ಅಟ್ರಾಸಿಟಿ ಕಾದಂಬರಿಯಲ್ಲಿ ಆರು ದಶಕಗಳ ಡಿಎಸ್‌ಎಸ್ ಸಂಘಟನೆಯನ್ನು ತುಂಬಾ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಅದರ ಗುಣಾತ್ಮಕ ಅಂಶವನ್ನು ಪ್ರಸ್ತಾಪಿಸುತ್ತಾ, ಸಂಘಟನೆ ಮುನ್ನೆಡೆಸಬೇಕಾದವರ ದೌರ್ಬಲ್ಯಗಳನ್ನು ಹೇಳಿದ್ದಾರೆ. ಸಂಘಟನೆಯನ್ನು ಮತ್ತೆ ಮರುಚಿಂತನೆಗೆ ಒಡ್ಡಿದ್ದಾರೆ ಎಂದು ಸಾಹಿತಿ ಪ್ರೊ. ಎಸ್ ಜಿ ಸಿದ್ದರಾಮಯ್ಯ ಹೇಳಿದರು.
ತುಮಕೂರು ನಗರದ ಕನ್ನಡ ಭವನದಲ್ಲಿ ಶನಿವಾರ ಕಸಾಪ, ದಲಿತ ಸಂಘರ್ಷ ಸಮಿತಿ, ಆದಿಜಂಬೂ ಪ್ರಕಾಶನದಿಂದ ಹಮ್ಮಿಕೊಂಡಿದ್ದ ಗುರುಪ್ರಸಾದ್ ಕಂಟಲಗೆರೆಯವರ ‘ಅಟ್ರಾಸಿಟಿ ‘ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
“ಸಾಂಸ್ಕೃತಿಕ ಸ್ವಾತಂತ್ರ್ಯ ಪಡೆಯದ ಮನಸ್ಸುಗಳು ಬೇರೆಯವರಿಗೆ ದಾಳವಾಗಿ ಬಳಕೆಯಾಗುತ್ತಿವೆ. ಸಾಂಸ್ಕೃತಿಕ ಜೀತದ ಮನಸ್ಥಿತಿ ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ ಹೋರಾಟದ ವೈಫಲ್ಯಕ್ಕೆ ಕಾರಣವಾಗಿದೆ. ಶಿಕ್ಷಣದಿಂದ ಮಾತ್ರ ಈ ಮನಸ್ಥತಿ ಹೊಡೆಯಬೇಕು. ಸಂಘಟನೆಗಳಿಗೆ ಇದರ ಅರಿವು ಆಗದಿದ್ದರೆ ಅವು ಗಟ್ಟಿಗೊಳ್ಳುವುದಿಲ್ಲ. ಸಂಘಟನೆಗಳು ಬಲವಾಗದ ಹೊರತು ಹೋರಾಟಗಳು ಗುರಿಮುಟ್ಟಲು ಸಾಧ್ಯವಿಲ್ಲ ಎಂಬುದನ್ನು ಈ ಕೃತಿಯಲ್ಲಿ ಕಾಣಬಹುದು” ಎಂದರು.
“ನಮ್ಮ ರಾಜ್ಯದಲ್ಲಿ ಜಮೀನ್ದಾರಿ ಧೋರಣೆ ಹೊಂದಿರುವ ಮನಸ್ಸುಗಳಿಂದ ಆಕ್ರಮಣ ನಡೆಯುತ್ತಿದೆ. ಮಣಿಪುರ ಘಟನೆ ಇಡೀ ದೇಶದ ಕ್ರೌರ್ಯವಾಗುದ್ದು, ಹಿಂಸೆಯ ದಾರಿಯಲ್ಲಿ ಸಾಗುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದೆ. ಇದು ಸಾಹಿತಿಗಳು, ಸಂಘಟನೆಗಳು ಆತ್ಮಾವಲೋಕನ ಮಾಡಿಕೊಳ್ಳುವ ಕಾಲಘಟ್ಟವಾಗಿದೆ” ಎಂದರು.
ಪತ್ರಕರ್ತ ಚ ಹ ರಘುನಾಥ ಮಾತನಾಡಿ, “ಐದಾರು ವರ್ಷಗಳಲ್ಲಿ ಅನೇಕ ಕಾದಂಬರಿಗಳು ಬಂದಿವೆ. ಆದರೆ ದುರಾದೃಷ್ಟವಶಾತ್ ಅವುಗಳ ಬಗ್ಗೆ ಚರ್ಚೆಯೇ ಆಗುತ್ತಿಲ್ಲ. ಗುರುಪ್ರಸಾದ್ ಕಂಟಲಗೆರೆ ಅವರ ಕಥೆಗಳು ಇಡೀ ಕನ್ನಡ ಕಥನ ಪರಂಪರೆಗೆ ಹೊಸಹೊಳವನ್ನು ನೀಡುತ್ತವೆ. ಹೊಸತಲೆಮಾರಿನ ಲೇಖಕರು ಸಾಹಿತ್ಯವನ್ನು ಕಲಾತ್ಮಕ ನೆಲೆಗಟ್ಟಿನಲ್ಲಿ ಕಾಣಿಸುತ್ತಿದ್ದಾರೆ” ಎಂದರು.
ಚಿಂತಕ ಸಿ ಜಿ ಲಕ್ಷ್ಮೀಪತಿ ಮಾತನಾಡಿ, “ಅಟ್ರಾಸಿಟಿ ಕಾದಂಬರಿ ಭಾರತೀಯ ಗ್ರಾಮಗಳ ಕ್ರೌರ್ಯವನ್ನು ಅನಾವರಣ ಮಾಡಿದೆ. ಜಾತಿವ್ಯವಸ್ಥೆ ಅಂದರೆ ಅಟ್ರಾಸಿಟಿ. ಸಾಂಸ್ಕೃತಿಕ ಕುರುವು ಇಲ್ಲದ ದಲಿತರಿಗೆ ಅಂಬೇಡ್ಕರ್ ಅವರೇ ಸಾಮಾಜಿಕ ಬಂಡವಾಳವಾಗಿದ್ದಾರೆ” ಎಂದರು.
ದಸಂಸ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಮಾತನಾಡಿ, “ನನ್ನ ಜೀವನದಲ್ಲಿ ಸಾವಿರಾರು ಅಟ್ರಾಸಿಟಿ ನೋಡಿದ್ದೇನೆ. ಅಟ್ರಾಸಿಟಿಗೆ ಅಸ್ಪೃತೆಯೇ ಮೂಲ. ಅಟ್ರಾಸಿಟಿ ಅಂದರೆ ಮಾನವೀಯತೆ ಮರೆತು ಮನುಷ್ಯರನ್ನು ಕೊಲ್ಲುವುದೇ ಆಗಿದೆ. ಪುರೋಹಿತಾಶಾಹಿಗಳು ಬಹಳ ಬುದ್ಧಿವಂತಿಕೆಯಿಂದ ಶೋಷಣೆ ಮಾಡುತ್ತಾರೆ. ತಂದೆ ಮಕ್ಕಳ ನಡುವೆಯೇ ಸಂಘರ್ಷ ಬರುವಂತೆ ಮಾಡಿ ಸಮಾಜ ಒಡೆಯುತ್ತಿದ್ದಾರೆ” ಎಂದರು.
ಕೃತಿಕಾರ ಗುರುಪ್ರಸಾದ್ ಕಂಟಲಗೆರೆ ಮಾತನಾಡಿ, “ಕಥೆಗಳು ರೆಡಿ ಚಿಕನ್ ಇದ್ದ ಹಾಗೆ, ಕಾದಂಬರಿ ಗುಡ್ಡೆಮಾಂಸದ ರೀತಿ, ಇದರಲ್ಲಿ ಎಲ್ಲವೂ ಇರುತ್ತದೆ. ಹಾಗಾಗಿ ಕಾದಂಬರಿ ರುಚಿಕಟ್ಟಾಗಿರುತ್ತೆ. ಸ್ವವಿಮರ್ಶೆಯಿಂದ ಕಾದಂಬರಿ ರಚಿತವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಮೈಕ್ರೋ ಫೈನಾನ್ಸ್ ಕಿರುಕುಳ; ಲೈಸೆನ್ಸ್ ರದ್ದುಗೊಳಿಸುವಂತೆ ದಸಂಸ ಆಗ್ರಹ
ಸಾಹಿತಿ ತುಂಬಾಡಿ ರಾಮಯ್ಯ ಮಾತನಾಡಿ, “ಕಾದಂಬರಿಯಲ್ಲಿನ ಸ್ಥಳದ ಹೆಸರು ಬದಲಿಸಿದರೆ ಕರ್ನಾಟಕದ ಇತಿಹಾಸ ಆಗುತ್ತದೆ. ಕಾದಂಬರಿಯಲ್ಲಿ ತಹಶೀಲ್ದಾರ್ ವೆಂಕಟರಮಣ್ ಬೂಟು ಬಿಟ್ಟು ಅಂಬೇಡ್ಕರ್ ಫೋಟೋಗೆ ಕೖಮುಗಿಯುವುದು, ಪ್ರಸ್ತುತ ಪ್ರಧಾನಿ ಮೋದಿ ಅವರು ಸಂವಿಧಾನವನ್ನು ಕಣ್ಣಿಗೆ ಒತ್ತಿಗೊಂಡಿರುವುದನ್ನು ನೆನಪಿಸುತ್ತದೆ. ದಲಿತ ಜನಾಂಗ ಸ್ವವಿಮರ್ಶೆ ಮಾಡಿಕೊಂಡು ಹೀಗಿರುವ ದಾರಿಯನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂಬುದೇ ಕಾದಂಬರಿ ಆಶಯ” ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಕೆ ಎಸ್ ಸಿದ್ದಲಿಂಗಪ್ಪ ಸೇರಿದಂತೆ ಹಲವು ಗಣ್ಯರು ಇದ್ದರು.
