ತುಮಕೂರು | ಅರಣ್ಯ ಇಲಾಖೆಯಿಂದ ರೈತರ ಜಮೀನು ಕಬಳಿಕೆ; ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

Date:

Advertisements

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಆಶ್ರಿಹಾಲ್- ಜಾಣೆಹಾರ್ ಗ್ರಾಮದ ಸರ್ವೆ ನಂಬರ್ 30 ಮತ್ತು 28ರಲ್ಲಿರುವ ರೈತರ ಜಮೀನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕಬಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಜಾಣೆಹಾರ್ ರೈತರು, ತಮ್ಮ ಜಮೀನಿಗೆ ನುಗ್ಗಿದ್ದ ಜೆಸಿಬಿಗಳನ್ನು ತಡೆದು ಅರಣ್ಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ಶನಿವಾರ ಬೆಳಿಗ್ಗೆ ಜಾಣೆಹಾರ್ ಗ್ರಾಮದ ಬಳಿ ರೈತರು ಮತ್ತು ಅರಣ್ಯ ಅಧಿಕಾರಿಗಳ ನಡುವೆ ವಾದ-ವಾಗ್ವಾದಗಳು ನಡೆದವು. ಈ ಸಂದರ್ಭದಲ್ಲಿ, ಆರ್‌ಎಫ್ಒ ಅರುಣ್ ರೈತರ ಜೊತೆ ಮಾತುಕತೆ ನಡೆಸಿದರು. ಆಗ, ಅರಣ್ಯ ಇಲಾಖೆಯ ಬಳಿಯಿರುವ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪ್ರಸ್ತುತಪಡಿಸಿದ ನಂತರ ತಮ್ಮ ಕೆಲಸ ಮುಂದುವರೆಸಿ ಎಂದು ರೈತರು ಪಟ್ಟುಹಿಡಿದರು. ರೈತರ ಆಕ್ರೋಶಕ್ಕೆ ಮಣಿದ ಅರಣ್ಯ ಅಧಿಕಾರಿಗಳು ಕೆಲಸ ಸ್ಥಗಿತಗೊಳಿಸಿ ಜೀಪ್ ಹತ್ತಿ ಸ್ಥಳದಿಂದ ಹೊರಟಿದ್ದಾರೆ.

ಘಟನೆ ಹಿನ್ನೆಲೆ 

Advertisements

“ಆಶ್ರಿಹಾಲ್ ಸರ್ವೆ ನಂಬರ್ 30ರಲ್ಲಿರುವ ಇನ್ನೂ ದುರಸ್ತಿಯಾಗದ ಉಳಿಕೆ 5 ಎಕರೆ ಹಾಗೂ ಸರ್ವೆ ನಂಬರ್ 28ರಲ್ಲಿ ಇನ್ನೂ ದುರಸ್ತಿಯಾಗದ ಉಳಿಕೆ (ಎಕ್ಸ್ಟೆಂಟ್) ಜಮೀನು ಎರಡರಿಂದ ಎರಡೂವರೆ ಎಕರೆ ಮತ್ತು ಜಾಣೆಹಾರ್ ಗಡಿಯಲ್ಲಿನ ಸರ್ವೆ ನಂಬರ್ 7ರಲ್ಲಿ ಒಂದು-ಒಂದೂವರೆ ಎಕರೆ, ಸರ್ವೆ ನಂಬರ್ 8ರಲ್ಲಿ ಎರಡರಿಂದ ಎರಡೂವರೆ ಎಕರೆ ಹಾಗೂ ಸರ್ವೆ ನಂಬರ್ 9ರಲ್ಲಿ ಮುಕ್ಕಾಲು ಎಕರೆಯಷ್ಟಿರುವ ಕಂದಾಯ ಭೂಮಿ ರೈತರಿಗೆ ಮಂಜೂರಾಗಿರುವ ಗ್ರಾಂಟೆಡ್ ಜಮೀನಾಗಿದೆ” ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ 1

“ಈ ಎಲ್ಲ ಸರ್ವೆ ನಂಬರ್‌ಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಅವರ ಜಮೀನಿಗೆ ನಿರಂತರವಾಗಿ ಕಂದಾಯ ಪಾವತಿ ಮಾಡುತ್ತಾ ಬಂದಿದ್ದಾರೆ. ಸದರಿ, ಆಶ್ರಿಹಾಲ್ ಮತ್ತು ಜಾಣೆಹಾರ್ ಗಡಿ ಸರ್ವೆ ನಂಬರ್‌ಗಳಲ್ಲಿರುವ ಇದಿಷ್ಟೂ ಕಂದಾಯ ಜಮೀನು ಒಟ್ಟಾರೆ ಹತ್ತನ್ನೊಂದು ಎಕರೆಗಳಷ್ಟು ವಿಸ್ತೀರ್ಣದ್ದಾಗಿದೆ. ಈ ಸರ್ವೆ ನಂಬರ್‌ಗಳಲ್ಲಿರುವ ಕಂದಾಯ ಜಮೀನು ರೈತರಿಗೆ ಮಂಜೂರಾಗಿರುವಂತಹ ಗ್ರಾಂಟೆಡ್ ಭೂಮಿಯೇ ಆಗಿದೆ” ಎಂದರು.

“ಈ ಭಾಗದ ರೈತರು 1970ರಿಂದಲೂ ಇಲ್ಲಿ ಈ ಜಮೀನಿನ ಸಾಗುವಳಿ ನಡೆಸುತ್ತಿದ್ದಾರೆ. ಇದಕ್ಕೆ ಪುರಾವೆಯಾಗಿ 1978ರಲ್ಲೇ ಭಾಗ್ಯಮ್ಮD/O ಲಕ್ಷ್ಮಯ್ಯ ಎಂಬ ಜಾಣೆಹಾರ್ ಗ್ರಾಮದ ರೈತ ಮಹಿಳೆಗೆ 3 ಎಕರೆಗಳಿಗೂ ಹೆಚ್ಚಿನ ಜಮೀನು ಇದೇ ಜಾಣೆಹಾರ್ ಸರ್ವೆ ನಂಬರ್‌ನಲ್ಲಿ ಮಂಜೂರಾಗಿದೆ. ನಾವೆಲ್ಲಾ ಇಲ್ಲಿ ಎಪ್ಪತ್ತರ ದಶಕದಿಂದಲೂ ಗೇಯ್ಮೆ ಮಾಡುತ್ತಿದ್ದೇವೆ. ಇದು ನಮ್ಮ ಜಮೀನು. ಇದು ಆಗ ಸರ್ಕಾರಿ ಬೀಳು ಆಗಿದ್ದಿರಬಹುದು. ಆದರೆ, ಸುಮಾರು ಐವತ್ತು ವರ್ಷಗಳಿಗೂ ಮುಂಚಿನಿಂದ ಜಾಣೆಹಾರ್-ಆಶ್ರಿಹಾಲ್ ಗ್ರಾಮದ ಅತ್ಯಂತ ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡ ರೈತರು ಇಲ್ಲಿ ಉಳುಮೆ ಮಾಡುತ್ತಿದ್ದೇವೆ. ಇದು ಎಪ್ಪತ್ತು-ಎಂಬತ್ತರ ದಶಕದಲ್ಲೇ ರೈತರಿಗೆ ಮಂಜೂರಾಗಿರುವ ರೈತರ ಜಮೀನು” ಎಂದು ಹೇಳಿದರು.

ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ

“ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿ ಮೀರಿದ ಅಧಿಕಾರ ಪ್ರದರ್ಶಿಸುತ್ತಿದ್ದಾರೆ. ರೈತರ ಜಮೀನುಗಳಲ್ಲಿದ್ದ ಮರಗಳನ್ನು ಕಡಿದು, ಅದೇ ಮರಗಳ ಕೊರಡುಗಳನ್ನು ಕಂಬಗಳಂತೆ ಬಳಸಿ ಮದಲಿಂಗನ ಕಣಿವೆ ಸುತ್ತಮುತ್ತ ಇರುವ ಅರಣ್ಯಕ್ಕೆ ತಂತಿಬೇಲಿ ಹಾಕಿಕೊಳ್ಳುತ್ತಿರುವುದಾಗಿ ರೈತರ ಜಮೀನುಗಳಿಗೂ ಜೆಸಿಬಿ ನುಗ್ಗಿಸುತ್ತಿದ್ದಾರೆ. ಇದು ಅಕ್ಷಮ್ಯ” ಎಂದು ಅಸಮಾಧಾನ ಹೊರಹಾಕಿದ್ದಾರೆ.

“ಈ ಹಿಂದೆ ಅಕೇಶಿಯಾ ಮರಗಳನ್ನು ಕಡಿಯಲು ಒಬ್ಬರಿಗೆ ಟೆಂಡರ್ ಕೊಡಲಾಗಿತ್ತು. ಮರಗಳನ್ನು ಕಡಿಯುವುದರ ಜತೆಗೆ ಅದರ ಬೊಡ್ಡೆಗಳನ್ನೂ ಬೇರುಮಟ್ಟದಿಂದ ಕೀಳಬೇಕಾದ ನಿಯಮವಿದ್ದರೂ, ಅದಕ್ಕಾಗುವ ಖರ್ಚುವೆಚ್ಚದ ಹಣ ಉಳಿಸುವ ದುರಾಸೆಯಿಂದ ಆ ಬೊಡ್ಡೆಗಳನ್ನು ಕೀಳದೆ ಹಾಗೇ ಬಿಟ್ಟುಹೋಗಿದ್ದರು. ಅವು ಕಾಲಾಂತರದಲ್ಲಿ ಮತ್ತೆ ಚಿಗುರಿ ಈಗ ಮರಗಳಾಗಿವೆ. ಅವುಗಳನ್ನು ಕಡಿದುಕೊಂಡು ಹೋಗುವ ನೆಪದಲ್ಲಿ ರೈತರ ಜಮೀನಿಗೆ ಬಂದು ಅರಣ್ಯ ಅಧಿಕಾರಿಗಳು ರೈತರ ಜಮೀನಿಗೂ ತಂತಿಬೇಲಿ ಹಾಕಿ ಕಬಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ” ಎಂದು ಆರೋಪಿಸಿದರು.

ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ 2

“ರೈತರ ಬಳಿ ಇಲ್ಲಸಲ್ಲದ ದಾಖಲೆಗಳನ್ನು ಕೇಳುತ್ತಿರುವ ಅರಣ್ಯ ಅಧಿಕಾರಿಗಳು ತಮ್ಮ ಬಳಿ ಇರುವ ದಾಖಲೆ ಪ್ರಮಾಣಗಳನ್ನು ಯಾಕೆ ಸಾರ್ವಜನಿಕಗೊಳಿಸದೆ, ನಮ್ಮ ಅನಕ್ಷರಸ್ಥ ಬಡ ರೈತರ ಮೇಲೆ ಮಾತ್ರ ಜೋರು ಜಬರದಸ್ತಿ ತೋರುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಅವರು ಹೀಗೆಲ್ಲ ವರ್ತಿಸಲು ಅವಕಾಶವಿಲ್ಲ. ಪ್ರಜಾಪ್ರಭುತ್ವದಲ್ಲಿ ದಬ್ಬಾಳಿಕೆ, ದೌರ್ಜನ್ಯಗಳಿಗೆ ಆಸ್ಪದವಿಲ್ಲ ಎಂಬುದನ್ನು ಈ ಅಧಿಕಾರಿಗಳಿಗೆ ಬಡವರು ಮತ್ತು ರೈತರು ತಿಳಿಸಿಕೊಡಬೇಕೇ” ಎಂದು ರೈತರು ಪ್ರಶ್ನಿಸಿದರು.

ಚಿಕ್ಕನಾಯಕನಹಳ್ಳಿ ಉಪವಲಯ ಅರಣ್ಯಾಧಿಕಾರಿ ಗೌರಿಶಂಕರ್(ಡೆಪ್ಯುಟಿ ರೇಂಜ್ ಆಫಿಸರ್)’ರವರು ರೈತರನ್ನು ಸಂಘಟಿಸುತ್ತಿರುವ ರೈತ ಕಾರ್ಯಕರ್ತರಿಗೆ ಕರೆಮಾಡಿ ಧಮ್ಕಿ ಹಾಕುತ್ತಿದ್ದಾರೆಂದು ಕೆಲವರು ಆರೋಪಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ದಲಿತರ ಓಣಿಗಿಲ್ಲ ನೀರಿನ ಭಾಗ್ಯ; ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯ

ಇದೆಲ್ಲದರ ನಡುವೆ ತಿಪಟೂರು ವಿಭಾಗದ ಎಸಿಎಫ್ ಮಲ್ಲಿಕಾರ್ಜುನ್’ರವರು ಸೋಮವಾರ ಸ್ಥಳಕ್ಕೆ ಭೇಟಿ ಕೊಟ್ಟು ರೈತರು ಮತ್ತು ಅರಣ್ಯಾಧಿಕಾರಿಗಳ ನಡುವಿನ ತಕರಾರನ್ನು ಆಲಿಸಿ, ಬಗೆಹರಿಸಲು ಪ್ರಯತ್ನಿಸುವುದಾಗಿ ರೈತರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

“ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಅರಣ್ಯ ಇಲಾಖೆ ಹಾಗೂ ಅರಣ್ಯದ ಅಂಚಿನಲ್ಲಿರುವ ರೈತರ ಜಮೀನುಗಳಿಗೆ ಸಂಬಂಧಿಸಿದ ಸ್ಪಷ್ಟ ನಿರ್ದೇಶನಗಳಿವೆ. ಅರಣ್ಯ ಅಧಿಕಾರಿಗಳು ಅವುಗಳನ್ನು ಅನೂಚಾನ ಪಾಲಿಸಬೇಕು. ಇಲ್ಲದಿದ್ದಲ್ಲಿ ಘನ ನ್ಯಾಯಾಲಯದ ಉಲ್ಲಂಘನೆಯಾದೀತು” ಎಂದಿದ್ದಾರೆ.

ವರದಿ: ಸಂಚಲನ

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಅಧಿಕ ಮಳೆಯಿಂದ ಹಾನಿಗೀಡಾದ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಿ : ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್

 "ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಿಂದ ಸಾಕಷ್ಟು ಮಳೆಯಾಗುತ್ತಿದ್ದು, ಮಳೆಯಿಂದ ಹಾನಿಗೊಳಗಾಗುವ ಪ್ರದೇಶಗಳ ಸಾರ್ವಜನಿಕರ...

ಬೀದರ್‌ | ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಸಚಿವದ್ವಯರ ಭೇಟಿ; ಪರಿಶೀಲನೆ

ಕಮಲನಗರ ಹಾಗೂ ಔರಾದ್‌ ತಾಲೂಕಿನಲ್ಲಿ ಅಧಿಕ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಉಸ್ತುವಾರಿ...

ಹಾವೇರಿ | ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಅರ್ಜಿ ಆಹ್ವಾನ

"ಪರಿಶಿಷ್ಟ ವರ್ಗದ ಜನಾಂಗದ ಏಳಿಗಾಗಿ ಶ್ರಮಿಸಿದ ಅರ್ಹ ವ್ಯಕ್ತಿಗಳಿಗೆ ಶ್ರೀ ಮಹರ್ಷಿ...

ಉಡುಪಿ | ಶಾಸಕ ಯಶ್ಪಾಲ್ ಸುವರ್ಣರವರ ಮೇಲೆ ಕಠಿಣ ಸಾಂವಿಧಾನಿಕ ಕ್ರಮ ಜರುಗಿಸಿ – ಕೆ ಫಣಿರಾಜ್

ತಮ್ಮ ಶಾಸಕ ಸ್ಥಾನದ ಸಂವಿಧಾನಿಕ ಮರ್ಯಾದೆಯನ್ನು ಮೀರಿ ವರ್ತಿಸಿರುವ ಉಡುಪಿಯ ಶಾಸಕ...

Download Eedina App Android / iOS

X