ದಲಿತ ಚಳುವಳಿಯ ಮತ್ತೊಂದು ಕೊಂಡಿ ಈಗ ಕಳಚಿದ್ದು ನಾಡಿನ ದಲಿತ ಸಮಾಜದಲ್ಲಿ ಸೂತಕದ ಜೊತೆಗೆ ಆತಂಕ ಮನೆ ಮಾಡಿದೆ. ಸಿ ಎಸ್ ಪಾರ್ಥಸಾರಥಿ(59) ಸೋಮವಾರ(ಜುಲೈ 8) ನಿಧನರಾಗಿದ್ದಾರೆ. ಪತ್ನಿ, ಪುತ್ರಿ ಜೊತೆಗೆ ಅಪಾರ ಬಂಧು, ಮಿತ್ರರನ್ನು ಅಗಲಿದ್ದಾರೆ. ಮಗಳನ್ನು ಡಾಕ್ಟರ್ ಮಾಡಬೇಕೆಂದು ಕನಸು ಕಂಡಿದ್ದರು.
ಎಪ್ಪತ್ತರ ದಶಕದಲ್ಲಿ ಬಿಕೆಯವರ ಜೊತೆಗೆ ಹೆಜ್ಜೆ ಹಾಕಿ ನಾಡಿನಲ್ಲಿ ಹೋರಾಟದ ಕಿಚ್ಚು ಹಚ್ಚಿದ ದಲಿತ ಸಮಾಜದ ಕೊನೆಯ ಕೊಂಡಿಗಳು ಈಗ ಒಂದೊಂದೆ ಕಳಚುತ್ತಾ ಅನಾಥ ಪ್ರಜ್ಞೆ ಕಾಡಲು ಶುರು ಮಾಡಿದೆ. ಈಚೆಗೆ ಸಮಾಜದ ಹೆಸರಾಂಥ ಕವಿ ಲಕ್ಕರ್ ಆನಂದ್ ಅವರನ್ನು ಕಳೆದುಕೊಂಡ ನಂತರ ಅತ್ಯಂತ ಪ್ರಾಮಾಣಿಕ ಸೇವಾ ಮನೋಭಾವದ ನಿರ್ಗರ್ವಿ, ಸರಳ ಸಜ್ಜನ ನಾರಾಯಣ ರಾಜು ಅಗಲಿದ್ದು ನಮ್ಮಗೆಲ್ಲಾ ನುಂಗಲಾರದ ತುತ್ತಾಗಿತ್ತು. ದಿನ ಕಳೆಯುವುದರ ಒಳಗೆ ನಮ್ಮ ಮೆಚ್ಚಿನ ಪಾರ್ಥಣ್ಣ ಇನ್ನೂ ಇಲ್ಲ ಎನ್ನುವ ಮಾತೇ ನೂರು ಬಾಣಗಳು ಎದೆಗೆ ನಾಟಿದ ನೋವಿನ ಅನುಭವವಾಯಿತು.
ಸಂಘಟನೆ, ಹೋರಾಟದ ನೈಜತೆ ಅರ್ಥ ಮಾಡಿಕೊಂಡು ಸದಾ ಕ್ರಾಂತಿಯ ಮನಸ್ಸಿನಿಂದ ಸಾಮಾಜಿಕ ನ್ಯಾಯ ಬಗ್ಗೆ ಚಿಂತಿಸುತ್ತಿದ್ದ ಸಂಘ ಜೀವಿ ಪಾರ್ಥಣ್ಣ ಒಂದು ದೊಡ್ಡ ಸಂಘಟನಾ ಶಕ್ತಿಯಾಗಿದ್ದರು. ಸಮಾಜದ ಅಭಿವೃದ್ಧಿಯ ಬಗ್ಗೆ ಸದಾ ಚಿಂತಿಸುತ್ತಿದ್ದ ಪಾರ್ಥಣ್ಣ, ಒಳ ಮೀಸಲಾತಿ ಕನಸು ಕಾಣುತ್ತಾ ಮಹತ್ತರವಾದ ಆಶಾಭಾವನೆ ಇಟ್ಟುಕೊಂಡಿದ್ದರು. ಈ ಬಗ್ಗೆ ಸುಪ್ರಿಂ ಕೋರ್ಟಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಮೊರೆ ಹೋಗುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ನಂತರ ಬಗ್ಗೆ ಜನ ಜಾಗೃತಿ ಮೂಡಿಸುವಲ್ಲಿ ಸತತ ಪ್ರಯತ್ನದಲ್ಲಿದ್ದರು.
ಬಿಕೆಯವರ ಜೊತೆಗೆ ದಲಿತ ಚಳುವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಪಾರ್ಥಣ್ಣ, ದಕ್ಷಿಣ ಭಾರತದ ಮಾತಂಗ ಪರಿವಾರದ ಸಾಹಿತ್ಯ, ಚಳವಳಿ, ಹೋರಾಟದ ಜೊತೆಗೆ ನಡೆಯುತ್ತಾ ಸಾಕಷ್ಟು ಶ್ರಮ ಹಾಕಿದ್ದರು. ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಇಡೀ ಭಾರತದ ಮಾತಂಗ ಪರಿವಾರವನ್ನು ಸಂಘಟಿಸುವ ಮಹದಾಸೆ ಹೊಂದಿದ್ದವರು. ಮಾತಂತ ಸಾಹಿತ್ಯ ಪರಿಷತ್ ರಚನೆಗೆ ಪ್ರಮುಖ ಪಾತ್ರವಹಿಸಿ, ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿದ್ದು ಮಾತಂಗ ಸಂಸ್ಕೃತಿಯ ನವ ಚೇತನಕ್ಕೆ ಪುಷ್ಟಿ ನೀಡಿದವರು. ಕ್ರಾಂತಿಕಾರಿ ಗದ್ದಾರ್, ಆಂಧ್ರದ ಮಂದ ಕೃಷ್ಣ ಮಾದಿಗ ಸೇರಿದಂತೆ ದಕ್ಷಿಣ ಭಾರತದ ಕ್ರಾಂತಿಕಾರಿ ಸಾಮಾಜಿಕ ಹೋರಾಟಗಾರರ ಒಡನಾಟ ಇಟ್ಟುಕೊಂಡು ಪ್ರವಾಸ ಮಾಡಿ, ದೊಡ್ಡ ಸಂಘಟನೆಯ ಕನಸು ಕಂಡವರು.
ಕ್ರಾಂತಿಕಾರಿ ಹಾಡುಗಾರಿಕೆ ಪರಿಚಯವಿದ್ದ ಅವರು ಸಮಾಜದ ಶೈಕ್ಷಣಿಕ, ಆರ್ಥಿಕ ಪ್ರಗತಿ ಬಗ್ಗೆ ಕನಸು ಕಾಣುತ್ತಿದ್ದವರು. ಹತ್ತು ಹದಿನೈದು ವರ್ಷಗಳಿಂದ ತಮ್ಮ ದೇಹ ತೂಕ ಹೆಚ್ಚಿ, ಆಯಾಸವಾಗುತ್ತಿದ್ದರೂ ಹೊಸ ತಲೆಮಾರಿನ ಜನರಿಗೆ ಹೋರಾಟದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು.
ಎನ್ ಜಿ ಒ ಸ್ಥಾಪಿಸಿ ನಾಡಿನಾದ್ಯಂತ ಸಾಮಾಜಿಕ ಸೇವಾಕಾರ್ಯದಲ್ಲಿ ತೊಡಗಿಕೊಂಡಿದ್ದರು. ಸಾಹಿತ್ಯ, ಸಂಘಟನೆ, ಶಿಕ್ಷಣ, ಉದ್ಯೋಗ, ಆರ್ಥಿಕ ಸಮಗ್ರ ಅಭಿವೃದ್ಧಿ ಬಗ್ಗೆ ಸದಾ ಚಿಂತಿಸುತ್ತಾ ಬರುವ ಒಳ್ಳೆಯ ದಿನಗಳ ಬಗ್ಗೆ ನಿರೀಕ್ಷೆಯಲ್ಲಿದ್ದರು. ಅವರು ಚಳುವಳಿ, ಹೋರಾಟ, ಸಙಘಟನೆಯ ದೊಡ್ಡ ಅನುಭವದ ಮೂಸೆ. ತಾನು, ತಮ್ಮವರು, ತಮ್ಮ ಮನೆಗಿಂಥ ಸಮಾಜದ ಬಗ್ಗೆಯೇ ಚಿಂತಿಸುತ್ತಿದ್ದ ಅವರಿಗೆ ಶಾಪವಾಗಿ ಕಾಡಿ, ಬಲಿ ಪಡೆದದ್ದು ಅವರ ಆರೋಗ್ಯದ ದುಸ್ಥಿತಿ.
ಒಳಗೆ ನೋವಿದ್ದರೂ ಸದಾ ಸಮಾಜದ ಸಂಘಟನೆ, ಬೆಳವಣಿಗೆ ಬಗ್ಗೆ ಚಿಂತಿಸುತ್ತಿದ್ದ ಸಮಾಜದ ಚೈತನ್ಯ ಪಾತ್ರ ಪಾರ್ಥಸಾರಥಿ ಇದೀಗ ಮರೆಯಾಗಿದ್ದು, ಸಮಾಜಕ್ಕೆ ಬಹು ದೊಡ್ಡ ನಷ್ಟ.
ಶಿಸ್ತು, ಸಮಯ ಪ್ರಜ್ಞೆ, ಸತತ ಶ್ರಮ, ಪ್ರಯತ್ನ, ಪ್ರಾಮಾಣಿಕತೆ ಜೊತೆಗೆ ಸಾಗುತ್ತಾ ಸಹಾಯ ಕೇಳಿ ಬಂದವರಿಗೆ ಕೈಲಾದ ಸಹಾಯ ಮಾಡುತ್ತಿದ್ದರು. ಅವರ ಹೋರಾಟದ ಜೀವನ ನಮ್ಮಂಥವರಿಗೆ ಮಾದರಿ. ಕೇವಲ 59 ವರ್ಷದಲ್ಲೆ ನಮ್ಮನ್ನು ಅಗಲಿ, ಸಮಾಜವನ್ನು ದುಃಖ ಸಾಗರದಲ್ಲಿ ಮುಳುಗಿಸಿದ ಸಮಾಜದ ಹೋರಾಟದ ಜ್ಯೋತಿಯಾಗಿದ್ದ ಪಾರ್ಥಣ್ಣ, ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಆಶಿಸುತ್ತಾ, ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ.
ಬರಹ: ತಿಪಟೂರು ಕೃಷ್ಣ,
ಪತ್ರಕರ್ತರು, ತಿಪಟೂರು