ಕೊಬ್ಬರಿ ಖರೀದಿ ಕೇಂದ್ರ ನಫೆಡ್ ಆರಂಭಿಸಿ ನಂತರ ಮರು ನೋಂದಣಿ ಹೆಸರಲ್ಲಿ ಸ್ಥಗಿತಗೊಳಿಸಿ ಮತ್ತೆ ಆರಂಭಕ್ಕೆ ವಿಳಂಬ ಅನುಸರಿಸುತ್ತಿರುವುದು ಸರಿಯಲ್ಲ. ಕೂಡಲೇ ನಫೆಡ್ ಆರಂಭಿಸದಿದ್ದರೆ ಮಾರ್ಚ್ 11ಕ್ಕೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಕಚೇರಿ ಎದುರು ತೀವ್ರ ಹೋರಾಟ ನಡೆಸಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ ಗೋವಿಂದರಾಜು ಎಚ್ಚರಿಕೆ ನೀಡಿದರು.
ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ, “ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರೇ ಹೇಳಿಕೆ ನೀಡಿ ಕೊಬ್ಬರಿ ಖರೀದಿ ಕೇಂದ್ರ ಆರಂಭಿಸುತ್ತೇವೆಂದು ಹೇಳಿ ಹತ್ತು ದಿನ ಕಳೆದರೂ ಇನ್ನೂ ಕೇಂದ್ರ ಆರಂಭಿಸಿಲ್ಲ. ಆದರೆ ರೈತರು ಕೊಬ್ಬರಿ ಸುಲಿಸಿಕೊಂಡು ಕಾದು ತಾಳ್ಮೆ ಕಳೆದುಕೊಂಡಿದ್ದಾರೆ. ಜತೆಗೆ ಕೊಬ್ಬರಿಯ ತೂಕವೂ ಕಡಿಮೆಯಾಗುತ್ತಿದೆ” ಎಂದು ಕಿಡಿಕಾರಿದರು.
“ಕೊಬ್ಬರಿ ಖರೀದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟು ₹13,500 ನೀಡುತ್ತಿರುವುದು ಅವೈಜ್ಞಾನಿಕವಾಗಿದೆ. ಈ ಹಿಂದಿನ ಸರ್ಕಾರ ಕೊಬ್ಬರಿ ಉತ್ಪನ್ನಕ್ಕೆ ತಗಲುವ ವೆಚ್ಚವನ್ನು ವೈಜ್ಞಾನಿಕವಾಗಿ ತೋಟಗಾರಿಕೆ ಇಲಾಖೆಯ ಮೂಲಕ ತೀರ್ಮಾನಿಸಿದೆ. ಆದರೆ ಇಲ್ಲಿ ಖರೀದಿ ಮಾಡುತ್ತಿರುವುದು ಸರಿಯಲ್ಲ. ಸ್ವಾಮಿನಾಥನ್ ವರದಿ ಅನ್ವಯ ಉತ್ಪನ್ನ ವೆಚ್ಚದ ಶೇ.50ರಷ್ಟು ಆದಾಯ ಲಾಭವಾಗಿ ನೀಡಬೇಕಿದೆ. ಒಟ್ಟಾರೆ ಒಂದು ಕ್ವಿಂಟಾಲ್ ಕೊಬ್ಬರಿಗೆ ₹25,000 ನೀಡಬೇಕು” ಎಂದು ಒತ್ತಾಯಿಸಿದರು.
“ಓರ್ವ ರೈತನಿಂದ ಹದಿನೈದು ಕ್ವಿಂಟಾಲ್ ಕೊಬ್ಬರಿ ಖರೀದಿಗೆ ನಿಯಮ ಮಾಡಿದ ಸರ್ಕಾರ ವರ್ತಕರ ಹಾವಳಿಗೆ ಕಡಿವಾಣ ಹಾಕಿಲ್ಲ. 62 ಸಾವಿರ ಮೆಟ್ರಿಕ್ ಟನ್ ಖರೀದಿಗೆ ನಿರ್ಧರಿಸಲಾಗಿದೆ. ಆದರೆ ನಮ್ಮ ಜಿಲ್ಲೆಯಲ್ಲೇ 2.50 ಲಕ್ಷ ಟನ್ ಕೊಬ್ಬರಿ ಉತ್ಪತ್ತಿಯಾಗುತ್ತದೆ. ಎಲ್ಲವನ್ನೂ ವೈಜ್ಞಾನಿಕವಾಗಿ ಖರೀದಿಸಬೇಕು” ಎಂದು ಆಗ್ರಹಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಕೆ ಎನ್ ವೆಂಕಟೇಗೌಡ ಮಾತನಾಡಿ, “ಮರು ನೋಂದಣಿ ಕಾರ್ಯವನ್ನು ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ನಡೆಸುವುದು ಸೂಕ್ತ. ಹಾಗೆಯೇ ಕೊಬ್ಬರಿ ಖರೀದಿ ಕೇಂದ್ರ ತಾಲೂಕಿನಲ್ಲಿ ನಾಲ್ಕೈದು ಕೇಂದ್ರವಾಗಬೇಕು. ಒನ್ ಪಾಯಿಂಟ್ ಅಜೆಂಡಾ ಕೊಬ್ಬರಿ ಹೋರಾಟ ಮಾರ್ಚ್ 11ರಂದು ನಡೆಸಲಾಗುವುದು. ಶೀಘ್ರ ನಫೆಡ್ ಕೊಬ್ಬರಿ ಖರೀದಿ ಕೇಂದ್ರ ಆರಂಭಿಸಿ” ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹಲವು ಬೇಡಿಕೆ ಈಡೇರಿಕೆಗೆ ರೈತ ಸಂಘ ಆಗ್ರಹ
ಸುದ್ದಿಗೋಷ್ಟಿಯಲ್ಲಿ ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸಿ ಜಿ ಲೋಕೇಶ್, ಯುವ ಘಟಕದ ಜಗದೀಶ್, ಶಿವಕುಮಾರ್, ಸತ್ತಿಗಪ್ಪ, ಧರ್ಮೇಗೌಡ, ಎಂ ಎಚ್ ಪಟ್ಟಣ ವೆಂಕಟೇಶ್, ಲಾಯರ್ ಸುರೇಶ್, ದಿವ್ಯಪ್ರಕಾಶ್ ಸೇರಿದಂತೆ ಇತರರು ಇದ್ದರು.
