ತುಮಕೂರು | ಅಧಿಕಾರ ವಿಕೇಂದ್ರೀಕರಣದಿಂದ ಪಂಚಾಯತಿಗಳ ಅಭಿವೃದ್ಧಿ : ಪರಮೇಶ್ವರ ಅಭಿಮತ

Date:

Advertisements

 ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಿಂದ ಪಂಚಾಯತಿಗಳಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ತಿಳಿಸಿದರು. 

 ತುಮಕೂರು ನಗರದ ಹೊರವಲಯ ಸಿದ್ಧಾರ್ಥನಗರದ ಗಂಗಾಧರಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯತಿಗಳನ್ನು ಮತ್ತಷ್ಟು ಬಲಪಡಿಸಲು ಕಾರ್ಯಾಗಾರವನ್ನು ಏರ್ಪಡಿಸಲಾಗಿದ್ದು, ಪಂಚಾಯತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ತೆರಿಗೆ ವಸೂಲಾತಿ, ಸ್ವಚ್ಛತೆ, ಮಹಿಳಾ ಸಬಲೀಕರಣ, ನಿವೇಶನ, ಮನೆ ಹಂಚಿಕೆ, ಆರ್ಥಿಕ ಶಿಸ್ತಿನ ನಿರ್ವಹಣೆ ಬಗ್ಗೆ ಈ ಕಾರ್ಯಾಗಾರದಲ್ಲಿ ತರಬೇತಿ ನೀಡಲಾಗುವುದು ಎಂದು ತಿಳಿಸಿದರು. 

 ಭಾರತದಲ್ಲಿರುವ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನು ಇತರೆ ಯಾವುದೇ ದೇಶದಲ್ಲಿ ಕಾಣ ಸಿಗಲು ಸಾಧ್ಯವಿಲ್ಲ. ಇಡೀ ವಿಶ್ವದಲ್ಲಿಯೇ ಭಾರತದ ಆಡಳಿತ ವಿಕೇಂದ್ರೀಕರಣ ವ್ಯವಸ್ಥೆ ಮಾದರಿಯಾಗಿದೆ. ಎರಡನೇ ಅತೀ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಅಮೆರಿಕಾದಂತಹ ಮುಂದುವರೆದಿರುವ ರಾಷ್ಟ್ರ ದಲ್ಲಿಯೂ ಸ್ಥಳೀಯ ಸಂಸ್ಥೆಗಳ ಆಡಳಿತವು ವ್ಯವಸ್ಥಿತವಾಗಿಲ್ಲ. ಆದರೆ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ಬಹಳ ಯಶಸ್ಸನ್ನು ಕಂಡಿದೆ ಎಂದು ಅಭಿಪ್ರಾಯಪಟ್ಟರು. 

Advertisements

 ನಮ್ಮ ದೇಶದ ಆಡಳಿತ ವಿಕೇಂದ್ರೀಕರಣ ವ್ಯವಸ್ಥೆಯು ನೆನ್ನೆ ಮೊನ್ನೆಯದಲ್ಲ. ವೇದ-ಪುರಾಣದ ಕಾಲ, ಮೌರ್ಯ-ಗುಪ್ತರ ಆಡಳಿತಾವಧಿ, 12ನೇ ಶತಮಾನದ ಜಗಜ್ಯೋತಿ ಬಸವೇಶ್ವರರ ಅನುಭವ ಮಂಟಪದ ಕಾಲದಿಂದಲೂ ಜಾರಿಯಲ್ಲಿದೆ ಎಂಬುದನ್ನು ಇತಿಹಾಸದ ಅವಲೋಕನದಿಂದ ತಿಳಿದು ಬಂದಿದೆ. ಜನಾಭಿಪ್ರಾಯಗಳ ಜೊತೆ-ಜೊತೆಗೆ ಆಡಳಿತ ನಡೆಸಬೇಕೆನ್ನುವುದೇ ವಿಕೇಂದ್ರೀಕರಣದ ಮೂಲ ಉದ್ದೇಶವೆಂದು ಹೇಳಿದರು.    

1001458506

 ಆಡಳಿತ ವಿಕೇಂದ್ರೀಕರಣ ವ್ಯವಸ್ಥೆಯು ಮಹಾತ್ಮ ಗಾಂಧೀಜಿಯವರ ಪರಿಕಲ್ಪನೆಯಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ರಾಜಧಾನಿಗಳಲ್ಲಿ ಯೋಜನೆಗಳನ್ನು ರೂಪಿಸುವುದರಿಂದ ಗ್ರಾಮಗಳು ಅಭಿವೃದ್ಧಿಯಾಗುವುದಿಲ್ಲವೆಂದು ಮನಗಂಡ ಸರ್ಕಾರವು ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನು ಜಾರಿಗೆ ತಂದಿತು. ಈ ವ್ಯವಸ್ಥೆಯಿಂದ ದೇಶದಲ್ಲಿ ಲಕ್ಷಾಂತರ ಮಹಿಳೆಯರು ಸ್ಥಳೀಯ ಆಡಳಿತದ ಅಧಿಕಾರದ ಚುಕ್ಕಾಣಿ ಹಿಡಿದು ಯಶಸ್ಸು ಕಂಡಿದ್ದಾರೆ. ಗ್ರಾಮ ಪಂಚಾಯುತಿ ಅಧ್ಯಕ್ಷ, ಉಪಾಧ್ಯಕ್ಷರಾಗಲು ಯಾವುದೇ ರಾಜಕೀಯ, ಶೈಕ್ಷಣಿಕ ಹಿನ್ನೆಲೆ ಹೊಂದಿರಬೇಕಾಗಿಲ್ಲ. ಉತ್ತಮ ಪ್ರಜಾ ಸೇವಾ ಮನೋಭಾವ ಹೊಂದಿರುವ ಯಾವುದೇ ಅಭ್ಯರ್ಥಿ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಹೊಂದಬಹುದು ಎಂದು ತಿಳಿಸಿದರು. 

1973ರ ಸಂವಿಧಾನದ ತಿದ್ದುಪಡಿಯನ್ವಯ ಸಮಾಜದಲ್ಲಿ ಎಲ್ಲರನ್ನೂ ಸಶಕ್ತರನ್ನಾಗಿ ಮಾಡಬೇಕು. ಮಹಿಳೆಯರು, ಶೋಷಿತರು, ಹಿಂದುಳಿದವರು, ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಾತಿ ಕಲ್ಪಿಸಬೇಕೆಂಬ ದೃಷ್ಟಿಯಿಂದ ಪೊಲೀಸ್, ಕಂದಾಯ, ಆರ್ಥಿಕ ಇಲಾಖೆ ಹೊರತುಪಡಿಸಿ ಉಳಿದ 29 ಇಲಾಖೆಗಳ ಅಧಿಕಾರವನ್ನು ಪಂಚಾಯತಿ ವ್ಯಾಪ್ತಿಗೆ ನೀಡಲಾಗಿದೆ. ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರು ತಮಗೆ ಸಿಕ್ಕ ಅಧಿಕಾರವನ್ನು ಜನಸೇವೆಗೆ ವಿನಿಯೋಗಿಸುವ ಮೂಲಕ ತಮ್ಮ ಪಂಚಾಯತಿಗಳನ್ನು ಮಾದರಿ ಪಂಚಾಯತಿಗಳನ್ನಾಗಿ ರೂಪಿಸಬೇಕೆಂದರು. 

 ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಸರ್ಕಾರ ನಿಗಧಿಪಡಿಸಿದ್ದ 42ಲಕ್ಷ ಮಾನವ ದಿನಗಳ ಸೃಜನೆಯ ಗುರಿಗೆ 63ಲಕ್ಷ ಮಾನವ ದಿನಗಳನ್ನು ಸೃಜಿಸುವ ಮೂಲಕ ತುಮಕೂರು ಜಿಲ್ಲಾ ಪಂಚಾಯಿತಿಯು ನರೇಗಾ ಪ್ರಗತಿಯಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಈ ಯೋಜನೆಯಡಿ 650 ಕೋಟಿ ರೂ.ಗಳನ್ನು ವೆಚ್ಚ ಮಾಡಿ ಬಡವರಿಗೆ ಉದ್ಯೋಗ ಕಲ್ಪಿಸುವುದರೊಂದಿಗೆ ಮೂಲಸೌಕರ್ಯದ ಆಸ್ತಿಗಳನ್ನು ನಿರ್ಮಿಸಲಾಗಿದೆಯಲ್ಲದೆ ಈ ಯೋಜನೆಯಡಿ 122 ಕೋಟಿ ವೆಚ್ಚದಲ್ಲಿ ಶಾಲಾ ಕಟ್ಟಡ, ಶೌಚಾಲಯ, ಆಟದ ಮೈದಾನ, ಆವರಣ ಗೋಡೆ ನಿರ್ಮಾಣ ಮಾಡಿ ರಾಜ್ಯಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು. 

 ಜನರ ಆರೋಗ್ಯ ಹಿತದೃಷ್ಟಿಯಿಂದ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ ತಲಾ 55 ಲೀ. ಶುದ್ಧ ನೀರೊದಗಿಸುವ ಜಲ್ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆ-ಮನೆಗೂ ನಳ ಸಂಪರ್ಕ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿ 2500 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಯೋಜನೆಯ ಕಾಮಗಾರಿಗಳು ಇನ್ನೂ ಶೇ.40ರಷ್ಟು ಅನುಷ್ಠಾನವಾಗಬೇಕಾಗಿದೆ ಎಂದು ತಿಳಿಸಿದರು.

 ಜಿಲ್ಲೆಯಲ್ಲಿ ಗುಬ್ಬಿ, ತಿಪಟೂರು, ಚಿಕ್ಕನಾಯಕನಹಳ್ಳಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಸರ್ಕಾರ ಸಂಗ್ರಹಿಸಿರುವ ಸೆಸ್ ಹಣದಿಂದ ಜಿಲ್ಲೆಯ ಅಭಿವೃದ್ಧಿಗಾಗಿ 2,500 ಕೋಟಿ ರೂ.ಗಳ ಅನುದಾನ ಮಂಜೂರಾಗಿದೆ. ಇದರಲ್ಲಿ 132 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಸ್ಪತ್ರೆಯ ನೂತನ ಕಟ್ಟಡವನ್ನು ನಿರ್ಮಿಸುವುದರೊಂದಿಗೆ 3 ತಾಲ್ಲೂಕುಗಳನ್ನು ಮಾದರಿ ತಾಲ್ಲೂಕುಗಳನ್ನಾಗಿ ರೂಪಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು. 

 ಇಲಾಖೆಗಳಲ್ಲಿರುವ ಕೆಲವು ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳನ್ನು ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸಲು ಪಂಚಾಯತಿ ಜನಪ್ರತಿನಿಧಿಗಳು, ಪಿಡಿಓಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಜನರಿಗೆ ಆರ್ಥಿಕ ಶಕ್ತಿ ನೀಡಬೇಕೆಂದು ಸರ್ಕಾರ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು, ಹಳ್ಳಿಗಾಡಿನ ಕೂಲಿಕಾರ್ಮಿಕರಿಗೂ ತಾನು ಬಡವನೆಂಬ ಭಾವನೆ ದೂರವಾಗುವ ರೀತಿಯಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕೆಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿರುವ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಹಲವಾರು ಪ್ರಗತಿಪರ ಕಾರ್ಯಕ್ರಮಗಳನ್ನು ರೂಪಿಸಿ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ವಿನೂತನ ಯೋಜನೆಗಳನ್ನು ಅನುಷ್ಠಾನ ಮಾಡುವ ಮೂಲಕ ಜಿಲ್ಲೆಯ ಪ್ರಗತಿಗೆ ಕಾರಣರಾಗಿದ್ದಾರೆ ಎಂದು ಜಿ. ಪ್ರಭು ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.  

ಶಾಸಕ ಸುರೇಶ್ ಗೌಡ ಮಾತನಾಡಿ, ಗ್ರಾಮ ಪಂಚಾಯತಿಗಳನ್ನು ಸ್ಥಳೀಯ ಜನಪ್ರತಿಧಿಗಳು ಹಾಗೂ ಅಧಿಕಾರಿಗಳು ಒಗ್ಗೂಡಿ ಅಭಿವೃದ್ಧಿಪಡಿಸಬೇಕು. ಪಂಚಾಯತಿ ಅಧ್ಯಕ್ಷರು,ಉಪಾಧ್ಯಕ್ಷರು ಪಂಚಾಯತಿ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕು. ಇದರಿಂದ ಪಿಡಿಓಗಳಿಂದ ಕೆಲಸ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಜನಪರ ಕೆಲಸಗಳಿಂದ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಬೇಕು. ಚರಂಡಿ ನಿರ್ಮಾಣ, ಕಸವಿಲೇವಾರಿ, ಸ್ವಚ್ಛತೆ ಕಾಪಾಡುವುದು, ಜನರ ಆರೋಗ್ಯ, ಗಿಡ-ಮರ ಬೆಳೆಸುವುದು, ಮತ್ತಿತರ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಕು. ಇಂತಹ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರ ಸಹಕಾರ ಇದ್ದೇ ಇರುತ್ತದೆ ಎಂದು ತಿಳಿಸಿದರಲ್ಲದೆ, ಅಲೆಮಾರಿ ಜನಾಂಗಗಳಿಗೆ ವಸತಿ ಸೌಕರ್ಯ ಕಲ್ಪಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು. 

 ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಪಿಡಿಓಗಳು ರೈತರನ್ನು ಕಚೇರಿಗೆ ಅಲೆದಾಡಿಸದೇ ಅವರ ಕೆಲಸಗಳನ್ನು ಆದ್ಯತೆ ಮೇಲೆ ಮಾಡಿಕೊಡಬೇಕು. ಈ ಕಾರ್ಯಾಗಾರವು ಪಂಚಾಯತಿ ಅಧಿಕಾರಿಗಳಿಗೆ ಸ್ಫೂರ್ತಿ, ಹೊಸ ಶಕ್ತಿ ತುಂಬಲಿದ್ದು, ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.   

1001458505

    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಅವರು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆಯಲ್ಲದೆ, 400 ಹೊಸ ಶಾಲಾ ಕಟ್ಟಡಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, 125 ಕೋಟಿ ರೂ. ವೆಚ್ಚದಲ್ಲಿ 3 ಲಕ್ಷ ಮೀಟರ್ ಚರಂಡಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಹಂತ ತಲುಪಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ನಡೆಯುತ್ತಿರುವ ಜಲ್ ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರಿನ ಅಭಿಯಾನವು ಪ್ರಗತಿಯಲ್ಲಿದ್ದು, ಇಲ್ಲಿಯವರೆಗೆ 1469 ಗ್ರಾಮಗಳಲ್ಲಿ ಕಾಮಗಾರಿಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಇನ್ನು 1400 ಗ್ರಾಮಗಳಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮುಂದಿನ ಡಿಸೆಂಬರ್ ಒಳಗಾಗಿ ಶೇ. 90ರಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾಯಕಲ್ಪ ಪುಸ್ತಕ ಬಿಡುಗಡೆ ಮಾಡಲಾಯಿತು. ನರೇಗಾ ಯೋಜನೆಯಡಿ ಸಮಗ್ರ ಅಭಿವೃದ್ಧಿ ಕಾಮಗಾರಿ ಕೈಗೊಂಡ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ತೀರ್ಥಪುರ, ಗುಬ್ಬಿ ತಾಲ್ಲೂಕು ಶಿವಪುರ, ಕೊರಟಗೆರೆ ತಾಲ್ಲೂಕು ತುಂಬಾಡಿ, ಕುಣಿಗಲ್ ತಾಲ್ಲೂಕು ನಿಡಸಾಲೆ, ಮಧುಗಿರಿ ತಾಲ್ಲೂಕು ರಂಟವಳಲು, ಪಾವಗಡ ತಾಲ್ಲೂಕು ಕೋಟಗುಡ್ಡ, ಶಿರಾ ತಾಲ್ಲೂಕು ತಡಕಲೂರು, ತಿಪಟೂರು ತಾಲ್ಲೂಕು ಸಾರ್ಥವಳ್ಳಿ, ತುಮಕೂರು ತಾಲ್ಲೂಕು ಸಿರಿವರ ಹಾಗೂ ತುರುವೇಕೆರೆ ತಾಲ್ಲೂಕು ಗೋಣಿತುಮಕೂರು ಗ್ರಾಮ ಪಂಚಾಯತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 

 ಇದಕ್ಕೂ ಮುನ್ನ ಸಚಿವರು ಜಿಲ್ಲಾ ಪಂಚಾಯತಿ ವತಿಯಿಂದ ತೆರೆಯಲಾಗಿದ್ದ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ವೀಕ್ಷಿಸಿದರು ಹಾಗೂ ಕಾರ್ಮಿಕ ಇಲಾಖೆಯ ಸಂಚಾರಿ ಆರೋಗ್ಯ ಘಟಕ ವಾಹನಕ್ಕೆ ಚಾಲನೆ ನೀಡಿದರು. 

 ಕಾರ್ಯಕ್ರಮದಲ್ಲಿ ತುಮುಲ್ ಅಧ್ಯಕ್ಷ ಹಾಗೂ ಪಾವಗಡ ಶಾಸಕ ಹೆಚ್.ವಿ.ವೆಂಕಟೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಹಾಗೂ ವಿವಿಧ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಓಗಳು ಹಾಜರಿದ್ದರು. 

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X