ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಸರಕಾರಿ ಶಾಲೆಯ ನೀರಿನ ಟ್ಯಾಂಕಿಗೆ ವಿಷ ಬೆರೆಸಿದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಾಜ್ಯಾಧ್ಯಕ್ಷ ಸರೋವರ ಬೆಂಕಿಕೆರೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹೂಲಿಕಟ್ಟಿ ಗ್ರಾಮದ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯ ಮುಸ್ಲಿಮ್ ಧರ್ಮದವರು ಎಂಬ ಕಾರಣಕ್ಕೆ ಅವರನ್ನು ಅಲ್ಲಿಂದ ವರ್ಗಾವಣೆ ಮಾಡಿಸಬೇಕೆಂಬ ದುರುದ್ದೇಶದಿಂದ ಶಾಲೆಯ ನೀರಿನ ಟ್ಯಾಂಕಿಗೆ ವಿಷ ಬೆರೆಸಿದ ಪ್ರಕರಣವು ಅತ್ಯಂತ ಕ್ರೂರವಾಗಿದೆ ಮತ್ತು ಯಾವುದೇ ಕಾರಕ್ಕೂ ಕ್ಷಮಾಪಣೆಗೆ ಅರ್ಹವಾಗಿರುವುದಿಲ್ಲ. ಇಂತಹ ನೀಚ ಕೃತ್ಯವನ್ನು ಕರ್ನಾಟಕ ವಿದ್ಯಾರ್ಥಿ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.
ಈ ಬಗೆಯ ಕೋಮುವೈಷಮ್ಯ ಆಧಾರಿತ ಪ್ರಕರಣಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿ, ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. 15 ದಿನದ ಹಿಂದೆ ನಡೆದ ಈ ಘಟನೆಯಲ್ಲಿ ವಿದ್ಯಾರ್ಥಿಗಳು ನೀರು ಕುಡಿದು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಒಂದು ಧರ್ಮದ ಮೇಲಿನ ದ್ವೇಷವು ಮುಗ್ಧ ಮಕ್ಕಳನ್ನು ಕೊಲ್ಲುವ ಹಂತಕ್ಕೆ ತಲುಪುವುದಾದರೆ, ಸಮಾಜದಲ್ಲಿ ಯಾವ ರೀತಿ ಕೋಮು ವೈಷಮ್ಯವನ್ನು ವ್ಯವಸ್ಥಿತವಾಗಿ ಬಿತ್ತಲಾಗಿದೆ ಎಂಬುವುದನ್ನು ಸ್ಪಷ್ಟಪಡಿಸುತ್ತದೆ ಎಂದು ಸರೋವರ ಬೇಸರ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಲಾಭಕ್ಕಾಗಿ ಸೃಷ್ಟಿಸಿದ ಕೋಮು ದ್ವೇಷದ ಮನಸ್ಥಿತಿ ಇಷ್ಟೊಂದು ನೀಚ ಮಟ್ಟಕ್ಕೆ ಇಳಿದಿದೆ ಎಂದರೆ, ಮುಂದೆ ಇದು ಯಾವ ಬಗೆಯ ದುರಂತಕ್ಕೆ ಕಾರಣವಾಗಬಹುದು ಎಂಬ ಆತಂಕವನ್ನು ಸೃಷ್ಟಿಸುತ್ತದೆ. ಧರ್ಮ ರಕ್ಷಣೆಯ ಹೆಸರಿನಲ್ಲಿ ಇನ್ನೊಂದು ಧರ್ಮದ ಬಗೆಗೆ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿ ಹಾಗೂ ದ್ವೇಷ ಭಾಷಣಗಳ ಮೂಲಕ ಸೃಷ್ಟಿಸಿರುವ ಅಪನಂಬಿಕೆಗಳು, ಪೂರ್ವಾಗ್ರಹ ವಿಚಾರಗಳು ಹೇಗೆ ಸಮಾಜಘಾತುಕ ಶಕ್ತಿಗಳಾಗಿ ಪರಿವರ್ತನೆ ಆಗುತ್ತವೆ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ ಎಂದಿದ್ದಾರೆ.
ಸರ್ವ ಜನಾಂಗದ ಶಾಂತಿಯ ತೋಟವಾದ ಕರ್ನಾಟಕದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಖಚಿತಪಡಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ನಾಗರಿಕ ಸಮಾಜವು ಆಂದೋಲನವನ್ನು ರೂಪಿಸಬೇಕು. ಕೋಮುವಾದಿಗಳು ಅನ್ಯಧರ್ಮದವರ ವಿರುದ್ಧ ಕೋಮುದ್ವೇಷವನ್ನು ಬಿತ್ತುತ್ತಿರುವುದರ ಪರಿಣಾಮವಾಗಿಯೇ, ಇಂತಹ ಘಟನೆಗಳು ನಡೆಯುತ್ತಿರುವುದು. ಹಾಗಾಗಿ ಈ ಕೃತ್ಯ ನಡೆಸಿದವರ ವಿರುದ್ಧ ಕಠಿಣ ಕ್ರಮ ತಗೆದುಕೊಳ್ಳುವ ಜೊತೆಗೇ, ಸಮಾಜದಲ್ಲಿ ಕೋಮು ಸಾಮರಸ್ಯವನ್ನು ಕದಡುತ್ತಿರುವ, ದ್ವೇಷ ಭಾಷಣ ಮಾಡುವವರ ಮೇಲೆಯೂ ಪೊಲೀಸ್ ಇಲಾಖೆ, ಸರಕಾರ ಸೂಕ್ತ ಕ್ರಮಗಳನ್ನು ತಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ಮತಗಳ್ಳತನ | ಚುನಾವಣಾ ಆಯೋಗ ಬಿಜೆಪಿ ಏಜೆಂಟ್: ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
ಮಕ್ಕಳಲ್ಲಿ, ಸಮುದಾಯಗಳಲ್ಲಿ ಕೋಮುದ್ವೇಷ ಬಿತ್ತುವ ಯಾವುದೇ ಸಂಘಟನೆ, ವ್ಯಕ್ತಿಗಳ ಮೇಲೆ ನಮ್ಮ ಸರಕಾರ, ನ್ಯಾಯಾಲಯಗಳು ಕಠಿಣ ಕಾನೂನು ಕ್ರಮಕ್ಕೆ ಗುರುಯಾಗಿಸಿದರೆ, ಇಂತಹ ನೀಚ ಕೃತ್ಯಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಸರೋವರ ಬೆಂಕಿಕೆರೆ ತಿಳಿಸಿದ್ದಾರೆ.
