ಪಾವಗಡ ನಗರದ ಹಳೇ ಸಂತೆ ಮೈದಾನದಲ್ಲಿ ರೈತ ಭವನ ಕಟ್ಟಿಸಿಕೊಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪೂಜಾರಪ್ಪ ಆಗ್ರಹಿಸಿದ್ದಾರೆ.
ತುಮಕೂರು ಜಿಲ್ಲೆ ಪಾವಗಡ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. “ನಗರದ ಹಳೇ ಸಂತೆ ಮೈದಾನದಲ್ಲಿ ಸುಮಾರು 2 ಎಕರೆಗಳಿಗಿಂತಲೂ ಹೆಚ್ಚು ಜಮೀನಿದೆ. ಈ ಜಮೀನಿನಲ್ಲಿ ಹಲವಾರು ಸಾರ್ವಜನಿಕರು ಶೆಡ್‌ಗಳನ್ನು ಹಾಕಿಕೊಂಡು ಸದರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಪುರಸಭೆಗೆ ಯಾವುದೇ ಆದಾಯ ಇರುವುದಿಲ್ಲ. ಅಲ್ಲದೆ ಈ ಸ್ಥಳವನ್ನು ಪ್ರಭಾವಶಾಲಿಗಳು ಒತ್ತುವರಿ ಮಾಡಿದ್ದಾರೆ. ಇದನ್ನು ಕೂಡಲೇ ತೆರವುಗೊಳಿಸಬೇಕು” ಎಂದು ಒತ್ತಾಯಿಸಿದರು.
“ರೈತ ಸಂಘ ಈ ಬಗ್ಗೆ 20 ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬಂದರೂ ಕೂಡ ನಮಗೆ ರೈತ ಭವನವಿರುವುದಿಲ್ಲ. ಈಗ ಮೇಲ್ಕಂಡ ಸಂತೆ ಜಮೀನಿನಲ್ಲಿ ನಮಗೆ ಪೂರ್ವ-ಪಶ್ಚಿಮವಾಗಿ 60 ಅಡಿಗಳು, ಉತ್ತರ-ದಕ್ಷಿಣವಾಗಿ 60 ಅಡಿಗಳು ಖಾತೆ ವಗೈರೆ ಲೈಸೆನ್ಸ್ ಮಂಜೂರು ಮಾಡಿಕೊಡಬೇಕು” ಎಂದರು.
“ಪುರಸಭೆ ಮುಖ್ಯಾಧಿಕಾರಿಗಳು, ಪುರಸಭೆ ಅಧ್ಯಕ್ಷರು, ಎಲ್ಲ ಸದಸ್ಯರುಗಳು ಒಮ್ಮತದಿಂದ ರೈತಭವನ ಕಟ್ಟಿಕೊಳ್ಳಲು ಅನುಮತಿ ನೀಡಿ, ಸಹಕರಿಸಿ ಒಂದು ವಾರದೊಳಗೆ ರೈತ ಭವನ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬಳಕೆಯಾಗದೇ ಪಾಳುಬಿದ್ದಿದೆ ʼಕಮಲನಗರ ಬಸ್ ನಿಲ್ದಾಣʼ
ರೈತ ಭವನ ನಿರ್ಮಾಣಕ್ಕೆ ವಿಳಂಬ ಮಾಡಿದರೆ ಮುಂದಿನ ದಿನಗಳಲ್ಲಿ ಪುರಸಭೆ ಕಾರ್ಯಲಯದ ಎದುರು ಕರ್ನಾಟಕ ರೈತ ಸಂಘದ ಅಧ್ಯಕ್ಷರು ಮತ್ತು ರೈತ ಸಂಘದ ಪದಾಧಿಕಾರಿಗಳು ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ರೈತ ಸಂಘದ ಪದಾದಿಕಾರಿಗಳು, ಸದಸ್ಯರು ಹಾಗೂ ಕಾರ್ಯಕರ್ತರು ಇದ್ದರು.