ದೇಶದ ಜನಸಾಮಾನ್ಯರ ಬದುಕು ಹಾಗೂ ಭವಿಷ್ಯವನ್ನು ತೀರ್ಮಾನಿಸುವ ಲೋಕಸಭಾ ಚುನಾವಣೆಗೆ ದಿನಗಣನೆಗಳು ಪ್ರಾರಂಭವಾಗಿವೆ. ಇಂತಹ ಸಂದರ್ಭದಲ್ಲಿ ಕೋಮುವಾದಿ ಪಕ್ಷವನ್ನು ಸೋಲಿಸಿ ಪ್ರಜಾಪ್ರಭುತ್ವ ಗೆಲ್ಲಿಸದಿದ್ದರೆ ಭವಿಷ್ಯದಲ್ಲಿ ಚುನಾವಣೆ ಮತ್ತು ಚಳವಳಿಗಳಿಗೆ ಅವಕಾಶವಿರುವುದಿಲ್ಲ ಎಂದು ಎದ್ದೇಳು ಕರ್ನಾಟಕದ ಜನಸಂಘಟನೆಯ ತುಮಕೂರು ಜಿಲ್ಲಾ ಸಂಚಾಲಕಿ ಇಂದಿರಾ ಅಭಿಪ್ರಾಯಪಟ್ಟರು.
ತಿಪಟೂರಿನ ರೋಟರಿ ಭವನದಲ್ಲಿ ನಡೆದ ಎದ್ದೇಳು ಕರ್ನಾಟಕ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ನಡೆದ ‘ಸಮಕಾಲೀನ ಬಿಕ್ಕಟ್ಟು ಮತ್ತು ರಾಜಕೀಯ ನಡೆ’ ಎಂಬ ವಿಚಾರವಾಗಿ ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
“ಎದ್ದೇಳು ಕರ್ನಾಟಕದ ಮುಖ್ಯ ನರೇಟಿವ್ ರಾಷ್ಟ್ರಮಟ್ಟದಲ್ಲಿ ನಮ್ಮ ಧ್ವನಿ ಆಲಿಸುವಂತಹ ಪಕ್ಷ ರಾಷ್ಟ್ರಪ್ರಭುತ್ವ ಸ್ಥಾಪಿಸಬೇಕು ಎನ್ನುವುದಾಗಿದೆ. ಒಂದು ವೇಳೆ ನಮ್ಮ ಆಯ್ಕೆ ತಪ್ಪಾದರೆ ಮುಂದಿನ ಯುವ ಪೀಳಿಗೆಯ ಭವಿಷ್ಯದ ಜೀವನ ಕಷ್ಟದ ಪರಿಸ್ಥಿತಿಯಲ್ಲಿರುತ್ತದೆ” ಎಂದು ತಿಳಿಸಿದರು.
“ಈಗ ಬೆಲೆ ಏರಿಕೆ, ನಿರುದ್ಯೋಗ, ಅಸಮಾನತೆ, ಭೂತಗಳು ಕುಣಿದು ಕುಪ್ಪಳಿಸುತ್ತಿವೆ. ಅಂತಹ ವಿಚಾರಗಳನ್ನು ಪಕ್ಕಕ್ಕೆ ಇಟ್ಟು ಆಡಳಿತ ನಡೆಸುತ್ತಿರುವ ಪಕ್ಷ, ಭಾವನಾತ್ಮಕ ವಿಚಾರಗಳನ್ನು ಮುನ್ನಲೆಗೆ ತಂದು ರೈತರ ಸಾಲ ಮನ್ನಾ ಮಾಡದೆ ಕಾರ್ಪೊರೇಟ್ ವಲಯದ ಸಾಲವನ್ನು ಮನ್ನಾ ಮಾಡಿದೆ. ಶಿಕ್ಷಣಕ್ಕೆ ಸಿಗಬೇಕಾದ ಸೂಕ್ತ ಅನುದಾನ ಸಿಗದ ಕಾರಣ ಶಿಕ್ಷಣದ ಮಹತ್ವ ಕುಸಿಯುವಂತಾಗಿದೆ. ಜನಾಂಗೀಯ ದಾಳಿ, ಅಲ್ಪಸಂಖ್ಯಾತರ ಚರ್ಚ್, ಮಸೀದಿಗಳ ಮೇಲೆ ದಾಳಿ, ಮಹಿಳೆಯರ ಮೇಲಿನ ದಾಳಿ, ಮುಸ್ಲಿಮರ ವ್ಯಾಪಾರ ನೀತಿಯ ಮೇಲೆ ದಾಳಿ, ಮಣಿಪುರದ ಜನಾಂಗೀಯ ದಾಳಿ, ಸಾಕ್ಷಿ ಮಲ್ಲಿಕ್ ಅವರ ಜೀವನದ ಭವಿಷ್ಯದ ಮೇಲೆ ದಾಳಿ ನಡೆದರೂ ಕೂಡಾ ನ್ಯಾಯ ಕೊಡಬೇಕಾದವರು ಮಾತನಾಡುತ್ತಿಲ್ಲ. ರಾಜ್ಯದಿಂದ ಆಯ್ಕೆಯಾಗಿರುವ ಎಲ್ಲ ಸಂಸದರು ಅನ್ಯಾಯದ ವಿರುದ್ಧ ತುಟಿ ಬಿಚ್ಚುತ್ತಿಲ್ಲ. ಕೇಂದ್ರ ತನ್ನ ಪಾರಮ್ಯತೆ ಮೆರೆದು ಜನಸಾಮಾನ್ಯರ ಜೀವನಕ್ಕೆ ಬೆಲೆ ಇಲ್ಲ ಎಂಬಂತೆ ವರ್ತಿಸುತ್ತಿದೆ. ಆದ್ದರಿಂದ ಈ ಬಾರಿ ಸರಳತೆ ಮತ್ತು ಸಜ್ಜನಿಕೆಯನ್ನು ಮೈಗೂಡಿಸಿಕೊಂಡಿರುವ ಮುದ್ದಹನುಮೇಗೌಡರಿಗೆ ಮತ ನೀಡಬೇಕು” ಎಂದು ಕರೆ ನೀಡಿದರು.
ಕಾಂಗ್ರೆಸ್ ಮುಖಂಡ ಟೂಡ ಶಶಿಧರ್ ಮಾತನಾಡಿ, “ತಾಯಿಹೃದಯ ಹೊಂದಿರುವ ಮುದ್ದಹನುಮೆಗೌಡರು ತಿಪಟೂರಿನ ಕಲ್ಪತರು ನಾಡಿನ ಜನತೆಗೆ ಎತ್ತಿನಹೊಳೆಯ ಭೂಸ್ವಾಧೀನ ಮಾಡುವಾಗ ಆಗಿರುವ ಅನ್ಯಾಯವನ್ನು ಸರಿಪಡಿಸುತ್ತಾರೆ ಹಾಗೂ ಬಗರ್ ಹುಕುಂ ಕಮಿಟಿ ನ್ಯಾಯಯುತವಾಗಿ ಕೆಲಸ ಮಾಡುವಂತೆ ಸಲಹೆ ನೀಡುತ್ತಾರೆ. ಅಲ್ಲದೆ ಎತ್ತಿನಹೊಳೆಯಿಂದ ತಾಲೂಕಿಗೆ ಸಿಗಬೇಕಾದ ನೀರನ್ನು ದೊರಕಿಸಿಕೊಡುತ್ತಾರೆಂಬ ಭಾವನೆಯಿಂದ ಅವರಿಗೆ ಬೆಂಬಲ ಸೂಚಿಸುತ್ತೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಜನರಲ್ಲಿ ರಾಜಕೀಯ ಪ್ರಜ್ಞೆ ಮೂಡಿದರೆ ಬದಲಾವಣೆ ಸಾಧ್ಯ: ಕಾಂಗ್ರೆಸ್ ಅಭ್ಯರ್ಥಿ
ತುಮಕೂರಿನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಮಾತನಾಡಿ, “ರೈತ ಸಾಲಗಾರನಾಗಿ ಸಾಯಬಾರದು. ಇಲ್ಲಿ ಬೆಳೆಯುವ ತೆಂಗಿಗೆ ನಾನು ಒಳ್ಳೆಯ ಬೆಲೆ ಕೊಡಿಸುತ್ತೇನೆ. ಅಲ್ಲದೆ ನಾಫೆಡ್ ಅಧಿಕಾರಿಗಳು ಮನೆಯ ಬಾಗಿಲಿಗೆ ಬಂದು ಕೊಬ್ಬರಿ ಕೊಳ್ಳುವಂತೆ ಮಾಡುತ್ತೇನೆ. ಇಂತಹ ಸೇವೆಗಳನ್ನು ಬೇಗ ಅನುಷ್ಠಾನಗೊಳಿಸಲು ತಾಲೂಕಿನ ಜನತೆ ನನಗೆ ಹೆಚ್ಚಿನ ಮತಗಳನ್ನು ನೀಡಿ ನನ್ನ ʼಕೈʼ ಬಲಪಡಿಸಬೇಕು” ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ರೈತ ಸಂಘದ ನಾಯಕರುಗಳಾದ ತಿಮ್ಲಾಪುರ ದೇವರಾಜು ಹಾಗೂ ಕೆರಗೋಡಿ ಚನ್ನಬಸಪ್ಪ ಇದ್ದರು.
