ಇತಿಹಾಸ ಪ್ರಸಿದ್ದವಾಗಿರುವ ತುಮಕೂರಿನ ಚನ್ನಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು
ಗುಬ್ಬಿಯಪ್ಪ ದೇವಾಲಯದಲ್ಲಿ ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕೈಂಕರ್ಯಗಳು ವಿಧಿವತ್ತಾಗಿ ನಡೆದವು. ಹಲವು ಮಠಾಧೀಶರು ಪೂಜಾ ವಿಧಿ ವಿಧಾನ ನಡೆಸಿಕೊಟ್ಟರು. ಗುಬ್ಬಿಯಪ್ಪ ಎಂದೇ ಉಲ್ಲೇಖಿಸುವ ಚನ್ನಬಸವೇಶ್ವರ ಸ್ವಾಮಿಗೆ ಇಂದು ವಿಶೇಷ ಹೂವಿನ ಅಲಂಕಾರ ಮಾಡಿದ್ದು, ಸ್ವಾಮಿಯ ಪಲ್ಲಕ್ಕಿ ಮೆರವಣಿಗೆ ಸಾಗಿ ಪುಷ್ಪಾಲಂಕೃತ ರಥದಲ್ಲಿ ಕುಳ್ಳಿರಿಸಿ ಮಧ್ಯಾಹ್ನ 1 ಗಂಟೆಗೆ ಸಾವಿರಾರು ಭಕ್ತರು ರಥವನ್ನು ಭಕ್ತಿ ಪೂರಕವಾಗಿ ಎಳೆದರು. ಈ ಸಂದರ್ಭದಲ್ಲಿ ಹರಕೆ ಹೊತ್ತ ಭಕ್ತರು ಬಾಳೆಹಣ್ಣು, ದವನ ಎಸೆಯುವ ಮೂಲಕ ತಮ್ಮ ಇಷ್ಟಾರ್ಥ ಪ್ರಾರ್ಥನೆ ಸಲ್ಲಿಸಿದರು.
ರಥೋತ್ಸವ ನಡೆದ ಕೂಡಲೇ ವಿವಿಧ ಸಮಾಜ, ಸಂಘ ಸಂಸ್ಥೆಗಳು ಪಾನಕ ಫಲಾಹಾರ ಸೇವೆ ನಡೆಸಿದರು. ನಂತರ ದೇವಾಲಯದ ಆವರಣದಲ್ಲಿ ಆರಂಭವಾದ ಮಹಾ ದಾಸೋಹ ನಿರಂತರ ರಾತ್ರಿಯವರೆಗೆ ನಡೆಯಿತು. ಈ ಬಾರಿ ಭಕ್ತರು ಮಿಠಾಯಿ ಪ್ರಸಾದವನ್ನು ದಾನಿ ಧರ್ಮಪಾಲ್ ಕುಟುಂಬ ಮಾಡಿಸಿದ್ದರೆ, ಒಂದೂವರೆ ಟನ್ ಬೂಂದಿ ಸೇವೆಯನ್ನು ಅಗ್ನಿವಂಶ ತಿಗಳ ಸಮಾಜ ತಯಾರಿಸಿ ಪ್ರಸಾದ ವಿನಿಯೋಗಿಸಿದೆ. ದೇವಾಲಯದ ಆವರಣವನ್ನು ಸಂಪೂರ್ಣ ವಿಶೇಷ ಹೂವಿನ ಚಪ್ಪರ ಅಲಂಕಾರ ಕಣ್ಮನ ಸೆಳೆಯಿತು. ಎಲ್ಲ ಸೇವಾ ಕಾರ್ಯದಲ್ಲಿ ಹದಿನೆಂಟು ಸಮುದಾಯಗಳ ಮುಖಂಡರು ಸಾಕ್ಷಿಯಾದರು.
ಈ ಸುದ್ದಿ ಓದಿದ್ಧೀರಾ? ಬೀದರ್ ಲೋಕಸಭಾ ಕ್ಷೇತ್ರ | ಅಂತಿಮ ಘಟ್ಟದತ್ತ ʼಕೈʼ ಟಿಕೆಟ್ ಜಿದ್ದಾಜಿದ್ದಿ; ಯಾರಾಗಲಿದ್ದಾರೆ ಕಾಂಗ್ರೆಸ್ ಅಭ್ಯರ್ಥಿ?
ಸುಡು ಬಿಸಿಲು ಲೆಕ್ಕಿಸದೆ ಸಾಗರೋಪಾದಿಯಲ್ಲಿ ಆಗಮಿಸಿದ ಸಾವಿರಾರು ಭಕ್ತರಿಗೆ ಕುಡಿಯುವ ನೀರು ವ್ಯವಸ್ಥೆಯನ್ನು ಭಕ್ತರೇ ಮಾಡಿದ್ದರು. ಹಲವು ಸಂಘದವರು ನೀಡಿದ ಪಾನಕ ಕೂಡಾ ಬಾಯಾರಿಕೆ ತಣಿಸಿತ್ತು. ಇಡೀ ಜಾತ್ರಾ ಮಹೋತ್ಸವ ಉಸ್ತುವಾರಿ ಜಾತ್ರಾ ಸಮಿತಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಚುನಾವಣಾ ನೀತಿ ಸಂಹಿತೆಗೆ ಅನುಗುಣವಾಗಿ ನಿರ್ವಹಿಸಿದರು. ಈ ಬಾರಿ ಮಹಾ ದಾಸೋಹ ವ್ಯವಸ್ಥೆ ನಿರಂತರ ರಾತ್ರಿ 11ರವರೆಗೆ ನಡೆದಿರುವುದು ಭಕ್ತರಲ್ಲಿ ಸಂತಸ ತಂದಿದೆ. ಜಾತ್ರೆಯ ಮತ್ತೊಂದು ವಿಶೇಷ ಬೆಳ್ಳಿ ಪಲ್ಲಕ್ಕಿ ಉತ್ಸವ ಇದೇ ತಿಂಗಳ 25 ರಂದು ಅದ್ದೂರಿಯಾಗಿ ನಡೆಯಲಿದೆ. ಇಡೀ ರಾತ್ರಿ ನಡೆಯುವ ಈ ಉತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಲಿದ್ದಾರೆ.