ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ಮನರೇಗಾ) ನಿರ್ಮಿಸಿದ ದನದ ಕೊಟ್ಟಿಗೆ ಕಾಮಗಾರಿಗೆ ಹಣ ಮಂಜೂರು ಮಾಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದರು. ಇದರಿಂದಾಗಿ, ಕಳೆದ 4 ವರ್ಷಗಳಿಂದ ಅಲೆದಾಡಿ ಹೈರಾಣಾಗಿದ್ದ ರೈತನೋರ್ವ ಹಸುಗಳನ್ನೇ ಪಂಚಾಯತಿಗೆ ಕರೆತಂದು ಪ್ರತಿಭಟಿಸಿದ್ದಾರೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಸಾಸಲುಕುಂಟೆ ಗ್ರಾಮ ಪಂಚಾಯಿತಿಯಲ್ಲಿ ಘಟನೆ ನಡೆದಿದ್ದು, ಕೆಂಚಮ್ಮನಹಳ್ಳಿ ಗ್ರಾಮದ ಗೋಪಾಲ್ ಎನ್ನುವ ರೈತ ಎತ್ತುಗಳೊಂದಿಗೆ ಆಗಮಿಸಿ ಪಂಚಾಯಿತಿ ಕಚೇರಿಯಲ್ಲಿ ಬೀಡು ಬಿಟ್ಟಿರುವುದು ಕಂಡುಬಂದಿದೆ. ಅಧಿಕಾರಿಗಳು ಆಗಮಿಸುವವರೆಗೂ ತನ್ನ ಹೋರಾಟ ನಿಲ್ಲುವುದಿಲ್ಲವೆಂದು ಪಟ್ಟುಹಿಡಿದಿದ್ದಾರೆ.
ಬಿಲ್ ನೀಡಲು ಲಂಚ ಪಡೆದುಕೊಂಡು ವಿನಾಕಾರಣ ತಡ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ತನ್ನ ಎತ್ತುಗಳೊಂದಿಗೆ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ತನ್ನ ಆಕ್ರೋಶ ಹೊರಹಾಕಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ದರ್ಗಾ ಕಮಾನ್ ನಿರ್ಮಾಣ ವಿವಾದ; ಎರಡು ಗುಂಪುಗಳ ನಡುವೆ ಘರ್ಷಣೆ
“ಉದ್ಯೋಗ ಖಾತ್ರಿ ಯೋಜನೆಯಲ್ಲಿ ನನ್ನ ಹೊಲದಲ್ಲಿ ದನದಕೊಟ್ಟಿಗೆ ನಿರ್ಮಾಣ ಮಾಡಿದ್ದು, ₹57,000 ಬಿಲ್‌ಗಾಗಿ ಗ್ರಾ.ಪಂ ಕಂಪ್ಯೂಟರ್ ಆಪರೇಟರ್ ನಿಂಗರಾಜು ₹3,000 ಲಂಚ ಪಡೆದುಕೊಂಡು ಹಣ ಮಂಜೂರು ಮಾಡದೆ ಅಲೆದಾಡಿಸುತ್ತಿದ್ದಾರೆ” ಎಂದು ರೈತ ಗೋಪಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ – ಸಿಟಿಜನ್ ಜರ್ನಲಿಸ್ಟ್ ಅನಿಲ್ ಕುಮಾರ್ ಪಾವಗಡ