ಗೋಶಾಲೆಯಲ್ಲಿ ಕಳೆದ ಎರಡು ತಿಂಗಳಿಂದ ರಾಸುಗಳಿಗೆ ಸಮರ್ಪಕ ಮೇವು ನೀರು ನೀಡದ ಕಾರಣ 10ಕ್ಕೂ ಹೆಚ್ಚು ರಾಸುಗಳು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನಲ್ಲಿ ಇತ್ತೀಚೆಗೆ ನಡೆದಿದೆ.
“ತಾಲೂಕಿನ ಬೈಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೆಡ್ಡಿಹಳ್ಳಿ ಗ್ರಾಮದ ಬಳಿಯ ‘ಗೋಮುಖ’ ಗೋಶಾಲೆಯಲ್ಲಿ ಎರಡು ತಿಂಗಳುಗಳಿಂದ ಮೇವು, ನೀರು ಕೊಡದೆ ಕಬ್ಬಿಣದ ಬೇಲಿಯಲ್ಲಿಯೇ ಎಮ್ಮೆ ಹಾಗೂ ರಾಸುಗಳನ್ನು ಕೂಡಿ ಹಾಕಲಾಗಿದೆ. ಅವುಗಳಿಗೆ ಸಮರ್ಪಕ ಮೇವು, ನೀರು ನೀಡಿಲ್ಲ” ಎಂದು ಸ್ಥಳೀಯರ ಆರೋಪ ಕೇಳಿಬಂದಿದೆ.
“ಗೋಮುಖ ಎಂಬ ಹೆಸರಿನಲ್ಲಿ ಪ್ರಾರಂಭಿಸಿರುವ ಗೋಶಾಲೆಯನ್ನು ಸರ್ಕಾರಿ ಅನುದಾನ ಬಳಸಿಕೊಳ್ಳಲು ಅಥವಾ ಇಲ್ಲಿನ ಸರ್ಕಾರಿ ಗೋಮಾಳ ಕಬಳಿಸುವ ದುರುದ್ದೇಶದಿಂದ ಮಾಡಲಾಗಿದೆಯೇ ಹೊರತು ನಿಜವಾದ ಗೋರಕ್ಷಣೆಗಾಗಿ ಅಲ್ಲ. ಇಲ್ಲಿ ರಾಸುಗಳಿಗೆ ಸರಿಯಾಗಿ ಆಹಾರ ನೀಡುತ್ತಿಲ್ಲ. ಸರಿಯಾದ ನಿರ್ವಹಣೆಯೂ ಇಲ್ಲದೆ ಮೂಕ ಪ್ರಾಣಿಗಳು ಮೃತಪಟ್ಟಿವೆ” ಎಂದು ಸ್ಥಳೀಯರು ಆರೋಪಿಸಿದ್ದಾರೆ.
“ಸರ್ಕಾರದಿಂದ ಲಾಭ ಪಡೆಯುವ ಉದ್ದೇಶದಿಂದ ಗೋಶಾಲೆ ತೆರೆಯಲಾಗಿದ್ದು, ಪಕ್ಕದಲ್ಲಿನ ಗೋಮಾಳ ಕಬಳಿಸುವ ಯತ್ನ ಮಾಡಲಾಗುತ್ತಿದೆ. ಆ ಕಾರಣದಿಂದ ಇಲ್ಲಿನ ರಾಸುಗಳನ್ನು ನಿಗಾವಹಿಸಿ ಸಾಕುತ್ತಿಲ್ಲ” ಎಂದು ಸ್ಥಳೀಯ ನಿವಾಸಿ ಸಿದ್ದಲಿಂಗಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಲಿಂಗಾಯತ ಸ್ವತಂತ್ರ ಧರ್ಮ ಆಗುವುದರಿಂದ ಹಿಂದುತ್ವಕ್ಕೆ ಧಕ್ಕೆಯಾಗದು: ಸಿದ್ಧರಾಮ ಸ್ವಾಮೀಜಿ
“ಗೋಶಾಲೆಯಲ್ಲಿ ಗೋವುಗಳು ಸತ್ತಿರುವುದರ ಬಗ್ಗೆ ಪಶು ಇಲಾಖೆಗೆ ಮಾಹಿತಿ ನೀಡಲಾಗಿದೆ. ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ಹತ್ತಕ್ಕೂ ಹೆಚ್ಚು ರಾಸುಗಳು ಸಾವಿಗೀಡಾಗಿವೆ” ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ್ ತಿಳಿಸಿದ್ದಾರೆ.
“ಗೋಶಾಲೆಯಲ್ಲಿ ರಾಸುಗಳ ಕಸ ಎತ್ತದ ಕಾರಣ ತೊಂದರೆಯಾಗಿದೆ. ಒಂದು ತಿಂಗಳಿನಿಂದ ಮೇವು ನೀರು ಇರಲಿಲ್ಲ. ಕೆಲವು ದಾನಿಗಳು ಮೇವು ದಾನ ನೀಡಿದ್ದಾರೆ. ಇತ್ತೀಚೆಗೆ 10ಕ್ಕೂ ಹೆಚ್ಚು ರಾಸು ಸಾವಿಗೀಡಾಗಿವೆ” ಎಂದು ಗೋಶಾಲೆ ನಿರ್ವಣಾಕಾರ ದೇಶ್ಯಾ ನಾಯಕ್ ತಿಳಿಸಿದ್ದಾರೆ.