ಒಳ ಮೀಸಲಾತಿ ಕಲ್ಪಿಸುವಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಅಲೆಮಾರಿಯ 59 ಸಮುದಾಯಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ತುಮಕೂರು ಜಿಲ್ಲಾ ಒಳ ಮೀಸಲಾತಿ ಹೋರಾಟ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲಾಯಿತು.
ಸಮಿತಿಯ ಅಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ ಮತ್ತು ಗೌರವ ಅಧ್ಯಕ್ಷ ಕೆ.ದೊರೈರಾಜ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ‘ಒಳ ಮೀಸಲಾತಿ’ಯ ಮೂಲ ಉದ್ದೇಶವೇ ಮೀಸಲಾತಿಯ ಸವಲತ್ತು ಮತ್ತು ಪ್ರಾತಿನಿಧ್ಯ ಎಲ್ಲರಿಗೂ ಸಮನಾಗಿ ದೊರೆಯಬೇಕು ಎಂಬುದಾಗಿದೆ ಎಂದರು.
ಅತ್ಯಂತ ಹಿಂದುಳಿದ ಸಮುದಾಯಗಳು ಎಂದು ಗುರುತಿಸಿ 59 ಜಾತಿಗಳನ್ನು ಪ್ರವರ್ಗ ʼಎʼರಲ್ಲಿಯೂ, ಹೆಚ್ಚು ಹಿಂದುಳಿದ ಸಮುದಾಯಗಳು ಎಂದು ಗುರುತಿಸಿದ 18 ಜಾತಿಗಳನ್ನು ಪ್ರವರ್ಗʼಬಿʼಯಲಿಯೂ ಹಿಂದುಳಿದ ಸಮುದಾಯಗಳು ಎಂದು ಗುರುತಿಸಿದ 17 ಜಾತಿಗಳನ್ನು ಪ್ರವರ್ಗʼಸಿʼಯಲ್ಲಿಯೂ, ಕಡಿಮೆ ಹಿಂದುಳಿದ ಸಮುದಾಯಗಳು ಎಂದು ಗುರುತಿಸಿದ 4 ಜಾತಿಗಳನ್ನು ಪ್ರವರ್ಗ‘ಡಿʼಯಲ್ಲಿಯೂ ಹಾಗೂ ಮೂಲಜಾತಿಯ ಹೆಸರನ್ನು ತಿಳಿಯಪಡಿಸದಿರುವ ಆದಿಆಂಧ್ರ, ಆದಿದ್ರಾವಿಡ ಮತ್ತು ಆದಿಕರ್ನಾಟಕ ಜಾತಿಗಳನ್ನು ಪ್ರವರ್ಗ‘ಇʼಯಲ್ಲಿ ಸೇರಿಸಿ ಲಭ್ಯವಿರುವ ಶೇ. 17 ಮೀಸಲಾತಿ ಪ್ರಮಾಣವನ್ನು ಮೇಲಿನ 5 ಪ್ರವರ್ಗಗಳಿಗೆ ಶೇ.1, 6, 5, 4, 1 ರ ಅನುಸಾರವಾಗಿ ಹಂಚಿಕೆ ಮಾಡಿ ಶೀಫಾರಸ್ಸು ಮಾಡಲಾಗಿತ್ತು. ಆಯೋಗವು ಈ ರೀತಿಯ ಗುಂಪುಗಳನ್ನು ಮಾಡುವಾಗ ಸಮೀಕ್ಷೆ ನಡೆಸಿ ಕಲೆ ಹಾಕಿದ ಅಂಕಿಅಂಶಗಳನ್ನು ಆಧಾರವಾಗಿಟ್ಟುಕೊಂಡು 101 ಜಾತಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಹಿಂದುಳಿದಿರುವಿಕೆ ಮತ್ತು ಸರ್ಕಾರಿ ಉದ್ಯೋಗದಲ್ಲಿ ಪ್ರಾತಿನಿಧ್ಯದ ಕೊರತೆ ಆಧರಿಸಿ ಮೇಲಿನಂತೆ ಗುಂಪುಗಳನ್ನು ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.
ಹೊಲೆಯ ಸಂಬಂಧಿತ ಸೂಕ್ಷ್ಮ, ಅತಿಸೂಕ್ಷ್ಮ ಹಾಗೂ ಮಾದಿಗ ಸಂಬಂಧಿತ ಸೂಕ್ಷ್ಮ, ಅತಿಸೂಕ್ಷ್ಮ ಸುಮುದಾಯಗಳನ್ನು ಆಯಾ ಸಮುದಾಯಗಳ ಹಿಂದುಳಿದಿರುವಿಕೆಯ ಆಧಾರದಲ್ಲಿ ಬೇರೆ ಬೇರೆ ಗುಂಪುಗಳಲ್ಲಿ ಇಟ್ಟು ಉಪವರ್ಗೀಕರಣ ಮಾಡಲಾಗಿತ್ತು. ಆದರೆ ಸರ್ಕಾರವು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರ ವರದಿಯ ಶಿಫಾರಸ್ಸುಗಳನ್ನು ಮಾರ್ಪಾಟು ಮಾಡುವಾಗ ಐದು ಗುಂಪುಗಳ ಬದಲಾಗಿ ಮೂರು ಗುಂಪುಗಳನ್ನಾಗಿ ಮಾಡಿ ಸೂಕ್ಷ್ಮ, ಅತಿಸೂಕ್ಷ್ಮ ಮತ್ತು ಅಲೆಮಾರಿ ಸಮುದಾಯಗಳನ್ನು ಪ್ರವರ್ಗ-ಸಿ ನಲ್ಲಿ ಸೇರಿಸಲಾಗಿದೆ ಎಂದಿದ್ದಾರೆ.
ಭೋವಿ, ಲಂಬಾಣಿ, ಕೊರಮ ಮತ್ತು ಕೊರಚ ಸಮುದಾಯಗಳನ್ನು ಸೇರಿಸಿದ್ದು, ಆ ಸಮುದಾಯಗಳು ರಾಜಕೀಯವಾಗಿ, ಆರ್ಥಿಕವಾಗಿ ಮುಂದುವೆರೆದಿವೆ. ಸರ್ಕಾರಿ ಸೇವೆಯಲ್ಲಿಯೂ ಗಣನೀಯ ಪ್ರಮಾಣದ ಪ್ರಾತಿನಿಧ್ಯ ಹೊಂದಿರುತ್ತವೆ. ಈ ಎಲ್ಲ ಕಾರಣಗಳಿಂದ ಪ್ರವರ್ಗ-ಸಿ ಗುಂಪಿಗೆ ಶೇಕಡ 5ರಷ್ಟು ಮೀಸಲಾತಿ ಪ್ರಮಾಣವನ್ನು ನಿಗದಿ ಮಾಡಿದ ಪರಿಣಾಮ ಎಲ್ಲಾ ರೀತಿಯಿಂದಲೂ ಹಿಂದುಳಿದಿರುವ, ಜನಸಂಖ್ಯೆಯಲ್ಲೂ ಕಡಿಮೆಯಿರುವ ಸೂಕ್ಷ್ಮ, ಅತಿಸೂಕ್ಷ್ಮ ಮತ್ತು ಅಲೆಮಾರಿ ಸಮುದಾಯಗಳ ಮೀಸಲಾತಿಯ ಪಾಲನ್ನು ಪಡೆದುಕೊಳ್ಳಲಿದ್ದಾರೆ.
ಇದರಿಂದಾಗಿ ಪ್ರವರ್ಗ-ಸಿ ಗುಂಪಿನ ಸೂಕ್ಷ್ಮ, ಅತಿಸೂಕ್ಷ್ಮ ಮತ್ತು ಅಲೆಮಾರಿ ಸಮುದಾಯಗಳಿಗೆ ಶಾಶ್ವತವಾಗಿ ಅನ್ಯಾಯವಾಗುತ್ತದೆ. ಹಾಗಾಗಿ ಸೂಕ್ಷ್ಮ, ಅತಿಸೂಕ್ಷ್ಮ ಮತ್ತು ಅಲೆಮಾರಿ ಸಮುದಾಯಗಳು ಶಿಕ್ಷಣದಿಂದ ವಂಚಿತರಾಗುವುದರೊಂದಿಗೆ ಉದ್ಯೋಗದಲ್ಲಿಯೂ ಪ್ರಾತಿನಿಧ್ಯ ದೊರೆಯದೆ ಮತ್ತಷ್ಟು ಹಿಂದುಳಿಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನರಸಿಂಹಯ್ಯ ಹೇಮಾವತಿ, ನಿವೃತ್ತ ಸಬ್‌ಇನ್ಸ್ಪೆಕ್ಟರ್ ರಂಗಸ್ವಾಮಯ್ಯ, ಕೋಡಿಯಾಲ ಮಹದೇವ, ಅಲೆಮಾರಿ ಸಮುದಾಯದ ವೆಂಕಟಾಚಲ.ಹೆಚ್.ವಿ., ರಾಮಾಂಜಿನಯ್ಯ, ವಕೀಲ ರಂಗಧಾಮಯ್ಯ, ಲಕ್ಷ್ಮಿರಂಗಯ್ಯ, ನರಸಿಂಹಯ್ಯ ಇದ್ದರು.