ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಹಳೆಯ ಉಕ್ಕಿನ ಸೇತುವೆಯು ಶಿಥಿಲಾವಸ್ಥೆಗೆ ತಲುಪಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸಂಚಾರ ನಿಷೇಧ ಮಾಡಿ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಡಿ.ಭಟ್ ಅವರು ಆದೇಶಿಸಿದ್ದಾರೆ.
ಸೇತುವೆಯ ಧಾರಣಾ ಸಾಮರ್ಥ್ಯ ಪರಿಶೀಲನೆ ಮಾಡಿ ವರದಿ ಬಂದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವಂತೆ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಆದೇಶ ಮಾಡಿದ್ದಾರೆ.
ಈ ಬಗ್ಗೆ ಈದಿನ ಡಾಟ್ ಕಾಮ್ ಜೊತೆಗೆ ಮಾತನಾಡಿದ ತಹಶೀಲ್ದಾರ್ ಅರ್ಚನಾ ಡಿ.ಭಟ್, “ಮುಂದಿನ ದಿನಗಳಲ್ಲಿ ಅನಾಹುತ ಆಗಬಾರದೆಂಬ ನಿಟ್ಟಿನಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ. ಸೇತುವೆಯ ಧಾರಣಾ ಸಾಮರ್ಥ್ಯದ ಬಗ್ಗೆ ತಾಲೂಕು ಆಡಳಿತಕ್ಕೆ ಸಂಬಂಧಪಟ್ಟ ಇಂಜಿನಿಯರ್‌ಗಳಿಂದ ವರದಿ ಕೇಳಿದ್ದೆವು. ಆದರೆ ಈ ಬಗ್ಗೆ ಇನ್ನೂ ವರದಿ ಬಂದಿಲ್ಲ. ವರದಿ ಬಂದ ಬಳಿಕ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸುವ ಸಂಬಂಧ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸಂಚಾರ ನಿಷೇಧಿಸಿ ಆದೇಶ ಹೊರಡಿಸುವ ಬಗ್ಗೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲೂ ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ” ಎಂದು ತಿಳಿಸಿದ್ದಾರೆ.

ಪಾಣೆಮಂಗಳೂರು ಹಳೆ ಸೇತುವೆಯ ಹಿನ್ನೆಲೆ
ಪಾಣೆಮಂಗಳೂರು ಹಳೆ ಸೇತುವೆಯು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನಲ್ಲಿ ನೇತ್ರಾವತಿ ನದಿಯ ಮೇಲೆ ನಿರ್ಮಿತವಾದ ಬ್ರಿಟೀಷರ ಕಾಲದ ಒಂದು ಐತಿಹಾಸಿಕ ಸೇತುವೆಯಾಗಿದೆ. ಈ ಸೇತುವೆಯು ಪಾಣೆಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದು, ಸ್ಥಳೀಯರಿಗೆ ಸಂಚಾರದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.

ಪಾಣೆಮಂಗಳೂರಿನ ಉಕ್ಕಿನ ಸೇತುವೆ 111 ವರ್ಷವನ್ನು ಪೂರೈಸಿದ್ದು, ಅವಿಭಜಿತ ದ.ಕ. ಜಿಲ್ಲೆಯ ಮೊದಲ ಸಂಪರ್ಕ ಸೇತುವೆ ಎನ್ನುವ ಹೆಗ್ಗಳಿಕೆಯೂ ಇದಕ್ಕಿದೆ. ಬ್ರಿಟಿಷ್ ಕಾಲದಲ್ಲಿ ನಿರ್ಮಾಣಗೊಂಡು ಇತಿಹಾಸದ ಕೊಂಡಿಯಾಗಿರುವ ಈ ಸೇತುವೆಯನ್ನು ಐತಿಹಾಸಿಕ ಸ್ಮಾರಕವಾಗಿ ರಕ್ಷಿಸಬೇಕು ಎನ್ನುವ ಬೇಡಿಕೆಯೂ ಇಲ್ಲಿನ ಜನರದ್ದು. ಈ ಸೇತುವೆಯಲ್ಲಿ ಘನವಾಹನಗಳ ಸಂಚಾರವನ್ನು ಜಿಲ್ಲಾಧಿಕಾರಿ ನಿಷೇಧಿಸಿದ್ದರೂ ಪಾಣೆಮಂಗಳೂರಿಗೆ ಸರಕು ಹೊತ್ತು ತರುತ್ತಿದ್ದ ಲಾರಿಗಳ ಸಂಚಾರ ನಿರಾತಂಕವಾಗಿ ಮುಂದುವರಿದಿತ್ತು. ಸೇತುವೆಯಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಎಚ್ಚೆತ್ತುಕೊಂಡ ಬಂಟ್ವಾಳ ಪುರಸಭೆಯ ಅಧಿಕಾರಿಗಳು, ಸೇತುವೆಯ ಎರಡೂ ಪಾರ್ಶ್ವಗಳಲ್ಲಿ ಘನ ವಾಹನಗಳು ಪ್ರವೇಶಿಸದಂತೆ ತಡೆಬೇಲಿ ನಿರ್ಮಿಸಿದ್ದರು. ಆದರೆ, ಕೆಲ ತಿಂಗಳುಗಳ ಹಿಂದೆ ಘನವಾಹನವೊಂದು ತಡೆಬೇಲಿಯನ್ನು ಗಮನಿಸದೆ ನೇರವಾಗಿ ನುಗ್ಗಿಸಿದ್ದರಿಂದ ತಡೆಬೇಲಿ ಹಿಗ್ಗಿ ಸೇತುವೆಯ ರಕ್ಷಣೆಗಿದ್ದ ಬೇಲಿಗೂ ಹಾನಿಯುಂಟಾಗಿತ್ತು.

ಪಾಣೆಮಂಗಳೂರು ಒಳಪೇಟೆ, ಶಂಭೂರು, ಬಂಟ್ವಾಳ ಒಳಪೇಟೆ, ನಂದಾವರ, ಸಜಿಪ, ಮೆಲ್ಕಾರ್, ಬೋಳಂಗಡಿ ಮತ್ತಿತರ ಭಾಗಗಳಿಂದ ಬರುವ ಜನರು ಈಗಲೂ ಪಾಣೆಮಂಗಳೂರಿನ ಈ ಹಳೆಯ ಉಕ್ಕಿನ ಸೇತುವೆಯನ್ನೇ ಅವಲಂಬಿಸಿಕೊಂಡಿದ್ದಾರೆ. ಸದ್ಯ ತಹಶೀಲ್ದಾರ್ ನಿಷೇಧ ಹೇರಿರುವುದರಿಂದ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಪ್ರಯಾಣಿಸಬೇಕಾದ ಅನಿವಾರ್ಯತೆ ಬಂದಿದೆ.