ಹೆತ್ತರಷ್ಟೇ ಅಮ್ಮ ಅಲ್ಲ, ಅಪ್ಪಾಜೀನೂ ಅಮ್ಮಾನೇ. ಅಮ್ಮನ ಅಂತಃಕರಣ, ಪೊರೆಯುವ ಗುಣ ಇರುವವರೆಲ್ಲರೂ ಅಮ್ಮಂದಿರೆ. ನಮ್ಮಲ್ಲಿ ಮಾತೃಹೃದಯ ಇರಬೇಕು ಎಂದು ತುಮಕೂರಿನ ಶ್ರೀ ಸಿದ್ದಗಂಗಾ ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಸೆಂಟರ್‌ನ ಪ್ರಾಂಶುಪಾಲೆ ಡಾ. ಶಾಲಿನಿ ಅಭಿಪ್ರಾಯಪಟ್ಟರು.
ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆಯು ತಾಯಂದಿರ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ “ಮಾತೃತ್ವ, ನನ್ನ ಅನುಭವ” ಎಂಬ ವಿಷಯದ ಕುರಿತು ನಡೆಸಿದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಗೆ ಬಹುಮಾನವಾಗಿ ಪ್ರೇಮಾ ಮಲ್ಲಣ್ಣ ದತ್ತಿನಿಧಿ ಪ್ರ ವಿತರಣೆಯನ್ನು, ಡಾ. ಬಿ ಆರ್ ಅಂಬೇಡ್ಕರ್ ಉಚಿತ ಕೋಚಿಂಗ್ ಸೆಂಟರ್, ಅಂಬೇಡ್ಕರ್ ಭವನದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
“ಅಮ್ಮನ ಮಹತ್ವ ಎಷ್ಟು ಹೇಳಿದರೂ ಸಾಲದು. ಅಮ್ಮ ಏನಾದರೂ ಬುದ್ದಿ ಮಾತು ಹೇಳಿದರೆ ಜಗಳ ಮಾಡಬೇಡಿ. ನೀವು ನಿಮ್ಮ ಅಪ್ಪ ಅಮ್ಮನನ್ನು ಹೇಗೆ ಕಾಣುತ್ತೀರಾ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತದೆ. ಪ್ರಮುಖ ಹೆಜ್ಜೆ ಇಡುವಾಗ ಅಮ್ಮನ ಸಲಹೆ ಪಡೆಯಿರಿ. ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡಬೇಡ ಎಂಬುದನ್ನು ನಾನು ಅಮ್ಮನಿಂದ ಕಲಿತೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದತ್ತಿದಾನಿ ಪ್ರೇಮಾ ಮಲ್ಲಣ್ಣ ಮಾತಾನಾಡುತ್ತಾ, “ಮನೆಯೇ ಮೊದಲ ಪಾಠಶಾಲೆ; ತಾಯಿಯೇ ಮೊದಲ ಗುರು. ತಾಯಿಯ ಪಾದದ ಕೆಳಗೆ ಸ್ವರ್ಗ ಇದೆ. ಆರಂಭದಿಂದಲೂ ಲೇಖಕಿಯರ ಸಂಘದಲ್ಲಿ ಕ್ರಿಯಾಶೀಲವಾಗಿ, ಸಂಘದ ಒಡನಾಟದಲ್ಲಿ ಇರುವುದರಿಂದ ತಾಯಂದಿರ ದಿನಾಚರಣೆ ಪ್ರಯುಕ್ತ ಪ್ರಬಂಧ ಸ್ಪರ್ಧೆಯನ್ನು ನಡೆಸಲು ಸಂಘದಲ್ಲಿ ದತ್ತಿಯಾಗಿ ತೊಡಗಿಸಿಕೊಳ್ಳಲಾಗಿದೆ” ಎಂದು ತಿಳಿಸಿದರು. ಸ್ಪರ್ಧೆಗೆ ಬಂದ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ತರಲು ಸಲಹೆ ಮಾಡಿದರು.
ಸಿ.ಎಲ್ ಸುನಂದಮ್ಮ ಮಾತನಾಡಿ, “ಸ್ಪರ್ಧೆಗೆ ಬಂದ ಪ್ರಬಂಧಗಳೆಲ್ಲವೂ ಭಾವಪೂರ್ಣವಾಗಿ ಉತ್ತಮವಾಗಿದ್ದವು” ಎಂದರು.
ಡಾ. ಬಿ.ಆರ್ ಅಂಬೇಡ್ಕರ್ ಉಚಿತ ಕೋಚಿಂಗ್ ಸೆಂಟರ್‌ನ ಅಧ್ಯಕ್ಷೆ ಜಯಶೀಲ ಮಾತನಾಡಿ, “ತಂದೆ ತಾಯಿಯರನ್ನು ನೋಡಿಕೊಳ್ಳುವ ಜವಾಬ್ದಾರಿ ಮಕ್ಕಳದೇ ಆಗಿದೆ. ಅವರನ್ನು ವೃದ್ಧಾಶ್ರಮಗಳಿಗೆ ದೂಡುವುದು ನಮ್ಮ ಸಂಸ್ಕೃತಿ ಅಲ್ಲ. ಪ್ರೀತಿ, ಕರುಣೆ, ವಿಶ್ವಾಸ ಕಡಿಮೆ ಆಗುತ್ತಾ ಇದೆ. ಸಾಮಾಜಿಕ ಹಾಗೂ ಕೌಟುಂಬಿಕ ಮೌಲ್ಯಗಳನ್ನು ಉಳಿಸಿಕೊಳ್ಳೋಣ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮಲ್ಲಿಕಾ ಬಸವರಾಜು ಮಾತನಾಡುತ್ತಾ, “ತಾಯಿಯು ತನ್ನ ಜೀವವನ್ನು ಒತ್ತೆ ಇಟ್ಟು ಮಗುವಿಗೆ ಜನ್ಮ ಕೊಡುವಳು. ಹೆರಿಗೆಯೆಂಬುದು ಅವಳಿಗೆ ಮರುಹುಟ್ಟು. ತಾಯಿಯ ಅಂತಃಕರಣ ಮತ್ತು ಪ್ರೀತಿಯಿಂದ ಸಮಾಜವನ್ನು ತಿದ್ದಿ ಮುನ್ನಡೆಸೋಣ” ಎಂದರು.
ಇದನ್ನೂ ಓದಿ: ತುಮಕೂರು | ಅನಂತಮೂರ್ತಿ ಆರಂಭಿಸಿದ ಚಲನೆ ಬಾನುರಿಂದ ಪೂರ್ಣ : ಅಗ್ರಹಾರ ಕೃಷ್ಣಮೂರ್ತಿ
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಗಿರಿಜಮ್ಮ ತೋವಿನಕೆರೆಗೆ ಪ್ರಥಮ ಬಹುಮಾನವಾಗಿ ರೂ 2000-00, ಶಾಂತಲಕ್ಷ್ಮಿ ಹೆಬ್ಬೂರು ದ್ವಿತೀಯ ಬಹುಮಾನ ರೂ 1500-00, ಆಕಾಶ್.ಬಿ.ಆರ್ ಬಾಣಸಂದ್ರಗೆ ತೃತೀಯ ಬಹುಮಾನ ರೂ 1000-00, ನಿದಾ ಆಪ್ರಿನ್ ತುಮಕೂರು ಸಮಾಧಾನಕರ ಬಹುಮಾನ ರೂ 500-00 ನಗದು ವಿತರಿಸಲಾಯ್ತು.
ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದ ಸಿ ಎನ್ ಸುಗುಣಾದೇವಿ, ಸಿ ಎಲ್ ಸುನಂದಮ್ಮ, ಉಪಾಧ್ಯಕ್ಷೆ ಸಿ ಎ ಇಂದಿರಾ, ಲಲಿತ ಮಲ್ಲಪ್ಪ, ಶೈಲಜಾ, ಸುಮಾ ಬೆಳಗೆರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮನೆಕೆಲಸ ಮಾಡುತ್ತಾ ಕಷ್ಟ ಪಟ್ಟು ತನ್ನ ಮೂರು ಮಕ್ಕಳನ್ನೂ ವಿದ್ಯಾವಂತರಾಗಿ ಮಾಡಿರುವ ವರಲಕ್ಷ್ಮಿ ರವರನ್ನು ಕಾರ್ಯಕ್ರಮದಲ್ಲಿ ಸತ್ಕರಿಸಲಾಯ್ತು.