ವಿಧಾನಸೌಧದೊಳಗೆ ಖಾಸಗಿ ವ್ಯಕ್ತಿ ಪ್ರವೇಶ ಹಿನ್ನೆಲೆ : ಹೈ ಅಲರ್ಟ್ ಆದ ಭದ್ರತಾ ಸಿಬ್ಬಂದಿ

Date:

  • ಭದ್ರತೆ ಪರಿಶೀಲನೆ ನಡೆಸಿದ ಸ್ಪೀಕರ್ ಯು ಟಿ ಖಾದರ್
  • 224 ಶಾಸಕರ ಫೋಟೋ ಹಿಡಿದು ಪರಿಶೀಲಿಸಿದ ಮಾರ್ಷಲ್‌ಗಳು

ಕಳೆದ ಶುಕ್ರವಾರ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆಯ ವೇಳೆ ಸದನ ಪ್ರವೇಶಿಸಿದ್ದ ಖಾಸಗಿ ವ್ಯಕ್ತಿಯೋರ್ವನ ಪ್ರಕರಣದ ಬಳಿಕ ಇಡೀ ವಿಧಾನಸೌಧದ ಚಿತ್ರಣವನ್ನೇ ಸೋಮವಾರ(ಜು.10) ಬದಲಿಸಿದೆ.

ಖುದ್ದು ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಅವರೇ, ‘ಶಕ್ತಿಕೇಂದ್ರ’ದ ಎಲ್ಲ ದ್ವಾರಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಗತ್ಯ ಭದ್ರತಾ ಕ್ರಮ ಜರಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದಾದ ಬಳಿಕ ವಿಧಾನಸೌಧ ಆವರಣ ಖಾಕಿ ಕಣ್ಗಾವಲಿಂದ ಸಾಗುತ್ತಿದೆ.

ಮೊನ್ನೆ ಮೊನ್ನೆಯವರೆಗೂ ಜನರಿಂದ ಸದಾ ಗಿಜಿಗುಡುತ್ತಿದ್ದ ವಿಧಾನಸೌಧದ ಆವರಣ ಇಂದು ಸಂಪೂರ್ಣ ಖಾಲಿಖಾಲಿಯಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬಜೆಟ್ ಮಂಡನೆಯ ದಿನ ಮೊಳಕಾಲ್ಮೂರು ಶಾಸಕರ ಹೆಸರಿನಲ್ಲಿ ವಿಧಾನಸಭೆ ಪ್ರವೇಶಿಸಿದ ವ್ಯಕ್ತಿಯೋರ್ವನಿಂದ ಆದ ಭ್ರದತಾ ಲೋಪ ಇಡೀ ವಿಧಾನಸೌಧದ ಆವರಣವನ್ನೇ ಬದಲಾಯಿಸಿಬಿಟ್ಟಿದೆ. ಇದರ ಪರಿಣಾಮ ವಿಧಾನಸೌಧದ ದಶದಿಕ್ಕುಗಳಲ್ಲೂ ಪೊಲೀಸ್ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ನಾಲ್ಕೂ ದ್ವಾರಗಳಲ್ಲಿ ಮೆಟಲ್ ಡಿಟೆಕ್ಟರ್ ಪರಿಶೀಲನೆ ನಡೆಸಲಾಗುತ್ತಿದೆ. ವಿಧಾನಸೌಧದ ಸಿಬ್ಬಂದಿಗಳನ್ನೂ ಒಳಗೊಂಡಂತೆ ಶಕ್ತಿ ಕೇಂದ್ರ ಪ್ರವೇಶಿಸುವ ಎಲ್ಲರನ್ನೂ ಪೊಲೀಸರು ಹಾಗೂ ಮಾರ್ಷಲ್‌ಗಳು ಬಿಗಿ ತಪಾಸಣೆ ನಡೆಸಿ ಪ್ರವೇಶಾವಕಾಶ ಕಲ್ಪಿಸಿದರು.

ಈ ನಡುವೆಯೇ ವಿಧಾನಸೌಧದ ಮಹಿಳಾ ಸಿಬ್ಬಂದಿಯೋರ್ವರು ಬ್ಯಾಗ್‌ನಲ್ಲಿ ಚಾಕು ತಂದಿದ್ದರು. ಭದ್ರತಾ ಸಿಬ್ಬಂದಿ ಆ ಬಗ್ಗೆ ಅವರಿಂದ ಮಾಹಿತಿ ಪಡೆದು ಅದನ್ನು ವಶಕ್ಕೆ ತೆಗೆದುಕೊಂಡು, ಅವರನ್ನು ಒಳಗೆ ಕಳುಹಿಸಿದರು.

ಈ ಬೆಳವಣಿಗೆ ನಡುವೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್, ನಗರ ಪೊಲೀಸ್ ಆಯುಕ್ತ ದಯಾನಂದ್ ಜೊತೆಗೂಡಿ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ವಿಧಾನಸೌಧದ ಎಲ್ಲ ದ್ವಾರಗಳ ಪರಿಶೀಲನೆ ನಡೆಸಿದರು. ಹಾಗೆಯೇ ಹೈಕೋರ್ಟ್ ಗೇಟ್ ದ್ವಾರ ಹಾಗೂ ಕೆಂಗಲ್ ಗೇಟ್ ಬಳಿ ಕೆಟ್ಟು ನಿಂತಿರುವ ಮೆಟಲ್ ಸ್ಕ್ಯಾನರ್ ಗಳನ್ನು ಸರಿಪಡಿಸುವಂತೆ ಸೂಚನೆ ನೀಡಿದರು. ಹಾಗೆಯೇ ಅಗತ್ಯವಿರುವ ಕಡೆ ಭದ್ರತೆ ಹೆಚ್ಚಿಸುವಂತೆ ಸೂಚಿಸಿದರು. ಜೊತೆಗೆ ಜನಸ್ನೇಹಿ ಪರಿಣಾಮಕಾರಿ ಭದ್ರತಾ ವ್ಯವಸ್ಥೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು‌.

ಇವೆಲ್ಲದರ ನಡುವೆ ವಿಧಾನಸಭೆ ಆವರಣಕ್ಕೆ ಶಾಸಕರು ಪ್ರವೇಶಿಸುವ ಬಾಗಿಲುಗಳ ಬಳಿಯ ಭದ್ರತೆಗೂ ಬಿಗಿಯಾಗಿತ್ತು. ಸದನ ಪ್ರವೇಶಿಸುವ ಶಾಸಕರ ಗುರುತಿನ ಚೀಟಿ ಪ್ರದರ್ಶನ ಕಡ್ಡಾಯ ಮಾಡಲಾಗಿತ್ತು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸ್ಪೀಕರ್ ಖಾದರ್, ಕನ್ನಡ ಮತ್ತು ಬೆತ್ತಲಾದ ಬಿಜೆಪಿ

ಹಾಗೆಯೇ ಭದ್ರತಾ ಸಿಬ್ಬಂದಿಗೂ ಎಲ್ಲ ಶಾಸಕರ ಫೋಟೋ ಹಾಗೂ ಕ್ಷೇತ್ರದ ಮಾಹಿತಿ ಇರುವ ಪುಸ್ತಿಕೆಯನ್ನು ನೀಡಲಾಗಿದ್ದು, ಅದನ್ನು ಪರಿಶೀಲಿಸಿಯೇ ಒಳಬಿಡಲು ಸೂಚಿಸಲಾಗಿತ್ತು. ಹೀಗೆ ನಾಲ್ಕು ದಿನಗಳ ಹಿಂದಾದ ಭದ್ರತಾ ಲೋಪದ ಪರಿಣಾಮ ವಿಧಾನಸೌಧ ಖಾಕಿ ಕಣ್ಗಾವಲಲ್ಲಿ ಬಿಗಿ ಭದ್ರತೆಯಿಂದ ನಿಲ್ಲುವಂತಾಗಿದೆ.

ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಯು ಟಿ ಖಾದರ್

ಘಟನೆಯ ಬಗ್ಗೆ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ ಸ್ಪೀಕರ್ ಯು ಟಿ ಖಾದರ್, ಶಾಸಕಿ ಕರೆಮ್ಮ ಅವರಿಗೆ ಹಂಚಿಕೆ ಮಾಡಲಾಗಿದ್ದ ಆಸನ ಸಂಖ್ಯೆ 199ರಲ್ಲಿ ಮೊಳಕಾಲ್ಮೂರು ಎಂಎಲ್​ಎ ಅಂತ ಹೇಳಿಕೊಂಡು ಬಂದು ಅಪರಿಚಿತ ವ್ಯಕ್ತಿ ಕೂತಿದ್ದರು. ಆದರೆ ಆ ಕ್ಷೇತ್ರದಿಂದ ಎಸ್‌ ವೈ ಗೋಪಾಲಕೃಷ್ಣ ಆಯ್ಕೆ ಆಗಿದ್ದರು. ಬಳಿಕ ಅನುಮಾನಗೊಂಡು ಅವರನ್ನು ವಿಚಾರಣೆ ನಡೆಸಿದಾಗ ಅವರು ಚಿತ್ರದುರ್ಗದ 76 ವರ್ಷದ ತಿಪ್ಪೇರುದ್ರಪ್ಪ ಎಂದು ತಿಳಿದುಬಂತು. ಬಳಿಕ ಅವರನ್ನು ಪೊಲೀಸರ ವಶಕ್ಕೆ ನೀಡಿ, ವಿಚಾರಣೆ ಕೂಡ ಮಾಡಲಾಗಿದೆ. ಈ ಘಟನೆಯಿಂದಾಗಿ, ದೇವರೇ ಅವರ ಮೂಲಕ ನಮ್ಮ ಕಣ್ಣನ್ನು ತೆರೆಸಿದ್ದಾರೆ. ಎಲ್ಲ ಶಾಸಕರು ಒಳಗೆ ಬರುವ ಸಂದರ್ಭದಲ್ಲಿ ಅಧಿಕಾರಿಗಳ ಜೊತೆಗೆ ಸದ್ವರ್ತನೆ ತೋರುವಂತೆ ಹಾಗೂ ಭದ್ರತೆಯ ಬಗ್ಗೆ ಜಾಗರೂಕರಾಗಿರುವಂತೆ ಸೂಚಿಸಿದರು.

ಅದೇ ರೀತಿ ಈ ಬಗ್ಗೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ವಿಧಾನಸೌಧ, ಹೈಕೋರ್ಟ್ ಹಾಗೂ ರಾಜಭವನವನ್ನು ಸೇರಿಸಿಕೊಂಡು ನೂತನ ಭದ್ರತಾ ತಂತ್ರಜ್ಞಾನವನ್ನು ಅಳವಡಿಸುವ ಬಗ್ಗೆ ಮಾತುಕತೆ ನಡೆಸಲಾಗಿದೆ. ಎಲ್ಲರ ಸಹಕಾರವನ್ನು ಕೋರುವುದಾಗಿ ಸ್ಪೀಕರ್ ಯು ಟಿ ಖಾದರ್ ಅಧಿವೇಶನದಲ್ಲಿ ತಿಳಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ವಿಧಾನಸೌಧದ ಭದ್ರತೆಯ ಬೆಲೆ ಕೇವಲ 100 ರೂಪಾಯಿಗಳು..

    ಪ್ರತಿದಿನ ಅದೆಷ್ಟು ದುಡ್ಡು ಹೀಗೆ ಸಂಗ್ರಹವಾಗುತ್ತದೋ, ಅದನ್ನ ಅಲ್ಲಿರುವ ಭದ್ರತಾ ಸಿಬ್ಬಂದಿಗಳೆಲ್ಲಾ ಹಂಚಿಕೊಳ್ಳುತ್ತಾರೆ.

    ಇನ್ನು ಮತ್ತು ಮುಖ್ಯ ಅಧಿಕಾರಿಗಳು, ಸೇಕ್ರೆಟರಿಯೆಟ್ ಹಾಗೂ ಅಂಡರ್ ಸೆಕ್ರಿಯೇಟರಿ ಅವರುಗೆ ಬರುವ ಸೂಟ್ಕೇಸ್ ಕಮಿಷನ್ ಅನ್ನು ವಿಧಾನಸೌಧದ ಕಚೇರಿಗೆ ನೇರವಾಗಿ ಬಂದು ಬೌನ್ಸರ್ ಗಳು ತೆಗೆದುಕೊಂಡು ಹೋಗುತ್ತಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಎಸ್‌ವೈ ಪೋಕ್ಸೊ | ಕಾನೂನು ರಕ್ಷಕರಿಂದಲೇ ಕಾನೂನು ಉಲ್ಲಂಘನೆ: ವಕೀಲ ಎಸ್‌ ಬಾಲನ್ ಆರೋಪ

"ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವಿರುದ್ಧ ಗಂಭೀರವಾಗಿರುವ ಪೋಕ್ಸೊ ಪ್ರಕರಣ...

ಕಾಂಗ್ರೆಸ್ ಪರ ಕೆಲಸ ಮಾಡಿದ್ದಕ್ಕೆ ಠಾಣೆಗೆ ಶಾಮಿಯಾನ ಹಾಕಿ ನಟ ದರ್ಶನ್‌ಗೆ ರಕ್ಷಣೆಯೇ: ಶೋಭಾ ಕರಂದ್ಲಾಜೆ ಪ್ರಶ್ನೆ

ಕೊಲೆ ಪ್ರಕರಣದಲ್ಲಿ ನಟ ದರ್ಶನ ಬಂಧನವಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ...

ಕೆಕೆಆರ್‌ಡಿಬಿ ಪ್ರಗತಿ ಪರಿಶೀಲನೆ | ವರ್ಷಕ್ಕೆ 5 ಸಾವಿರ ಕೋಟಿ, ಜು.15ರೊಳಗೆ ಕ್ರಿಯಾ ಯೋಜನೆ ರಚಿಸಲು ಸಿಎಂ ಸೂಚನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಜೂ.14) ಗೃಹ ಕಚೇರಿ ಕೃಷ್ಣಾದಲ್ಲಿ ಕಲ್ಯಾಣ...

ಕೃಷಿ ರಾಯಭಾರಿಯಾಗಿ ನಟ ದರ್ಶನ್‌ ಮುಂದುವರಿಕೆ ಸಾಧ್ಯವಿಲ್ಲ: ಸಚಿವ ಎಂ ಬಿ ಪಾಟೀಲ್

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ, ಬಂಧನಕ್ಕೊಳಗಾಗಿರುವ ನಟ ದರ್ಶನ್ ಅವರನ್ನು ಕೃಷಿ...