ಬಿತ್ತನೆ ಬೀಜದ ದರ ಏರಿಕೆ ಸೇರಿದಂತೆ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಶುಕ್ರವಾರ ತುಮಕೂರು ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ ಮಾತನಾಡಿ, “ಮಳೆಗಾಲ ಆರಂಭವಾಗಿ ರೈತರು ಕೃಷಿ ಬಿತ್ತನೆ ಆರಂಭಿಸುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬಿತ್ತನೆ ಬೀಜಗಳ ಬೆಲೆಯನ್ನು ಶೇ.60-70ರಷ್ಟು ಏರಿಕೆ ಮಾಡಿದೆ. ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಲು ರಾಜ್ಯ ಸರ್ಕಾರ ರೈತರ ಜೇಬಿಗೆ ಕೈ ಹಾಕಿದೆ” ಎಂದು ಆಪಾದಿಸಿದರು.
“ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 13 ತಿಂಗಳಿನಿಂದ ರೈತರ ಪರವಾದ ಯಾವ ಯೋಜನೆಯನ್ನೂ ರೂಪಿಸಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ರೈತ ಯೋಜನೆಗಳನ್ನು ಮುಂದುವರೆಸದೆ ಸ್ಥಗಿತಗೊಳಿಸಿ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಇಂತಹ ಸರ್ಕಾರದ ವಿರುದ್ಧ ರಾಜ್ಯದ ರೈತರು ಸಿಡಿದೆದ್ದಿದ್ದಾರೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಮಂತ್ರಿಗಳಿಗೆ ಘೇರಾವ್ ಹಾಕಿ ತೀವ್ರ ಹೋರಾಟ ಮಾಡಲಿದ್ದಾರೆ” ಎಂದು ಎಚ್ಚರಿಕೆ ನೀಡಿದರು.
“ಮಳೆ ಕೊರತೆ, ಅಸಮರ್ಪಕ ಬೆಳೆ ಪರಿಹಾರ, ಪರಿಹಾರದ ಹಣ ಸಾಲಕ್ಕೆ ಜಮಾ ಆಗುವುದೂ ಸೇರಿದಂತೆ ರೈತರು ಹಲವು ರೀತಿಯಲ್ಲಿ ಸಮಸ್ಯೆ ಅನುಭವಿಸುತ್ತಿದ್ದಾರೆ. ಗಾಯದ ಮೇಲೆ ಉಪ್ಪು ಸುರಿದಂತೆ ಸರ್ಕಾರ ಬಿತ್ತನೆ ಬೀಜಗಳ ಬೆಲೆಯನ್ನು ವಿಪರೀತವಾಗಿ ಹೆಚ್ಚಳ ಮಾಡಿದೆ. ಕೃಷಿ ಉಪಕರಣಗಳ ಸಹಾಯಧನ ಬಿಡುಗಡೆ ಮಾಡಿಲ್ಲ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡದೆ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲಿಕಿಸಿದೆ” ಎಂದು ಬ್ಯಾಟರಂಗೇಗೌಡ ದೂರಿದರು.
“ಕಾಂಗ್ರೆಸ್ ಸರ್ಕಾರ ಈವರೆಗೂ ಯಾವುದೇ ಅಭಿವೃದ್ಧಿ ಕಾರ್ಯ ಆರಂಭಿಸಿಲ್ಲ. ಶಾಸಕರಿಗೂ ಅನುದಾನ ನೀಡಿಲ್ಲ. ಎಸ್‌ಸಿ-ಎಸ್‌ಟಿ ಸಮಾಜದ ಅಭಿವೃದ್ಧಿಯ ಹಣವನ್ನು ನಕಲಿ ಖಾತೆ ಸೃಷ್ಟಿಸಿ ವರ್ಗಾವಣೆ ಮಾಡಿಕೊಂಡು ಲೂಟಿ ಮಾಡಿ ಚುನಾವಣೆ ಗೆಲ್ಲಲು ಕಾಂಗ್ರೆಸ್ ಸರ್ಕಾರ ಬಳಕೆ ಮಾಡಿಕೊಂಡಿದೆ” ಎಂದ ಆರೋಪಿಸಿರು.
ಪ್ರತಿಭಟನೆ ಬಳಿಕ ಜಂಟಿ ಕೃಷಿ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನಕಲಿ ಆಧಾರ್ ಕಾರ್ಡ್, ನಕಲಿ ಲೈಸೆನ್ಸ್ ತೋರಿಸಿದ ವ್ಯಕ್ತಿ; ಬಿತ್ತನೆ ಬೀಜ ಕಂಪನಿ, ವಿತರಕರಿಗೆ ವಂಚನೆ
ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್ ಎಸ್ ರವಿಶಂಕರ್ ಹೆಬ್ಬಾಕ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದರಾಮಣ್ಣ, ಪ್ರಧಾನ ಕಾರ್ಯರ್ಶಿಗಳಾದ ರವೀಂದ್ರ, ಹೆಚ್ ಬಿ ಸಿದ್ಧರಾಮಯ್ಯ, ಉಪಾಧ್ಯಕ್ಷ ತಿರುಮಲೇಶ್, ರಾಮಲಿಂಗಯ್ಯ, ಗುಬ್ಬಿ ತಾಲೂಕು ಅಧ್ಯಕ್ಷ ವೆಂಕಟೇಶ್‌ಗೌಡ, ನಗರ ಅಧ್ಯಕ್ಷ ಸತ್ಯಮಂಗಲ ಜಗದೀಶ್, ಮಧುಗಿರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ನಗರ ಬಿಜೆಪಿ ಅಧ್ಯಕ್ಷ ಹನುಮಂತರಾಜು, ಯುವಮೋರ್ಚಾ ಜಿಲ್ಲಾಧ್ಯಕ್ಷ ನವಚೇತನ್, ಪ್ರಧಾನ ಕಾರ್ಯದರ್ಶಿ ಧನುಷ್, ನಗರ ಪಾಲಿಕೆ ಮಾಜಿ ಸದಸ್ಯ ವಿಷ್ಣುವರ್ಧನ್, ಮುಖಂಡರಾದ ಜಯಣ್ಣ, ಹನುಮಂತರಾಯಪ್ಪ, ತಿಮ್ಮಣ್ಣ, ಹನುಮಂತರಾಜು, ಬಂಬೂ ಮೋಹನ್, ಗಣೇಶ್‌ಪ್ರಸಾದ್, ಜಿ ಎಸ್ ನಂದಿನಾಥ್ ಸೇರಿದಂತೆ ಇತರರು ಇದ್ದರು.
