ಪ್ರಸ್ತುತ ಐದು ಕೆ.ಜಿ ಅಕ್ಕಿ ಮತ್ತು ಉಳಿದ ಐದು ಕೆ.ಜಿ ಅಕ್ಕಿ ಬದಲಿಗೆ ಹಣ ನೀಡಲಾಗುತ್ತಿದೆ. ಇದರಿಂದ ಹೊಟ್ಟೆ ತುಂಬಾ ಊಟ ಮಾಡೋಕೆ ಆಗುತ್ತಿಲ್ಲ. ನಮಗೆ ಹಣದ ಬದಲು 10 ಕೆ.ಜಿ ಅಕ್ಕಿಯನ್ನೇ ಕೊಡಿ ಎಂಧು ರೈತರೊಬ್ಬರು ಜನತಾದರ್ಶನದಲ್ಲಿ ಸಚಿವರ ಬಳಿ ಮನವಿ ಮಾಡಿದ್ದಾರೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ್ ಅವರು ಜನತಾದರ್ಶನ ಕಾರ್ಯಕ್ರಮ ನಡೆಸಿದ್ದಾರೆ. ಈ ವೇಳೆ, ಸಚಿವರಿಗೆ ತಮ್ಮ ಮನವಿ ಸಲ್ಲಿಸಿದ ರೈತರೊಬ್ಬರು ನಮಗೆ ಹಣ ಬೇಡ, ಅಕ್ಕಿಯನ್ನೇ ಕೊಡಿ ಎಂದು ಕೇಳಿದ್ದಾರೆ.
ಇನ್ನು, ರೈತರಿಗೆ ಸರಿಯಾಗಿ ಬೆಳೆ ವಿಮೆ ನೀಡಲಾಗಿಲ್ಲವೆಂದು ಕೃಷಿ ಅಧಿಕಾರಿಗಳ ವಿರುದ್ಧ ಸಚಿವರು ಸಿಟ್ಟಾಗಿದ್ದರು. ಜನತಾದರ್ಶನಕ್ಕೆ ಸರಿಯಾಗಿ ತಯಾರಿ ನಡೆಸಿಲ್ಲವೆಂದು ತಹಶೀಲ್ದಾರ್ ವಿಶ್ವನಾಥ್ ಅವರನ್ನು ತರಾಟೆಗೆ ತೆಗೆದುಕೊಂಡರು. “ರಜೆ ಪ್ರವಾಸಕ್ಕೆ ಬರುವಂತೆ ಬಂದಿದ್ದೀರಾ? ಏನ್ ಸಿದ್ದತೆ ನಡೆಸಿದ್ದೀರಾ?” ಎಂದು ಕಿಡಿಕಾರಿದರು.
ಜನತಾದರ್ಶನದಲ್ಲಿ ಕುಣಿಗಲ್ ಶಾಸಕ ಡಾ.ರಂಗನಾಥ್, ಜಿಲ್ಲಾಧಿಕಾರಿ ಕೆ ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಭು ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.