ಸಿದ್ದರಾಮಯ್ಯನವರ ಬಳಿಕ ಕಾಂಗ್ರೆಸ್ ಸರ್ಕಾರ ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಮೈಸೂರಿನ ಜ್ಞಾನಪ್ರಕಾಶ್ ಸ್ವಾಮೀಜಿ ಒತ್ತಾಯಿಸಿದರು.
ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ತಾಲೂಕು ಛಲವಾದಿ ಮಹಾಸಭಾದಿಂದ ಆಯೋಜಿಸಿದ್ದ ಶ್ರೀಜ್ಞಾನಪ್ರಕಾಶ್ ಸ್ವಾಮೀಜಿ ಅವರಿಗೆ ಅಭಿನಂದನಾ ಸಮಾರಂಭ ಮತ್ತು ಚಲವಾದಿ ಮಹಾಸಭಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಜನತೆಗೆ ಸಮುದಾಯಕ್ಕನುಗುಣವಾಗಿ ಜಾತಿವಾರು ಜನಸಂಖ್ಯೆ ತಿಳಿಯಬೇಕಿದೆ. ಜಾತಿಗಣತಿ ವರದಿಯನ್ನು ಸರ್ಕಾರ ಬಹಿರಂಗಪಡಿಸಬೇಕು ಸಂವಿಧಾನದ ಆಶಯದಂತೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದರು.
ಸ್ವಾಭಿಮಾನಿ ಸಮುದಾಯದ ಹಿತಕ್ಕಾಗಿ ಬದುಕಿರುತ್ತಾನೆ, ಸ್ವಾರ್ಥಿ ತನಗಾಗಿ ಬದುಕಿರುತ್ತಾನೆ. ಚಲವಾದಿ ಸಮುದಾಯಕ್ಕೆ ಅತ್ಯಂತ ಸ್ವಾಭಿಮಾನಿ ಪರಂಪರೆ ಇದೆ. ಅಂಬೇಡ್ಕರ್ ಅವರು ಮನಸ್ಮೃತಿಯನ್ನು ಸುಡುವ ಮೂಲಕ ಎಲ್ಲ ಸಮುದಾಯಗಳಿಗೂ ಬದುಕುವ ಹಕ್ಕನ್ನು ನೀಡಿದ್ದಾರೆ ಎಂದರು.
ಈ ದೇಶದಲ್ಲಿ ದಲಿತ ಸಮುದಾಯಗಳನ್ನು ಒಡೆಯುವ ಕೆಲಸ ಮಾಡಿದ್ದಾರೆ. ದಲಿತ ಸಮುದಾಯಗಳು ಸಂಘಟಿತರಾದರೆ ಈ ದೇಶದಲ್ಲಿ ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗಬಹುದು. ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು ಆಗ ಮಾತ್ರ ಅಂಬೇಡ್ಕರ್ ವಾದಿಗಳಾಗಲು ಸಾಧ್ಯ ಎಂದು ತಿಳಿಸಿದರು.
ವೈದ್ಯ ಡಾ. ನಾಗಭೂಷಣ್ ಮಾತನಾಡಿ ಭೀಮವಾದ ಸೋಲುವ ಆತಂಕ ಎದುರಾಗಿದೆ ಮನುಸ್ಮೃತಿ ವಿಜೃಂಭಿಸುತ್ತಿದೆ, ನಾವೆಲ್ಲಾ ವಿದ್ಯಾವಂತರು, ಪ್ರಜ್ಞಾವಂತರು ಈ ವಿಚಾರವನ್ನು ಗ್ರಹಿಸಬೇಕು ಗ್ರಹಿಸಿ ಜಾಗೃತರಾಗಿ ಹೋರಾಟ ಮಾಡಬೇಕು ಮುಂದಿನ ತಲೆಮಾರಿಗೆ ಹಾದಿ ಸುಗಮ ಮಾಡಿಕೊಡಬೇಕು ಮತ್ತು ಈ ದೇಶದ ಮೂಲ ನಿವಾಸಿಗಳಿಗೆ ಸಂವಿಧಾನಬದ್ಧವಾಗಿ ದೊರಕಬಹುದಾದ ಹಕ್ಕುಗಳಿಗಾಗಿ ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಶ್ರೀಬಸವವಾನಂದ ಸ್ವಾಮೀಜಿ, ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಈರಣ್ಣ, ಗೌರವಾಧ್ಯಕ್ಷ ಲೋಕೇಶ್, ಯುವ ಘಟಕದ ಅಧ್ಯಕ್ಷ ಎಚ್ ಕೆ ಮಧು, ಡಾ ನಾಗಭೂಷಣ್, ಶ್ವೇತ ಜಗದೀಶ್, ಸಾತೇನಹಳ್ಳಿ ರಮೇಶ್, ನಾಗರಾಜು, ವತ್ಸಲ, ಹಾಗೂ ಚಲವಾದಿ ಮಹಾಸಭಾ ಪದಾಧಿಕಾರಿಗಳು ಮತ್ತು ಸಮುದಾಯದ ಜನರಿದ್ದರು.