ತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ಅಕ್ಟೋಬರ್ 26ರಂದು ಅಂಬೇಡ್ಕರ್ ಭವನದ ಪ್ರಗತಿಪರ ಚಿಂತಕರಿಂದ ಭೀಮಜ್ಯೋತಿ ರಥಯಾತ್ರೆಗೆ ಚಾಲನೆ ನೀಡಲಾಗುವುದು ಎಂದು ಆದಿಜಾಂಬವ ಕ್ಷೇಮಾಭಿವೃದ್ಧಿ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಸಿ ಎಸ್ ಮೂರ್ತಿ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಆದಿಜಾಂಬವ ಸೇವಾ ಸಮಿತಿ, ದಸಂಸ ಛಲವಾದಿ ಮಹಾಸಭಾ, ವಾಲ್ಮೀಕಿ ಮಹಾಸಭಾ ಹಾಗೂ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ನವೆಂಬರ್ ತಿಂಗಳಿನಲ್ಲಿ ತುರುವೇಕೆರೆಯಲ್ಲಿ ಭೀಮೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ತಾಲೂಕಿನ ಎಲ್ಲ ಗ್ರಾಮಗಳಿಗೆ ಭೀಮಜ್ಯೋತಿ ಕೊಂಡೊಯ್ಯುವ ಮೂಲಕ ಜನಜಾಗೃತಿ ಮೂಡಿಸಲಾಗುವುದು. ಸಂವಿಧಾನದ ಆಶಯಗಳನ್ನು ಕಾಪಾಡುವ ಮಹತ್ವಾಕಾಂಕ್ಷೆಯ ಭೀಮೋತ್ಸವ ಕಾರ್ಯಕ್ರಮವನ್ನು ಜನರಿಗೆ ತಲುಪಿಸುವ ಸದುದ್ದೇಶವನ್ನು ಸಮಿತಿ ಹೊಂದಿದೆ” ಎಂದು ಮಾಹಿತಿ ನೀಡಿದರು.
“ಭೀಮಜ್ಯೋತಿ ರಥಯಾತ್ರೆಗೆ ಪೂರಕ ಸಿದ್ಧತೆಗಳು ಭರದಿಂದ ಸಾಗಿದೆ. ಈ ಹಿನ್ನಲೆಯಲ್ಲಿ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಭೀಮಜ್ಯೋತಿ ಸಂಚಾರಕ್ಕೆ ಪೂರಕವಾಗಿ ಯುವಪಡೆಯನ್ನು ಸಜ್ಜುಗೊಳಿಸಲಾಗಿದೆ. ಭೀಮಜ್ಯೋತಿ ರಥಯಾತ್ರೆ ಪ್ರತಿ ಗ್ರಾಮಗಳಲ್ಲಿ ಸಂಚರಿಸುವ ವೇಳೆ ಸ್ಥಳೀಯರು ಹೆಚ್ಚಿನ ಸಹಕಾರ ನೀಡಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ; ಕಾಲಮಿತಿಯೊಳಗೆ ಪೂರ್ಣಗೊಳಿಸಲು ಗೃಹ ಸಚಿವರ ಸೂಚನೆ
ಸುದ್ದಿಗೋಷ್ಠಿಯಲ್ಲಿ ಬೀಚನಹಳ್ಳಿ ರಾಮಣ್ಣ, ಜಿ.ಪಂ. ಮಾಜಿ ಸದಸ್ಯ ಹನುಮಂತಯ್ಯ, ಪ.ಪಂ. ಸದಸ್ಯ ಚಿದಾನಂದ್, ಬಡಾವಣೆ ಶಿವರಾಜ್, ರೋಹಿತ್, ವಸಂತ್, ಛಲವಾದಿ ಮಹಾಸಭಾದ ಜಗದೀಶ್, ಹೊನ್ನೇನಹಳ್ಳಿ ಕೃಷ್ಣಪ್ಪ, ಕೃಷ್ಣಮಾದಿಗ ಸೇರಿದಂತೆ ಬಹುತೇಕರು ಇದ್ದರು.