- ತುಮಕೂರಿನ ಕ್ಯಾತಸಂದ್ರದಲ್ಲಿರುವ ಸಿದ್ದಗಂಗಾ ಮಠದ ಬಳಿ ದಾರುಣ ಘಟನೆ
- ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅಧಿಕಾರಿಗಳು
ಇಬ್ಬರು ವಿದ್ಯಾರ್ಥಿಗಳು ನೀರಿಗೆ ಬಿದ್ದಾಗ ಅವರನ್ನು ರಕ್ಷಿಸಲು ಹೋಗಿ ಒಟ್ಟು ನಾಲ್ವರು ನೀರುಪಾಲಾಗಿರುವ ದಾರುಣ ಘಟನೆ ತುಮಕೂರಿನ ಕ್ಯಾತಸಂದ್ರದಲ್ಲಿರುವ ಸಿದ್ದಗಂಗಾ ಮಠದ ಬಳಿ ಭಾನುವಾರ(ಆ.13) ನಡೆದಿದೆ.
ಸಿದ್ದಗಂಗಾ ಮಠದ ಹಿಂಭಾಗದ ನೀರಿನ ಕೃಷಿ ಹೊಂಡ ಗೋಕಟ್ಟೆಯಲ್ಲಿ ಬಿದ್ದು ಶಂಕರ್ (11), ರಕ್ಷಿತ್ (11), ಲಕ್ಷ್ಮಿ (50) ಹಾಗೂ ಮಹದೇವಪ್ಪ (51) ಎಂಬವರು ಸಾವನ್ನಪ್ಪಿದ್ದಾರೆ.
ಶಂಕರ್ ಹಾಗೂ ರಕ್ಷಿತ್‌ನನ್ನು ರಕ್ಷಿಸಲು ಲಕ್ಷ್ಮಿ ಹಾಗೂ ಮಹದೇವಪ್ಪ ಧಾವಿಸಿದಾಗ ದುರ್ಘಟನೆ ಸಂಭವಿಸಿದೆ.
ಸಿದ್ದಗಂಗಾ ಮಠದ ವಿದ್ಯಾರ್ಥಿಗಳಾದ ಶಂಕರ್ ಹಾಗೂ ರಕ್ಷಿತ್ ರಾಮನಗರ ನಿವಾಸಿಗಳು. ಲಕ್ಷ್ಮಿ ನೆಲಮಂಗಲ ಹಾಗೂ ಮಹಾದೇವಪ್ಪ ಯಾದಗಿರಿ ನಿವಾಸಿಯಾಗಿದ್ದು, ವಿದ್ಯಾರ್ಥಿಗಳನ್ನು ರಕ್ಷಿಸಲು ಹೋಗಿದ್ದಾಗ ನಾಲ್ವರೂ ಸಾವನ್ನಪ್ಪಿದ್ದಾರೆ.
ಇದನ್ನು ಓದಿದ್ದೀರಾ? ‘ಊರು ಅಂದ್ಮೇಲೆ ಹೊಲೆಗೇರಿ ಇರುತ್ತೆ’ ಹೇಳಿಕೆ : ನಟ ಉಪೇಂದ್ರ ವಿರುದ್ಧ ಅಟ್ರಾಸಿಟಿ ಪ್ರಕರಣ
ಅದೃಷ್ಟವಶಾತ್ ನೀರಿಗೆ ಇಳಿದಿದ್ದ ರಂಜಿತ್ ಎಂಬ ವಿದ್ಯಾರ್ಥಿಯನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸಿದ್ದಗಂಗಾ ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದ ಮಗನನ್ನು ನೋಡಲು ತಾಯಿ ಬಂದಿದ್ದರು ಎಂದು ತಿಳಿದುಬಂದಿದೆ. ಒಟ್ಟಾರೆ ವಿದ್ಯಾರ್ಥಿಯನ್ನು ರಕ್ಷಿಸಲು ಹೋದ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಕ್ಯಾತ್ಸಂದ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ಹಾಗೂ ಮುಳುಗು ತಜ್ಞರು ದೌಡಾಯಿಸಿದ್ದು, ಮೃತದೇಹಗಳನ್ನು ಹುಡುಕಾಡುತ್ತಿದ್ದಾರೆ.