ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ABARK ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗುವ ಬಿಪಿಎಲ್ ಕಾರ್ಡ್ ಹೊಂದಿರುವಂತಹ ರೋಗಿಗಳಿಂದ ಯಾವುದೇ ರೀತಿಯ ಹಣ ಪಡೆಯದೆ ಉಚಿತ ಚಿಕಿತ್ಸೆ ನೀಡಬೇಕು ಎಂದು ಆದೇಶವಿದ್ದರೂ ಕೂಡ, ತುಮಕೂರು ಜಿಲ್ಲಾಸ್ಪತ್ರೆಯ ವೈದ್ಯರು ನಿಯಮ ಗಾಳಿಗೆ ತೂರಿರುವ ಆರೋಪ ಕೇಳಿಬಂದಿದೆ.
ಖಾಸಗಿ ವ್ಯಕ್ತಿಯಿಂದ ಚಿಕಿತ್ಸೆಗೆ ಬೇಕಾದ ಸಾಮಗ್ರಿ ತರಿಸಿ ಹಣ ಕೇಳುತ್ತಿದ್ದಾರೆ. ಬಿಲ್ ಕಟ್ಟದ್ದಕ್ಕೆ ರೋಗಿಯನ್ನು ಡಿಸ್ಟಾರ್ಜ್ ಮಾಡದೆ ಸತಾಯಸುತ್ತಿದ್ದಾರೆ ಎಂದು ತುಮಕೂರಿನ ಸಾಮಾಜಿಕ ಕಾರ್ಯಕರ್ತ ಹಂದ್ರಾಳ್ ನಾಗಭೂಷಣ್ ಆರೋಪಿಸಿದ್ದಾರೆ.
ಇತ್ತೀಚಿಗೆ ತುಮಕೂರು ಜಿಲ್ಲಾಸ್ಪತ್ರೆಗೆ ಕೊರಟಗೆರೆ ತಾಲೂಕು ಹೊಳವನಹಳ್ಳಿ ಗ್ರಾಮದ ಓಬಳನರಸಯ್ಯ ಎಂಬುವವರು ಸುಮಾರು ಇಪ್ಪತ್ತು ದಿನಗಳ ಹಿಂದೆ ಮುಳೆ ಮುರಿತಕ್ಕೊಳಗಾಗಿ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಮೂಳೆ ಮುರಿತದ ಆಪರೇಷನ್ ಮಾಡಿಸಲು ಮೂಳೆ ವೈದ್ಯರಾದ ಡಾ.ಚಂದನ್ ಎಂಬುವವರು ನಿಯಮಬಾಹಿರವಾಗಿ ಖಾಸಗಿ ವ್ಯಕ್ತಿಯೊಬ್ಬನಿಂದ ಸಾಮಗ್ರಿ ತರಿಸಿ, ಬಡ ರೋಗಿಯಿಂದ 10,500 ರೂಪಾಯಿ ಹಣ ನೀಡಲು ಒತ್ತಾಯಿಸಿದ್ದಾರೆ. ಈಗಾಗಲೇ ಎರಡು ಸಾವಿರ ರೂಪಾಯಿಗಳನ್ನು ಫೋನ್ ಪೇ ಮೂಲಕ ಪಡೆದಿದ್ದಾರೆ. ಆ ಮೂಲಕ ಆರೋಗ್ಯ ಇಲಾಖೆ ಹಾಗೂ ಸಚಿವರ ಸ್ಪಷ್ಟ ಆದೇಶಗಳನ್ನು ಉಲ್ಲಂಘಿಸಿದ್ದಾರೆ ಎಂದು ನಾಗಭೂಷಣ್ ದೂರಿದ್ದಾರೆ.
ಈ ವಿಷಯದಲ್ಲಿ ಖಾಸಗಿ ವ್ಯಕ್ತಿಯಿಂದ ಉಪಕರಣ ಸಾಮಗ್ರಿ ತರಿಸಿಕೊಂಡಿರುವುದನ್ನು ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಯವರನ್ನು ದೂರವಾಣಿ ಮೂಲಕ ಕೇಳಿದಾಗ, “ತುಮಕೂರು ಜಿಲ್ಲಾಸ್ಪತ್ರೆಯಲ್ಲಿ Implant ನ ಟೆಂಡರ್ ಮುಗಿದಿದೆ. ಮುಂದಿನ ದಿನಗಳಲ್ಲಿ ಟೆಂಡರ್ ಕರೆಯಲಾಗುತ್ತಿದೆ. ಆದ ಕಾರಣ ಈ ಹಿಂದೆ ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸುತ್ತಿದ್ದ ವ್ಯಕ್ತಿಯಿಂದಲೇ ಈಗ ನಾವು ತರಿಸಿಕೊಳ್ಳುತ್ತಿದ್ದೇವೆ. ಈ ವ್ಯಕ್ತಿಯೇ ಎಲ್ಲ ಏಜೆನ್ಸಿಗಳಿಗಿಂತ ಕಡಿಮೆ ದರದಲ್ಲಿ ನೀಡುತ್ತಿದ್ದಾರೆ ಎಂದು ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕರು ಸಮರ್ಥನೆ ಮಾಡಿಕೊಂಡಿದ್ದಾರೆ ಎಂದು ನಾಗಭೂಷಣ್ ತಿಳಿಸಿದ್ದಾರೆ.
ಮೂಳೆ ವೈದ್ಯರ, ಜಿಲ್ಲಾ ಶಸ್ತ್ರ ಚಿಕಿತ್ಸಕರ ದುರ್ನಡತೆ, ಕರ್ತವ್ಯಲೋಪದ ಜೊತೆಗೆ ABARK ಯೋಜನೆಯನ್ನು ತುಮಕೂರು ಜಿಲ್ಲಾಸ್ಪತ್ರೆ ಸಂಪೂರ್ಣ ಉಲ್ಲಂಘನೆ ಮಾಡಿದಂತಾಗಿದೆ ಎಂದು ನಾಗಭೂಷಣ್ ಹಂದ್ರಾಳ್ ಆರೋಪಿಸಿದ್ದಾರೆ.
“ಪ್ರಸ್ತುತ ರೋಗಿಯು ಆಸ್ಪತ್ರೆಯಲ್ಲೇ ಒಳರೋಗಿಯಾಗಿದ್ದು ರೋಗಿ ಕಡೆಯವರಿಗೆ ವಾರ್ಡ್‌ನ ಸಿಬ್ಬಂದಿಗಳು, ಉಳಿದ ₹8500 ಹಣವನ್ನು ಕಟ್ಟಬೇಕು. ಆಮೇಲೆ ಡಿಸ್ಟಾರ್ಜ್ ಮಾಡಿಸಿಕೊಂಡು ಹೋಗಿ. ಈ ಬಗ್ಗೆ ಮೂಳೆ ವೈದ್ಯರಾದ ಚಂದನ್‌ರವರ ಜೊತೆಗೇ ಮಾತನಾಡಿ ಎಂದು ಹೇಳುತ್ತಿದ್ದಾರೆ” ಎಂದು ಸಾಮಾಜಿಕ ಕಾರ್ಯಕರ್ತ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕೋಲಾರ | ಕಾಲೇಜಿನ ಶೌಚಾಲಯದಲ್ಲೇ ಮಗುವಿಗೆ ಜನ್ಮವಿತ್ತ ಅಪ್ರಾಪ್ತ ವಿದ್ಯಾರ್ಥಿನಿ!
ರೋಗಿಯ ಕಡೆಯವರು ಕಡುಬಡವರಾಗಿದ್ದು, ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಉಳಿಕೆ ಹಣ ಕಟ್ಟಲು ಆಗದೆ ಜಿಲ್ಲಾಸ್ಪತ್ರೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ಎಲ್ಲವುಗಳನ್ನು ಗಮನಿಸಿದರೆ ಸರ್ಕಾರಗಳು ಬಡ ಜನತೆಗೆ ಕೇವಲ ನೆಪ ಮಾತ್ರಕ್ಕೆ ಆರೋಗ್ಯ ಸೇವೆ ಸಂಪೂರ್ಣ ಉಚಿತ ಎಂದು ಹೇಳಿರುವಂತೆ ಕಾಣುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ನಾಗಭೂಷಣ್ ಹಂದ್ರಾಳ್ ಬೇಸರ ವ್ಯಕ್ತಪಡಿಸಿದ್ದಾರೆ.
ಕೊನೆಗೂ ಹಣ ವಾಪಸ್ ನೀಡಿದ ಜಿಲ್ಲಾಸ್ಪತ್ರೆ
ತುಮಕೂರು ಜಿಲ್ಲಾಸ್ಪತ್ರೆಯ ವೈದ್ಯರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಸಾಮಾಜಿಕ ಕಾರ್ಯಕರ್ತ ನಾಗಭೂಷಣ್ ಹಂದ್ರಾಳ್ ಅವರು, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದು, “ಜಿಲ್ಲಾಸ್ಪತ್ರೆ ಕೊನೆಗೂ ಹಣ ವಾಪಸ್ ನೀಡಿದೆ” ಎಂದು ತಿಳಿಸಿದ್ದಾರೆ.
“ತುಮಕೂರು ಜಿಲ್ಲಾಸ್ಪತ್ರೆಯಲ್ಲಿ Implant ಟೆಂಡರ್ ಅವಧಿ ಮುಕ್ತಾಯವಾಗಿದೆ ಎಂಬ ನೆಪದಲ್ಲಿ ಬಡ ರೋಗಿಗಳಿಂದ ಪಡೆದಿದ್ದ ಹಣವನ್ನು ಜಿಲ್ಲಾಸ್ಪತ್ರೆ ಆಡಳಿತವು ವಾಪಸ್ ನೀಡಿದೆ” ಎಂದು ಫೇಸ್‌ಬುಕ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
