ಆಳ್ವಾಸ್ ಬಿ.ಎಡ್ ಕಾಲೇಜಿನ ವಿದ್ಯಾರ್ಥಿ ಮುಹಮ್ಮದ್ ರಿಯಾಝ್ ಕಾರ್ಕಳ ರವರು ಬರೆದ ತುಳುನಾಡಿನ ಕೋಮು ಸಾಮರಸ್ಯ ಪರಂಪರೆ ಎಂಬ ಪುಸ್ತಕವನ್ನು ಹಿರಿಯ ಜಾನಪದ ವಿದ್ವಾಂಸ ಡಾ.ಗಣನಾಥ ಎಕ್ಕಾರ್ ರವರು ಇತ್ತೀಚೆಗೆ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬಿಡುಗಡೆಗೊಳಿಸಿದರು. ಪುಸ್ತಕ ಬಿಡುಗಡೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಈ ಹಿಂದೆ ಸಂಸ್ಕಾರವಂತ ಬುದ್ಧಿವಂತರ ಜಿಲ್ಲೆ ಎಂದೇ ಪ್ರಸಿದ್ಧವಾಗಿತ್ತು. ಆದರೆ ಇಂದು ನಮ್ಮ ಈ ಕರಾವಳಿಯು ಧರ್ಮ ಸಂಘರ್ಷದ ನೆಲವಾಗಿ ಮಾರ್ಪಟ್ಟು ಕುಖ್ಯಾತಿಗೆ ಒಳಗಾಗಿದೆ. ತುಳುನಾಡಿನ ಸಾಮರಸ್ಯ ಪ್ರಣೀತವಾದ ಗತವೈಭವವನ್ನು ಪುನರ್ ಸ್ಥಾಪಿಸುವುದು ಕರಾವಳಿಯ ಪಾಲಿಗೆ ಅತಿ ಅಗತ್ಯದ ಕಾರ್ಯವಾಗಿದ್ದು ಈ ನಿಟ್ಟಿನಲ್ಲಿ ಪ್ರಸ್ತುತ ಕೃತಿಯು ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.
ಪುಸ್ತಕ ಪರಿಚಯ ಮಾಡಿದ ಇತಿಹಾಸಕಾರ ಡಾ. ಸುರೇಶ್ ರೈಯವರು, ಈ ಗ್ರಂಥವು ಸಮಾಜ ಶಾಸ್ತ್ರೀಯ ಸಂಶೋಧನಾ ವಿಧಾನದ ಎಲ್ಲಾ ಮಾನದಂಡಗಳನ್ನು ಪೂರ್ಣಗೊಳಿಸಿರುವುದರಿಂದ ಇದೊಂದು ಮಹತ್ವದ ಸಂಶೋಧನಾ ಗ್ರಂಥ ಎಂದು ಅಭಿಪ್ರಾಯಪಟ್ಟರು. ಆಶಯ ನುಡಿಗಳನ್ನಾಡಿದ ಸಾಹಿತಿ ಮುಷ್ತಾಕ್ ಹೆನ್ನಬೈಲುರವರು, ಸಂಘರ್ಷ ಎಂಬುವುದು ಸಕಲ ಜೀವಚರಾಚರಗಳಲ್ಲೂ ಕಂಡುಬರುವ ಸಾಮಾನ್ಯ ಗುಣವಾಗಿದ್ದು, ಅದನ್ನು ಮೀರಿ ಸಾಮರಸ್ಯವನ್ನು ಪುನರ್ ಸ್ಥಾಪಿಸಲು ಪ್ರಯತ್ನಿಸುವುದು ನಾಗರಿಕ ಸಮಾಜದ ಜವಾಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಈ ಕೃತಿಯು ಮಹತ್ವವನ್ನು ಪಡೆದಿರುತ್ತದೆ ಎಂದು ಅಭಿಪ್ರಾಯಪಟ್ಟರು. ಲೇಖಕ ಮುಹಮ್ಮದ್ ರಿಯಾಝ್ ರವರು ಸಭೆಯನ್ನುದ್ದೇಶಿಸಿ ಮಾತನಾಡಿ, ಈ ಕೃತಿಯು ವರ್ತಮಾನದ ತುಳುವರಿಗೆ ಗತ ತುಳುವರ ಸೌಹಾರ್ದ ಪ್ರಣೀತ ಜೀವನ ವಿಧಾನವನ್ನು ನೆನಪಿಸುವ ಮೂಲಕ ಸಾಮರಸ್ಯ ಪ್ರಣೀತ ತುಳುನಾಡನ್ನು ಕಟ್ಟುವ ಸಲುವಾಗಿ ಸಲ್ಲಿಸಿದ ಅಳಿಲುಸೇವೆಯಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶಂಕರಮೂರ್ತಿ ಎಚ್.ಕೆ ಯವರು ಸರ್ವರನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ಅಪೂರ್ವ ರವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಲೇಖಕರ ಮಾತಾಪಿತರು, ಆಳ್ವಾಸ್ ಬಿ.ಎಡ್ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಪ್ರಶಿಕ್ಷಣಾರ್ಥಿಗಳು ಹಾಗೂ ಪದವಿ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕೃತಿಯ ಬಗ್ಗೆ ಒಂದಿಷ್ಟು..
ಮುಹಮ್ಮದ್ ರಿಯಾಝ್ ಕಾರ್ಕಳ ರವರು ಬರೆದ ತುಳುನಾಡಿನ ಕೋಮು ಸಾಮರಸ್ಯ ಪರಂಪರೆ ಗ್ರಂಥವನ್ನು ಮೈಸೂರಿನ ಜ್ಯೋತಿ ಪ್ರಕಾಶನದವರು ಪ್ರಕಟಿಸಿದ್ದು, ಜನವರಿ 24 ರಂದು ಬಿಡುಗಡೆ ಕಂಡಿತು. ಇತಿಹಾಸಕಾರ ಡಾ.ಸುರೇಶ್ ರೈಯವರು ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆಯವರು ಇದಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ. ಅಲ್ಲದೆ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ರವರು ಈ ಗ್ರಂಥಕ್ಕೆ ಸಂದೇಶವನ್ನು ಬರೆದಿದ್ದಾರೆ. ತುಳುನಾಡಿನ ಕೋಮು ಸಾಮರಸ್ಯದ ಸಮಗ್ರ ಆಯಾಮದ ಅಂಶಗಳ ಬಗ್ಗೆ ಈ ಕೃತಿಯು ಬೆಳಕು ಚೆಲ್ಲುತ್ತದೆ.
