ಪಂಜಾಬ್‌ನ ಪಠಾಣ್ ಕೋಟ್’ನಲ್ಲಿ ಬಿಎಸ್ಎಫ್ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಬಿಎಸ್ಎಫ್ ಯೋಧ ಎಸ್ ಜಿ ಸುರೇಶ್ ಕುಮಾರ್(36) ಚಂಡೀಗಢದಲ್ಲಿ ನಿಧನರಾಗಿದ್ದಾರೆ.
ತಾಲೂಕಿನ ಶ್ರೀರಂಗಪುರ ನಿವಾಸಿಯಾಗಿದ್ದ ಎಸ್ ಜಿ ಸುರೇಶ್ ಕುಮಾರ್ ಪಂಜಾಬ್‌ನ ಪಠಾಣ್ ಕೋಟ್’ನಲ್ಲಿ ಬಿಎಸ್ಎಫ್ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಪಾವಗಡ ತಾಲೂಕಿನ ಜಯರಾಮರೆಡ್ಡಿ ಹಾಗೂ ಸುನಂದಮ್ಮ ದಂಪತಿಯ ಹಿರಿಯ ಪುತ್ರ. ಮೃತರು ಇಬ್ಬರು ಮಕ್ಕಳು, ಪತ್ನಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.
ಕಿಡ್ನಿ ವೈಫಲ್ಯ: ಸುರೇಶ್ ಕುಮಾರ್ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಚಂಡೀಗಢದ ಪಿಜಿಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಭಾನುವಾರ ರಾತ್ರಿ ನಿಧನರಾಗಿದ್ದಾರೆ.
ಸುರೇಶ್ ಕುಮಾರ್ ಅವರು ಒಂದು ತಿಂಗಳ ಹಿಂದಷ್ಟೇ ಊರಿಗೆ ಬಂದು ಹೋಗಿದ್ದರು. ಪತ್ನಿಗೆ ಎರಡನೇ ಮಗುವಿನ ಹೆರಿಗೆ ಸಂದರ್ಭದಲ್ಲಿ ಬಂದು, ಹೆರಿಗೆ ಮುಗಿಸಿ ವಾಪಸಾಗಿದ್ದರು. ಕಳೆದ ಬಾರಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕರ್ತವ್ಯದ ನಿಮಿತ್ತ ಪಾವಗಡ ತಾಲೂಕಿನ ಪಳವಳ್ಳಿ ಗ್ರಾಮಕ್ಕೆ ಭದ್ರತೆಗೆ ಬಂದಿದ್ದರು.
ಅನಾರೋಗ್ಯದ ನಿಮಿತ್ತ ಮೃತಪಟ್ಟಿರುವ ಬಿಎಸ್ಎಫ್ ಯೋಧ ಎಸ್ ಜಿ ಸುರೇಶ್ ಕುಮಾರ್ ಅವರ ಪಾರ್ಥೀವ ಶರೀರ ಸೋಮವಾರ ಮಧ್ಯರಾತ್ರಿ ತಮ್ಮ ಸ್ವಗ್ರಾಮಕ್ಕೆ ಬರಲಿದ್ದು, ಮಂಗಳವಾರ ಅಂತ್ಯಕ್ರಿಯೆ ನಡೆಯಲಿದೆ.