ಕೃತಿಯೊಂದನ್ನು ಯಾವುದೇ ಪೂರ್ವಗ್ರಹಗಳಿಲ್ಲದೇ ಮುಕ್ತವಾಗಿ ಓದಬೇಕು. ಈ ಕೃತಿಯಲ್ಲಿ ಬರುವ ಬ್ರಾಹ್ಮಣ ಹೆಣ್ಣುಮಕ್ಕಳು ಅಸ್ಪೃಶ್ಯತೆ, ಅಸಮಾನತೆಗಳನ್ನು ಪ್ರಶ್ನಿಸುತ್ತಾರೆ. ಇಂತಹ ‘ಕ್ರಿಟಿಕಲ್ ಇನ್‌ಸೈಡರ್ʼಗಳ ಅವಶ್ಯಕತೆ ಎಲ್ಲ ಜಾತಿ, ಧರ್ಮಗಳಿಗೂ ಇದೆ ಎಂದು ತುಮಕೂರು ವಿವಿಯ ಡಾ. ಡಿ,ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಾಪಕಿ ಡಾ. ಗೀತಾ ವಸಂತ ಅಭಿಪ್ರಾಯಪಟ್ಟರು.
ನಗರದ ಓಶೋ ಧ್ಯಾನ ಕೇಂದ್ರದಲ್ಲಿ ಶನಿವಾರ (ಜ.20) ಕರ್ನಾಟಕ ಲೇಖಕಿಯರ ಸಂಘ ತುಮಕೂರು, ವಿಚಾರ ಮಂಟಪ ಬಳಗ ಹಾಗೂ ಸಾಕ್ಷಿ ಪ್ರಕಾಶನ ಇವರ ಸಹಯೋಗದಲ್ಲಿ ನಡೆದ ಸುಚೇತ ಕೆ.ಎಸ್. ಅವರ ‘ಬರಿ ಕತೆಯಲ್ಲ: ಅಗ್ರಹಾರದ ಕಥನʼ ಕೃತಿಯನ್ನು ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯ ಸಹಜ ಸಂಬಂಧಗಳಲ್ಲಿ ಇರಬಹುದಾದ ಋಣಾತ್ಮಕ ಮತ್ತು ಧನಾತ್ಮಕ ಅಂಶಗಳನ್ನು, ಸಿಕ್ಕುಗಳನ್ನು ಈ ಕೃತಿ ಅನಾವರಣಗೊಳಿಸುತ್ತದೆ. ಇಲ್ಲಿ ಒಂದು ಒಳಗುದಿಯಿದೆ. ಅತ್ಯಂತ ಕೇಡಿನ ಮತ್ತು ಘನವಾದ ಎರಡೂ ರೀತಿಯ ಸ್ತ್ರೀ ಪಾತ್ರಗಳೂ ಇಲ್ಲಿವೆ. ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿಯಲ್ಲಿ ಬರುವ ಬ್ರಾಹ್ಮಣ ಮಹಿಳಾ ಪಾತ್ರಗಳಿಗಿಂತ ಇಲ್ಲಿಯ ಪಾತ್ರಗಳು ಹೆಚ್ಚು ನೈಜವಾಗಿವೆ ಎಂದರು.
ಈ ಕೃತಿಯಲ್ಲಿ ನಾನಾ ಬಗೆಯ ಶೋಷಣೆ, ಗಂಡಸರ ಅಹಂ ಮತ್ತು ಬೇಜವಾಬ್ದಾರಿತನಗಳ ಕಾರಣಕ್ಕಾಗಿ ಖಿನ್ನತೆಗೆ ಜಾರುವ ಹಲವು ಸ್ತ್ರೀ ಪಾತ್ರಗಳು ಇವೆ. ಕೃತಿಯಲ್ಲಿ ಬರುವ ಗೌರಿ, ಮಂಗಳಗೌರಿ, ಸುಶಮ್ಮ ಮುಂತಾದವರು ಓದುಗರನ್ನು ಕಾಡುತ್ತಾರೆ. ಲೇಖಕಿಯ ಸೂಕ್ಷ್ಮತೆ, ಪ್ರಾಮಾಣಿಕತೆಗಳು ಈ ಕೃತಿಯಲ್ಲಿ ಕಾಣುತ್ತವೆ ಎಂದರು.
ಲೇಖಕಿ ಸುನಂದಮ್ಮ ಮಾತನಾಡಿ, ಈ ಕೃತಿ ಹಲವು ಆಯಾಮಗಳಲ್ಲಿ ಅನನ್ಯವಾದದ್ದು, ಲೇಖಕಿಯ ಸ್ವ-ಅನುಭವದ್ದು. ತಮ್ಮ ಮನಸ್ಸಿನ ತುಮುಲಗಳನ್ನು ಆಡು ಬಾಷೆಯಲ್ಲಿ ನಿರೂಪಿಸಿದ್ದಾರೆ. ಮನುಷ್ಯನಲ್ಲಿರುವ ಎಲ್ಲ ಗುಣಗಳನ್ನು ಇಲ್ಲಿನ ಪಾತ್ರಗಳು ಪ್ರತಿನಿಧಿಸುತ್ತವೆ ಎಂದರು.
ಕಲೇಸಂ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು ಮಾತನಾಡಿ, ನಾವು ಕಾಣದ, ಕಂಡಿರದ ಬ್ರಾಹ್ಮಣರ ಒಳಮನೆಯ ಹೆಣ್ಣುಮಕ್ಕಳ ಕಥನವಿದು. ನಮ್ಮನ್ನು ಕಾಡುವ ಹಲವು ಮಹಿಳಾ ಪಾತ್ರಗಳು ಈ ಕೃತಿಯಲ್ಲಿವೆ. ಕ್ರೌರ್ಯ, ಕಿತಾಪತಿ, ಹಿಂಸೆ, ಇವನ್ನು ಜೀರ್ಣಿಸಿಕೊಂಡು ಬದುಕಿದ ಪಾತ್ರಗಳನ್ನು ಲೇಖಕಿ ಬಹಳ ಪ್ರಾಮಾಣಿಕವಾಗಿ ಚಿತ್ರಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕೃತಿಯ ಲೇಖಕಿ ಸುಚೇತ ಕೆ.ಎಸ್, ಕಾರ್ಯಕ್ರಮ ಸಂಚಾಲಕಿ ಆಶಾರಾಣಿ ಕೆ ಬಗ್ಗನಡು, ಸುಚೇತನ ಸ್ವರೂಪ್, ಹನುಮಂತೇಗೌಡ, ಬಾ.ಹ. ರಮಾಕುಮಾರಿ, ಹರೀಶಾಚಾರ್, ಇಂದಿರಮ್ಮ, ಪಾರ್ವತಮ್ಮ ರಾಜ್‌ಕುಮಾರ್, ರಾಣಿ ಸತೀಶ್, ಉಮಾದೇವಿ, ಉಷಾ, ಆಶಾ ಸಚಿನ್, ಗಂಗಾಧರ ಬಾಣಸಂದ್ರ, ನವೀನ್ ಕುಮಾರ್, ಮರಿಯಂಬೀ ಮುಂತಾದವರು ಇದ್ದರು.