ಕಳೆದ ಜುಲೈ 16ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಉಂಟಾದ ಸ್ಥಳದಲ್ಲಿ ಡ್ರಜ್ಜಿಂಗ್ ಕಾರ್ಯಾಚರಣೆಯ ವೇಳೆ ಎರಡು ತಿಂಗಳ ಬಳಿಕ ಗಂಗಾವಳಿ ನದಿಯಲ್ಲಿ ಲಾರಿ ಸಹಿತ ಚಾಲಕ ಅರ್ಜುನ್ ಶವ ಪತ್ತೆಯಾಗಿದೆ.
ಲಾರಿಯ ಮಾಲೀಕ ಮುನಾಫ್ ಕೂಡ ಈ ಬಗ್ಗೆ ಹೇಳಿಕೆ ನೀಡಿದ್ದು, ಲಾರಿಯೊಳಗೆ ಅರ್ಜುನ್ ಅವರ ಶವ ಇರುವುದಾಗಿ ತಿಳಿಸಿದ್ದಾರೆ.
ಅಂಡರ್ ವಾಟರ್ ಕ್ಯಾಮರಾ ಬಳಸಿ ಪರಿಶೀಲನೆ ನಡೆಸಿದ ಬಳಿಕ ಲಾರಿ ಇರುವುದನ್ನು ದೃಢಪಡಿಸಿದ್ದ ಮುಳುಗು ತಜ್ಞರು, ಲಾರಿಗೆ ಕಬ್ಬಿಣದ ಕೊಕ್ಕೆಯನ್ನು ಸಿಕ್ಕಿಸಿದ್ದಾರೆ. ಆ ಬಳಿಕ ಇಂದು ಮಧ್ಯಾಹ್ನ ಮೂರು ಗಂಟೆಯ ವೇಳೆಗೆ ಲಾರಿಯನ್ನು ಮೇಲಕ್ಕೆತ್ತಿರುವುದಾಗಿ ವರದಿಯಾಗಿದೆ. ಲಾರಿಯೊಳಗೆ ಅರ್ಜುನ್ ಅವರ ಶವ ಇರುವುದಾಗಿ ಲಾರಿಯ ಮಾಲೀಕ ಮುನಾಫ್ ದೃಢಪಡಿಸಿದ್ದಾರೆ. ಆ ಮೂಲಕ 72ನೇ ದಿನದಲ್ಲಿ ನಾಪತ್ತೆಯಾಗಿದ್ದ ಪೈಕಿ ಅರ್ಜುನ್ ಶವ ಹಾಗೂ ಲಾರಿ ಪತ್ತೆಯಾಗಿದೆ.
ಶಿರೂರು ಹೆದ್ದಾರಿಯಲ್ಲಿ ಮಣ್ಣು ಕುಸಿತದ ಘಟನೆ ಕಳೆದ ಜುಲೈ 16 ರಂದು ಸಂಭವಿಸಿತ್ತು. 11 ಜನ ನಾಪತ್ತೆಯಾಗಿದ್ದರು. 8 ಜನರ ಶವ ದೊರೆತಿದ್ದವು. 3 ಜನರಿಗಾಗಿ ಹುಡುಕಾಟ ನಡೆದಿತ್ತು. ಜೊತೆಗೆ ಕೇರಳ ಮೂಲದ ಟಿಂಬರ್ ತುಂಬಿದ ಲಾರಿ ಹಾಗೂ ಒಂದು ಟ್ಯಾಂಕರ್ ಕಾಣೆಯಾಗಿದ್ದವು.
