್ ಮೊರ್ತಾಜಾ ಅವರದ್ದೆಂದು ಆನಂತರ ಸ್ಪಷ್ಟವಾಯಿತು. ಚಿಟ್ಟಗಾಂಗ್ ಬಳಿಯ ನವಗ್ರಹ ಮಂದಿರಕ್ಕೆ ಬೆಂಕಿ ಹಚ್ಚಲಾಗಿದೆ ಎಂಬುದೂ ಸುಳ್ಳುಸುದ್ದಿಯೇ. ಈ ಅಗ್ನಿಸ್ಪರ್ಶದ ಗುರಿ ದೇವಾಲಯದ ಹಿಂದಿರುವ ಆವಾಮಿ ಲೀಗ್ ಕಚೇರಿಯಾಗಿತ್ತು. ಕಚೇರಿಯ ಮೇಜು ಕುರ್ಚಿಗಳನ್ನು ಹೊರತಂದು ದೇವಾಲಯದ ಹಿಂದೆ ಸುಡಲಾಯಿತು. ಈ ದೃಶ್ಯವನ್ನು ದೇವಾಲಯವೇ ಸುಟ್ಟಿತೆಂದು ಬಿಂಬಿಸಲಾಯಿತು. ಗಮನವಿಟ್ಟು ನೋಡಿದರೆ, ಈ ಬೆಂಕಿಯಲ್ಲಿ ಆವಾಮಿ ಲೀಗ್ ಪದಾಧಿಕಾರಿಗಳ ಚಿತ್ರಪಟಗಳು ಸುಟ್ಟು ಕರಕಲಾಗುವುದು ಕಂಡು ಬರುತ್ತದೆ. ವಾಸ್ತವ ಅಂಶವೇನೆಂದರೆ, ನವಗ್ರಹ ಮಂದಿರವನ್ನು ಹಗಲಿರುಳೂ ಕಾಯಲಾಗುತ್ತಿದೆ ಎಂದು ದೇವಾಲಯದ ಅಧಿಕಾರಿ ಸ್ವಪನ್ ದಾಸ್ ಬಿಬಿಸಿಗೆ ಸ್ಪಷ್ಟಪಡಿಸಿದ್ದಾರೆ.

ಇಂತಹ ಇನ್ನೂ ಹಲವು ವಿಡಿಯೋಗಳ ‘ಸತ್ಯ’ವನ್ನು ಫ್ಯಾಕ್ಟ್ ಚೆಕರ್‌ಗಳು ಬಯಲಿಗೆ ಎಳೆದಿದ್ದಾರೆ. ಇಬ್ಬರು ಹೆಣ್ಣುಮಕ್ಕಳ ಅಪಹರಣದ ವಿಡಿಯೋಗಳ ಹೂರಣವೂ ಇದೇ ಆಗಿದೆ. ಢಾಕಾದ ವಿಡಿಯೋದಲ್ಲಿ ಹೆಣ್ಣುಮಗಳೊಬ್ಬಳನ್ನು ಅತ್ಯಾಚಾರ ಎಸಗಲು ಅಪಹರಿಸಲಾಗುತ್ತಿದೆ ಎಂದು ಜಾಲತಾಣದ ಪೋಸ್ಟ್ ಗಳಲ್ಲಿ ಬಣ್ಣಿಸಲಾಗಿದೆ. ಆದರೆ ಈಕೆ ದೀರ್ಘಕಾಲ ಸಂಚಾರ ನಿಯಂತ್ರಣದಲ್ಲಿ ಸ್ವಯಂಸೇವೆ ಸಲ್ಲಿಸುತ್ತಿದ್ದ ವಿದ್ಯಾರ್ಥಿನಿ. ಆಕೆಯ ಪೋಷಕರು ಬಲವಂತವಾಗಿ ಮನೆಗೆ ಕರೆದೊಯ್ಯುತ್ತಿರುವ ದೃಶ್ಯಗಳಿವು. ಮತ್ತೊಂದು ವಿಡಿಯೋ ನೌಖಾಲಿಗೆ ಸಂಬಂಧಿಸಿದ್ದು. ಈ ಹಿಂದೂ ಮಹಿಳೆ ಗಂಡನಿಂದ ಬೇರೆಯಾಗಿ ತವರಿನಲ್ಲಿ ವಾಸಿಸುತ್ತಿದ್ದಳು. ಈಕೆಯ ಪತಿ ತನ್ನ ಸ್ನೇಹಿತರನ್ನು ಕರೆತಂದು ಪತ್ನಿಯನ್ನು ಬಲವಂತವಾಗಿ ಕರೆದೊಯ್ದ ದೃಶ್ಯವನ್ನು ಸಾಮೂಹಿಕ ಅತ್ಯಾಚಾರ ನಡೆಸಲು ಹಿಂದೂ ಮಹಿಳೆಯ ಅಪಹರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸಲಾಯಿತು. ಈ ಹುಸಿ ವಿಡಿಯೋಗಳನ್ನು ಆಧರಿಸಿ ಕೆಲವು ‘ಹಿಂದೂ’ ಟೀವಿ ಚಾನೆಲ್‌ಗಳು ಮತ್ತು ವೆಬ್‌ಸೈಟುಗಳು ವರದಿಗಳನ್ನು ಕೂಡ ತಯಾರಿಸಿ ಪ್ರಕಟಿಸಿವೆ. ಭಾರತ ಮತ್ತು ಬಾಂಗ್ಲಾದೇಶ ಮಾತ್ರವಲ್ಲದೆ ಇಂಗ್ಲೆಂಡಿನಿಂದಲೂ ತೀವ್ರ ಬಲಪಂಥೀಯ ಜಾಲತಾಣ ಪ್ರಭಾವಿಗಳು ಇಂತಹ ಊಹಾಪೋಹಗಳಿಗೆ ರೆಕ್ಕೆಪುಕ್ಕ ಕಟ್ಟಿ ಹಾರಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ಕೋಮುಸೌಹಾರ್ದತೆಗೆ ಕೊಳ್ಳಿ ಇಡುವ ಪ್ರಯತ್ನಗಳು ಕೋಮುವಾದಿಗಳಿಂದ ನಡೆದಿವೆ. ಆದರೆ, ಬಾಂಗ್ಲಾದೇಶದ ಸರ್ಕಾರ ಯಾವುದೇ ಬೆಲೆಯನ್ನು ತೆತ್ತಾದರೂ ಈ ಸಾಮರಸ್ಯವನ್ನು ಕಾಪಾಡಿಕೊಳ್ಳಲಿದೆ. ಈ ಬಲೆಗೆ ತಾನು ಬೀಳುವುದಿಲ್ಲ ಎಂದು ಅಲ್ಲಿನ ಮಧ್ಯಂತರ ಸರ್ಕಾರ ಸ್ಪಷ್ಟಪಡಿಸಿದೆ. ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮಹಮ್ಮದ್ ಯೂನುಸ್ ಅವರು ರಾಜಧಾನಿ ಢಾಕಾದ ಢಾಕೇಶ್ವರಿ ಮಂದಿರದಲ್ಲಿ ಹಿಂದೂ ಪ್ರತಿನಿಧಿಗಳ ಸಭೆ ಕರೆದು ಆಭಯದ ಆಶ್ವಾಸನೆ ನೀಡಿರುವುದು ಒಳ್ಳೆಯ ಬೆಳವಣಿಗೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಳೆ ಅವಾಂತರ ಮತ್ತು ಅಧಿಕಾರಸ್ಥರ ಆತುರ

ಬಾಂಗ್ಲಾದೇಶದಲ್ಲಿನ ಹಿಂದುಗಳು ಮತ್ತಿತರೆ ಅಲ್ಪಸಂಖ್ಯಾತರ ಸುರಕ್ಷತೆಗಾಗಿ ನರೇಂದ್ರ ಮೋದಿ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ಬಾಂಗ್ಲಾ ಮತ್ತು ಭಾರತ ಸರ್ಕಾರಗಳೆರಡೂ ತಮ್ಮ ಮಾತುಗಳನ್ನು ನಿಜಾರ್ಥದಲ್ಲಿ ನಡೆಸಿಕೊಡಬೇಕಿದೆ. ಕಳೆದ 15-20 ವರ್ಷಗಳಿಂದ ಸ್ಥಿರಗೊಂಡಿದ್ದ ಈ ನೆರೆಹೊರೆಯ ಮೈತ್ರಿ ಆಬಾಧಿತವಾಗಿ ಮುಂದುವರೆಯಬೇಕಿದೆ. ಎರಡೂ ದೇಶಗಳ ಹಿತ ಸಮರಸದಲ್ಲಿ ಅಡಗಿದೆಯೇ ವಿನಾಃ, ವಿರಸದಲ್ಲಿ ಅಲ್ಲ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಮೇಕೆದಾಟು ಮಧ್ಯಸ್ಥಿಕೆ ವಹಿಸದ ಕೇಂದ್ರ, ದಕ್ಷಿಣದ ರಾಜ್ಯಗಳಿಗಿದು ಸಕಾಲ

ಮೇಕೆದಾಟು ಯೋಜನೆಯ ಬಗ್ಗೆ ಕೇಂದ್ರ ಹಿಂದೆ ಸರಿದಿರುವ ಈ ಸಂದರ್ಭದಲ್ಲಾದರೂ, ಯೋಜನೆಯ...

ಈ ದಿನ ಸಂಪಾದಕೀಯ | ಅತ್ಯಾಚಾರಿಗೆ ಶಿಕ್ಷೆ; ನುಡಿದಂತೆ ನಡೆಯಲಿ ನರೇಂದ್ರ ಮೋದಿ

ದೆಹಲಿಯ ನಿರ್ಭಯ ಪ್ರಕರಣದ ನಂತರ 2013ರಲ್ಲಿ ʼನಿರ್ಭಯ ನಿಧಿʼ ಸ್ಥಾಪಿಸಲಾಗಿತ್ತು. ಈ...

ಈ ದಿನ ಸಂಪಾದಕೀಯ | ದರ್ಶನಾತಿಥ್ಯ- ಪೊಲೀಸರಿಂದ ಪೊಲೀಸರಿಗಾದ ಅವಮಾನ

ಪೊಲೀಸ್‌ ಇಲಾಖೆ ಎಂದಾಕ್ಷಣ ನ್ಯಾಯ ಸಿಗುವುದಿಲ್ಲ ಎಂಬ ಸಾಮಾನ್ಯ ಜನಾಭಿಪ್ರಾಯವನ್ನು ದರ್ಶನಾತಿಥ್ಯ...

ಈ ದಿನ ಸಂಪಾದಕೀಯ | ಮಾನವ ಘನತೆಗಾಗಿ ಹೋರಾಟ – ಕನ್ನಡ ತಮಿಳು ಎಂಬ ಗಡಿಗೆರೆಗಳು ಸಲ್ಲದು

ಶತಮಾನಗಳ ನೋವನ್ನು ಸ್ಮೃತಿಯಲ್ಲಿಟ್ಟುಕೊಂಡು, ಇಂದೂ ಅದರ ವಿವಿಧ ರೂಪಗಳು ಢಾಳಾಗಿ ಕಂಡಾಗ...