“ಮೇಲ್ವರ್ಗ ಎಂದು ಕರೆಯಿಸಿಕೊಳ್ಳುವ ಜನರು ತಳ ಸಮುದಾಯಗಳ ಜನರನ್ನು ಸಾರ್ವಜನಿಕ ಸ್ಥಳಗಳಲ್ಲಿ ಸಮಾನವಾಗಿ ಕಾಣುತ್ತಿದ್ದರೆ, ಅದು ಕಾನೂನಿನ ಭಯದಿಂದಲೇ ಹೊರತು ಹೃದಯ ಬದಲಾವಣೆಯಾಗಿ ಅಲ್ಲ” ಎಂದು ನಿಜಗುಣಾನಂದ ಸ್ವಾಮೀಜಿ ತಿಳಿಸಿದರು.
ತುಮಕೂರು ನಗರದ ಕೇಂದ್ರ ಗ್ರಂಥಾಲಯದ ಅಡಿಟೋರಿಯಂನಲ್ಲಿ ಜಿಲ್ಲಾ ರೇಷ್ಮೆ ಬೆಳೆಗಾರರ ಕ್ಷೇಮಾಭಿವೃದ್ದಿ ಸಂಘ, ಕರ್ನಾಟಕ ರಾಜ್ಯ ಸರಕಾರಿ ಎಸ್ಸಿ,ಎಸ್ಟಿ ನೌಕರರ ಸಮನ್ವಯ ಸಮಿತಿ ಹಾಗೂ ಡಾ.ವೈ.ಕೆ.ಬಾಲಕೃಷ್ಣಪ್ಪ ಹಿತೈಷಿಗಳ ಸಂಘದ ವತಿಯಿಂದ ಆಯೋಜಿಸಿದ್ದ ರೇಷ್ಮೆ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಾ.ವೈ.ಕೆ.ಬಾಲಕೃಷ್ಣಪ್ಪ ಅವರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಸ್ಪೃಷ್ಯತೆ ಎಂಬುದು ಬೇರೆ ಬೇರೆ ರೀತಿಯಲ್ಲಿ ಇಂದಿಗೂ ಜನರನ್ನು ಕಾಡುತ್ತಿದೆ ಎಂದ ಸ್ವಾಮೀಜಿ, ಸರಕಾರಿ ಅಧಿಕಾರಿಯಾಗಿ, ಅದನ್ನು ಮೀರಿದಂತೆ ಜನರಲ್ಲಿ ಮಾನವೀಯ ಪ್ರೇಮ ಬಿತ್ತಿದ, ಮನುಷ್ಯತ್ವದಿಂದ ನಡೆದುಕೊಂಡ ಡಾ.ವೈ.ಕೆ.ಬಾಲಕೃಷ್ಣಪ್ಪ ಅವರನ್ನು ಸಾರ್ವಜನಿಕರು ಅಭಿನಂದಿಸುತ್ತಿರುವುದು ಸಂತೋಷದ ವಿಚಾರ ಎಂದರು.
“ಕಾಣುವ ಮನುಷ್ಯರನ್ನು ದ್ವೇಷಿಸುವ, ದೂಷಿಸುವ ಜನ, ಕಾಣದ ದೇವರನ್ನು ಪ್ರೀತಿಸಲು, ಪೂಜಿಸಲು ಕ್ಯೂನಲ್ಲಿ ನಿಲ್ಲುತ್ತಾರೆ. ದಲಿತರು ಎಂದು ಸಮಾಜದಲ್ಲಿ ಇತರೆ ವರ್ಗಗಳಿಗೆ ಸರಿಸಮನಾಗಿ ಗೌರವಾಧರಗಳನ್ನು ಪಡೆಯುತ್ತಿದ್ದರೆ, ಅದು ಯಾವುದೇ ದೇವರು, ಧರ್ಮ, ಸ್ವಾಮೀಜಿಗಳು,ಪೂಜೆ ಪುನಸ್ಕಾರಗಳಿಂದಲ್ಲ. ತಾನು ಗಳಿಸಿದ ವಿದ್ಯೆ ಹಾಗೂ ತಾನು ನಂಬಿರುವ ತೋಳ್ಬಲದಿಂದ ಮಾತ್ರ. ದೇವರು ಏನನ್ನು ನಿರ್ಮಾಣ ಮಾಡಿಲ್ಲ. ಎಲ್ಲವೂ ಮನುಷ್ಯನಿಂದ ನಿರ್ಮಾಣವಾದಂತವು. ದಲಿತ ವಿದ್ಯಾವಂತರು ಈ ಸತ್ಯ ಅರಿತು, ಕೆಲಸ ಮಾಡಿದಾಗ ಸಮುದಾಯದ ಅಭಿವೃದ್ದಿ ಸಾಧ್ಯ” ಎಂದು ಶ್ರೀನಿಜಗುಣಾನಂದ ಸ್ವಾಮೀಜಿ ನುಡಿದರು.
ರೇಷ್ಮೆ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಾ.ವೈ.ಕೆ.ಬಾಲಕೃಷ್ಣಪ್ಪ ಅವರ ಕುರಿತ “ಕುಸುರಿ” ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, “ರಾಜ್ಯದಲ್ಲಿ ಬಡವಾಗಿರುವ ಯಾವುದಾದರೂ ಇಲಾಖೆ ಇದ್ದರೆ ಅದು ರೇಷ್ಮೆ ಇಲಾಖೆ. ಅಂತಹ ಇಲಾಖೆಯಲ್ಲಿಯೇ ಅತ್ಯಂತ ಕ್ರಿಯಾಶೀಲವಾಗಿ, ಸರಕಾರ ನೀಡಿದ ಗುರಿಗಳನ್ನು ಅಕ್ಷರಶಃ ಮುಟ್ಟಿ, ಸಾವಿರಾರು ರೈತರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗಿರುವ ಅಧಿಕಾರಿ ಡಾ.ವೈ.ಕೆ.ಬಾಲಕೃಷ್ಣಪ್ಪ. ಓರ್ವ ಅಧಿಕಾರಿ ತನ್ನ ಅಧಿಕಾರದ ಆಚೆಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡರೆ ಹೇಗೆ ಜನಮಾನಸದಲ್ಲಿ ಉಳಿಯಬಲ್ಲರು ಎಂಬುದಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿ. ಸಮಾಜ ಇವರ ಸೇವೆಯನ್ನು ಗುರುತಿಸಿ, ಅಭಿನಂದಿಸುವ ಮೂಲಕ ಅವರು ಮತ್ತಷ್ಟು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳಲು ಸಹಕಾರಿಯಾಗಲಿದೆ” ಎಂದರು.
ಡಾ.ವೈ.ಕೆ.ಬಾಲಕೃಷ್ಣಪ್ಪ ಕುರಿತು ಸಾಕ್ಷಚಿತ್ರವನ್ನು ಬಿಡುಗಡೆ ಮಾಡಿ ಮಾತನಾಡಿದ ಸಿಇಓ ಜಿ.ಪ್ರಭು, “ಇಂದಿನ ಅಭಿನಂದನಾ ಸಮಾರಂಭ ಇಡೀ ಸರಕಾರಿ ವಲಯಕ್ಕೆ ಒಂದು ಸ್ಪಷ್ಟ ಸಂದೇಶವನ್ನು ನೀಡಿದೆ. ಅಲ್ಲದೇ, ಮಾದರಿಯಾಗಿದೆ. ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸರಕಾರದ ಎಲ್ಲ ಸವಲತ್ತುಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪುವಂತೆ ಮಾಡುವಲ್ಲಿ ವೈ.ಕೆ.ಬಾಲಕೃಷ್ಣಪ್ಪ ಮುಂಚೂಣಿಯಲ್ಲಿದ್ದಾರೆ. ಕಳೆದ ವರ್ಷ ಎನ್.ಆರ್.ಇ.ಜಿ.ಎಯಲ್ಲಿ ತುಮಕೂರು ಜಿಲ್ಲೆ ಮೊದಲ ಸ್ಥಾನ ಪಡೆದಿದ್ದು, ಇದರಲ್ಲಿ ರೇಷ್ಮೆ ಇಲಾಖೆಯ ಪಾಲು ದೊಡ್ಡದು. ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ ಎಂಬುದನ್ನು ಇಂದಿನ ಸಮಾರಂಭ ಸಾಕ್ಷೀಕರಿಸಿದೆ” ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ರೇಷ್ಮೆ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಾ.ವೈ.ಕೆ.ಬಾಲಕೃಷ್ಣ, “ರೇಷ್ಮೆ ಇಲಾಖೆ ನನ್ನ ಕುಟುಂಬಕ್ಕೆ ಎಲ್ಲವನ್ನು ನೀಡಿದೆ. ಮುಂದೆಯೂ ಅವಶ್ಯವಿದ್ದರಿಗೆ ನನ್ನ ಕೈಲಾದ ಸಲಹೆ, ಸಹಕಾರ ನೀಡಲು ಸಿದ್ದನಿದ್ದೇನೆ” ಎಂದರು.
ಕರ್ನಾಟಕ ರಾಜ್ಯ ಸರಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷರಾದ ಡಿ. ಶಿವಶಂಕರ್ ಮಾತನಾಡಿ, “ಒಂದು ಜಾತಿ,ಧರ್ಮ,ಭಾಷೆಯ ಭಾರತ ಇದಲ್ಲ. ಇದು ಬಹುಜನರ ಭಾರತ. ಇದನ್ನು ಸಹಕಾರಗೊಳಿಸಲು ಸರಕಾರಿ ಅಧಿಕಾರಿಯಾಗಿಯೂ ಕೆಲಸ ಮಾಡಿದ ಡಾ.ವೈ.ಕೆ.ಬಾಲಕೃಷ್ಣಪ್ಪ ಅಭಿನಂದನಾರ್ಹರು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ, “ಸರಕಾರಿ ಅಧಿಕಾರಿಗಳು ಒಂದಿಲ್ಲೊಂದು ಹಗರಣಗಳಿಗೆ ಸಿಲುಕಿ ನಿವೃತ್ತಿ ಜೀವನವನ್ನು ಸರಿಯಾಗಿ ಅನುಭವಿಸಲಾರದೆ ಜೈಲಿನ ಭಯದಲ್ಲಿರುವ ಈ ಕಾಲಘಟ್ಟದಲ್ಲಿ ಡಾ.ವೈ.ಕೆ.ಬಾಲಕೃಷ್ಣಪ್ಪ ಅವಕಾಶಗಳಿದ್ದಾಗ್ಯೂ ಪ್ರಾಮಾಣಿಕರಾಗಿ ಉಳಿದುಕೊಂಡಿದ್ದಾರೆ. ಸರಕಾರಿ ಅಧಿಕಾರಿಗಳ ವಿರುದ್ದ ಪುಟಗಟ್ಟಲೇ ದೂರು ಹೇಳುವ ರೈತಾಪಿ ವರ್ಗವೇ ವೈ.ಕೆ.ಬಿ ಅವರನ್ನು ಅಭಿನಂದಿಸುತ್ತಿರುವುದು ಅವರ ಮಾನವೀಯ ಗುಣಗಳಿಗೆ ಹಿಡಿದ ಕನ್ನಡಿಯಾಗಿದೆ. ತಳ ಸಮುದಾಯದಲ್ಲಿ ಹುಟ್ಟಿ ವರ್ಗ ಸಂಕೀರ್ಣದ ನೋವು ಅನುಭವಿಸುತ್ತಲೇ ಅದನ್ನು ಮೆಟ್ಟಿ ನಿಂತವರು. ಸರಕಾರದ ಕೆಲಸದ ಜೊತೆ ಜೊತೆಯಲ್ಲಿ ಸಮಾಜದ ಕೆಲಸವನ್ನು ಮಾಡಿದ ಸೂಕ್ಷ್ಮ ಸಂವೇದನೆಯ ಅಧಿಕಾರಿ. ಇಂತಹವರ ಸಂತತಿ ಹೆಚ್ಚಾಗಬೇಕಿದೆ” ಎಂದರು.
ಅಭಿನಂದನಾ ಗ್ರಂಥ ಕುಸುರಿ ಕುರಿತು ತುಮಕೂರು ವಿವಿ ಕನ್ನಡ ಪ್ರಾಧ್ಯಾಪಕ ಡಾ.ನಾಗಭೂಷಣ್ ಬಗ್ಗನಡು ಮಾತನಾಡಿದರು.
ವೇದಿಕೆಯಲ್ಲಿ ಪ್ರಗತಿಪರ ಚಿಂತಕ ಕೆ.ದೊರೆರಾಜು, ಡಾ.ಓ.ನಾಗರಾಜು, ತುಮಕೂರು ಜಿಲ್ಲಾ ರೇಷ್ಮೆ ಬೆಳೆಗಾರರ ಸಂಘದ ಗೌರವಾಧ್ಯಕ್ಷ್ಷ ಎಸ್.ವಿ.ಸ್ವಾಮಿ, ಜಿಲ್ಲಾಧ್ಯಕ್ಷ ಶಿವಾನಂದಯ್ಯ, ರೇಷ್ಮೆ ಮಂಡಳಿ ನಿವೃತ್ತ ವಿಜ್ಞಾನಿ ಡಾ.ಹೆಚ್.ಕೆ.ಬಸವರಾಜ್, ಎಸ್.ನಾಗಣ್ಣ, ರೈತ ಮುಖಂಡರಾದ ಅನುಸೂಯಮ್ಮ, ಚೇತನಾ ವೈ.ಕೆ.ಬಾಲಕೃಷ್ಣಪ್ಪ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು, ಹಿರಿಯ ದಲಿತ ಮುಖಂಡ ನರಸೀಯಪ್ಪ, ಚರಕ ಅಸ್ಪತ್ರೆಯ ಡಾ.ಬಸವರಾಜು, ಪ್ರೊ.ಡಾಮಿನಿಕ್ ಸೇರಿದಂತೆ ರೇಷ್ಮೆ ಬೆಳೆಗಾರರು, ದಲಿತ ಮುಖಂಡರು ಉಪಸ್ಥಿತರಿದ್ದರು.