“ಕಟ್ಟಡಗಳು, ಸೇತುವೆಗಳು ಕುಸಿಯುತ್ತಿರುವ ಇಂದಿನ ಕಾಲದಲ್ಲಿ, ಮನುಷ್ಯ, ಮನುಷ್ಯರ ನಡುವಿನ ಸ್ನೇಹ ಕುಸಿಯದಂತೆ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ” ಎಂದು ಡಾ ಬರಗೂರು ರಾಮಚಂದ್ರಪ್ಪ ಹೇಳಿದರು.
ತುಮಕೂರು ನಗರದ ಕನ್ನಡ ಭವನದಲ್ಲಿ ಅಮರಜೋತಿ ಕಲಾವೃಂದದ ವತಿಯಿಂದ ಆಯೋಜಿಸಲಾಗಿದ್ದ “ಡಾ.ರಾಜ್‌ರತ್ನ” ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಚಲನಚಿತ್ರ ನಟ ಸುಂದರ್‌ರಾಜ್ ಮತ್ತು ಡಾ.ಲಕ್ಷ್ಮೀಣ್ ದಾಸ್ ಅವರಿಗೆ ಪ್ರಶಸ್ತಿ ಪ್ರದಾನಿಸಿ ಮಾತನಾಡಿದರು.
“ಡಾ.ರಾಜ್‌ಕುಮಾರ್ ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿ. ಹಾಗೆಯೇ ಕಲಾತ್ಮಕ ಚಿತ್ರ ಮತ್ತು ವಾಣಿಜ್ಯಮಯ ಚಿತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡ ಅತ್ಯಂತ ಸ್ನೇಹಮಯ ಜೀವಿ” ಎಂದು ಬಣ್ಣಿಸಿದರು.
“ಹಲವಾರು ಅವಮಾನಗಳನ್ನು ಸಹಿಸಿ, ರಂಗಭೂಮಿ ಮತ್ತು ಚಲನಚಿತ್ರ ರಂಗ ಎರಡರ ನಡುವೆ ಸೇತುವೆ ಕಟ್ಟಿದ ಸಾಮಾಜಿಕ ಸಾಧಕ ಡಾ.ರಾಜ್‌ಕುಮಾರ್, ದಿಬ್ಬೂರು ಮಂಜು ಅವರಂತಹ ಕಲಾವಿದರಿಂದ ಜೀವಂತವಾಗಿದ್ದಾರೆ. ತನ್ನನ್ನು ದೇವರೆಂದು ನಂಬಿದ ಜನರನ್ನೇ ದೇವರೆಂದುಕೊಂಡು, ಅವರ ನಂಬಿಕೆಗೆ ಚ್ಯುತಿ ಬಾರದಂತೆ ತೆರೆಯ ಮೇಲೆ ಮತ್ತು ನಿಜ ಜೀವನದಲ್ಲಿ ನಡೆದುಕೊಂಡು ಮೇರು ವ್ಯಕ್ತಿತ್ವ ಡಾ.ರಾಜ್‌ಕುಮಾರ್ ಅವರದ್ದು. ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಚಾರ” ಎಂದು ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.
1962ರಲ್ಲಿ ನೆರೆ ಬಂದು ಅಪಾರ ನಷ್ಟ ಅನುಭವಿಸಿದಾಗ, ಕನ್ನಡ ಪತ್ರಿಕೆಗಳ ಕೋರಿಕೆಯಂತೆ ಕನ್ನಡ ಚಲನಚಿತ್ರದ ಎಲ್ಲಾ ಕಲಾವಿದರು ಡಾ.ರಾಜ್‌ಕುಮಾರ್ ನೇತೃತ್ವದಲ್ಲಿ ಒಂದು ತಿಂಗಳ ಕಾಲ ಪ್ರವಾಸ ಮಾಡಿ, ಹಣ ಸಂಗ್ರಹಿಸಿ ಸಂತ್ರಸ್ಥರಿಗೆ ನೆರವಾಗುವ ಸಂದರ್ಭದಲ್ಲಿ ಅವರನ್ನು ಮೊದಲ ಬಾರಿಗೆ ನೋಡಿದ ನಾನು, ಅವರ ಕೊನೆಗಾಲದ 20 ವರ್ಷಗಳ ಕಾಲ ಅವರ ಅತ್ಯಾಪ್ತನಾಗಿ ಇರುವ ಅವಕಾಶ ಸಿಕ್ಕಿದ್ದು, ನಿಜಕ್ಕೂ ನನ್ನ ಸೌಭಾಗ್ಯ. ಸಿನಿಮಾವನ್ನು ಮೀರಿ ಬೆಳೆದ ವ್ಯಕ್ತಿತ್ವ ಡಾ.ರಾಜ್‌ಕುಮಾರ್ ಅವರದ್ದು, ಬಲಗೈಯಲ್ಲಿ ನೀಡಿದ್ದು ಎಡಗೈಗೆ ಗೊತ್ತಾಗಬಾರದು ಎಂಬಂತೆ, ಅಶಕ್ತ ಕಲಾವಿದರಿಗೆ ನೆರವು ನೀಡಲು ಅನೇಕ ಸಂಗೀತ ಸಂಜೆ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ರಾಜ್ಯಾದ್ಯಂತ ಇರುವ ರಂಗಮಂದಿರಗಳ ನಿರ್ಮಾಣಕ್ಕಾಗಿ 67 ಲಕ್ಷ ರೂ ದೇಣಿಗೆ ಸಂಗ್ರಹಿಸಿ ನೀಡಿದವರು ಡಾ.ರಾಜ್. ವಿದ್ಯಾರ್ಥಿ ನಿಧಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ದೇಣಿಗೆ ಹೀಗೆ ಹಲವು ಸಮಾಜ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದರು ಎಂದು ಬರಗೂರು ನೆನೆಪಿಸಿದರು.
ಡಾ.ರಾಜ್‌ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚಲನಚಿತ್ರ ನಟ ಸುಂದರರಾಜ್, “ಕನ್ನಡ ಸಿನಿಮಾ ರಂಗದಲ್ಲಿ ದುಡಿದ ನನಗೆ ಡಾ.ರಾಜ್‌ಕುಮಾರ್ ಪ್ರಶಸ್ತಿ ಬಂದರೆ ಹೇಗಿರುತ್ತೇ ಎಂದು ಕಲ್ಪನೆ ಮಾಡಿಕೊಳ್ಳುತಿದ್ದ ನನಗೆ ಅಮರಜೋತಿ ಕಲಾವೃಂದ ಡಾ.ರಾಜ್‌ರತ್ನ ಪ್ರಶಸ್ತಿ ನೀಡುವ ಮೂಲಕ ನನ್ನ ಕನಸನ್ನು ನನಸಾಗಿಸಿದೆ. ಇಂದೊಂದು ಸಾರ್ಥಕ ಕ್ಷಣ. ಕಲಾವಿದರಿಗೆ ಪ್ರೇಕ್ಷಕರ ಚಪ್ಪಾಳೆಯೇ ಬಹುಮಾನ. ಡಾ.ರಾಜ್‌ಕುಮಾರ್ ಸಹ ಕಲಾವಿದರೊಂದಿಗೆ ಎಷ್ಟು ವಿನಮ್ರವಾಗಿ ನಡೆದುಕೊಳ್ಳುತ್ತಿದ್ದರು ಎಂಬುದನ್ನು ನಾನು ಕಣ್ಣಾರೆ ಕಂಡಿದ್ದೇನೆ.ಒಂದು ಮುತ್ತಿನ ಕಥೆ ನನ್ನ ವೃತ್ತಿ ಜೀವನದಲ್ಲಿಯೇ ಮರೆಯಲಾರದ ಸಿನಿಮಾ. ನಾನು ಅತ್ಯಂತ ಗೌರವದಿಂದ ಕಾಣುತ್ತಿದ್ದ ಶಂಕರ್‌ನಾಗ್ ಈ ಸಿನಿಮಾ ನಿರ್ದೇಶಿಸಿದರೆ, ಡಾ.ರಾಜ್‌ಕುಮಾರ್ ಮುಖ್ಯಭೂಮಿಕೆಯಲ್ಲಿದ್ದರು. ಇಬ್ಬರು ವಿಭಿನ್ನ ಕನಸುಗಳನ್ನ ಹೊಂದಿದ್ದ ಕಲಾವಿದರು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ವಹಿಸಿದ್ದರು. ಡಾ.ಲಕ್ಷ್ಮಣ್ ದಾಸ್ ಡಾ.ರಾಜ್‌ಕುಮಾರ್ ಅವರ ಕುರಿತು ಮಾತನಾಡುವ ಜೊತೆಗೆ, ಅವರ ಕಂದ ಪದ್ಯಗಳನ್ನು ಹಾಡಿ, ನೆರೆದಿದ್ದವರನ್ನು ಮಂತ್ರ ಮುಗ್ಧಗೊಳಿಸಿದರು.
ಇದನ್ನು ಓದಿದ್ದೀರಾ? ಮಂಗಳೂರು | ಮೀನು ರಫ್ತು ಕಂಪನಿಯಲ್ಲಿ ಭಾರೀ ಬೆಂಕಿ ಅವಘಡ; 10 ಕೋಟಿ ರೂ. ಮೌಲ್ಯದ ಸೊತ್ತು ನಷ್ಟ
ಇದೇ ವೇಳೆ ಡಾ.ಓ.ನಾಗರಾಜು, ಡಾ.ಎಲ್.ಸುಮನಡಾ, ಸುಧಾ ಮಂಜುನಾಥ್, ಡಾ.ಎ.ಎಸ್.ರಾಜ ಶೇಖರ್, ಡಾ.ಆದರ್ಶ್ ಅವರನ್ನು ಅಭಿನಂದಿಸಲಾಯಿತು.
ಅಮರಜೋತಿ ಕಲಾವೃಂದದ ದಿಬ್ಬೂರು ಮಂಜುನಾಥ್ ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ಡಾ.ರಾಜ್ ಸಿನಿಮಾಗಳ ಹಾಡುಗಳನ್ನು ಹಾಡುವ ಮೂಲಕ ಮನರಂಜಿಸಿದರು. ವೇದಿಕೆಯಲ್ಲಿ ಡಾ.ನಾಗಭೂಷಣ್ ಬಗ್ಗನಡು, ಡಾ.ಲಕ್ಷ್ಮೀರಂಗಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
