ಸಂವಿಧಾನ ಉಳಿಸುವ ಸಂಕಲ್ಪವನ್ನು ನಾವೆಲ್ಲರೂ ಮಾಡೋಣ ಈ ಮೂಲಕ ವಿಶ್ವಕಂಡ ಮಹಾನ್ ಜ್ಞಾನಿ, ಸಮಾನತೆಯ ಪ್ರತಿಪಾದಕ ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿಯ ಹರಿಕಾರ ಹಾಗೂ ಸ್ವಾಭಿಮಾನದ ಸಂಕೇತವಾದ ಬಾಬು ಜಗಜೀವನ್ ರಾಂ ಅವರಿಗೆ ಗೌರವ ಸಲ್ಲಿಸಿದ್ದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ತುಮಕೂರು ನಗರದ ಎನ್ ಆರ್ ಕಾಲೋನಿಯಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ದಲಿತ ಸಂಘರ್ಷ ಸಮಿತಿ ಹಾಗೂ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಡಾ ಬಿ ಆರ್ ಅಂಬೇಡ್ಕರ್ ಅವರ 133ನೇ ಹಾಗೂ ಬಾಬು ಜಗಜೀವನ್‌ರಾಂ ಅವರ 117ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಕಳೆದ 10 ವರ್ಷಗಳಿಂದ ಸಂವಿಧಾನದ ಮೇಲೆ ನಿರಂತರ ಹಲ್ಲೆ ಮಾಡುತ್ತಿರುವ ಎನ್‌ಡಿಎ ಸರ್ಕಾರ ಬಿಜೆಪಿ, ಆರ್‌ಎಸ್‌ಎಸ್ ನಿಯಂತ್ರಿತ ಮೋದಿ 2 ದಿನಗಳ ಹಿಂದೆ, ʼಅಂಬೇಡ್ಕರ್ ಹುಟ್ಟಿ ಬಂದರೂ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲವೆಂದಿರುವ ಹಿಂದಿನ ಮರ್ಮವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಈ ದೇಶದ ಶೋಷಿತ ಸಮುದಾಯಗಳಿಗೆ ಶಕ್ತಿ ತುಂಬಿರುವ ಸಂವಿಧಾನ ನಮ್ಮೆಲ್ಲರಲ್ಲೂ ಅಂಬೇಡ್ಕರ್ ಮರುಹುಟ್ಟು ಪಡೆದಿದ್ದು, ಈ ಸಂಘರ್ಷವನ್ನು ಅತ್ಯಂತ ವಿವೇಚನೆಯಿಂದ ಬಾಬಾ ಸಾಹೇಬರು ನಿಭಾಯಿಸಿ ಸಂವಿಧಾನದಲ್ಲಿ ಸ್ವಾತಂತ್ರ, ಸಮಾನತೆ, ಸೋದರತೆ, ವ್ಯಕ್ತಿಗೌರವ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿ ಸನಾತನವಾದಕ್ಕೆ ತಿಲಾಂಜಲಿ ಇಟ್ಟರು. ಇದನ್ನು ಮರು ಸ್ಥಾಪಿಸಲು ಬಿಜೆಪಿ ಅವಣಿಸುತ್ತಿದೆ. ಹಾಗಾಗಿ ನಾವೆಲ್ಲರೂ ಎಚ್ಚೆತ್ತುಕೊಂಡು ಸಂವಿಧಾನವನ್ನು ಉಳಿಸುವ ಸಂಕಲ್ಪ ಮಾಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು” ಎಂದು ಕರೆ ನೀಡಿದರು.
“ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ 5 ಗ್ಯಾಂಟಿಗಳನ್ನು ಜಾರಿಗೆ ತಂದಿದ್ದು, ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನನ್ನ ನೇತೃತ್ವದ ಪ್ರಣಾಳಿಕೆ ಸಮಿತಿ ಸಿದ್ದಗೊಳಿಸಿದ ಈ ಗ್ಯಾರಂಟಿಗಳು ಬಡಜನರಿಗೆ ಆರ್ಥಿಕ ಶಕ್ತಿ ತುಂಬುತ್ತಿವೆ. ಸ್ಲಂ ಜನರ ಹಕ್ಕೊತ್ತಾಯಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಈ ಅಂಶಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸುತ್ತೇವೆ” ಎಂದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್ ಪಿ ಮುದ್ದಹನುಮೇಗೌಡ ಮಾತನಾಡಿ, “ನಾವು ಸಂಸತ್‌ನಲ್ಲಿ ಮಾತನಾಡಲು ಈ ದೇಶವನ್ನು ಏಕತೆಯಲ್ಲಿ ತೆಗೆದುಕೊಂಡು ಹೋಗಲು ಅಂಬೇಡ್ಕರ್ ಅವರ ಸ್ಪೂರ್ತಿ ಕಾರಣವಾಗಿದೆ. ನಾನೂ ಕೂಡಾ ಶೂದ್ರ ಜಾತಿಗೆ ಸೇರಿದ್ದು, ಜಾತಿ ರಹಿತ ಸಮಾಜವನ್ನು ಕಟ್ಟಲು ಮತ್ತು ಕಾಂಗ್ರೆಸ್‌ನ ಸಾಮಾಜಿಕ ನ್ಯಾಯ ಉಳಿಸುವ ನ್ಯಾಯ ಪತ್ರದ ಗ್ಯಾರಂಟಿಗಳನ್ನು ಜನರಿಗೆ ತಲುಪಿಸಲು ದೇಶದಲ್ಲಿ ಕಾಂಗ್ರೆಸ್ ಆಯ್ಕೆ ಮಾಡಿ ಜಿಲ್ಲೆಯಲ್ಲಿ ನನ್ನನ್ನು ಗೆಲ್ಲಿಸಬೇಕು” ಎಂದು ಮನವಿ ಮಾಡಿದರು.
ಸ್ಲಂ ಜನಾಂದೋಲನ ಕರ್ನಾಟಕದ ಸಂಚಾಲಕ ಎ ನರಸಿಂಹಮೂರ್ತಿ ಮಾತನಾಡಿ, “ಸಮಾನತೆಯಿಲ್ಲದ ಸ್ವಾತಂತ್ರ್ಯ ಅಸಮಾನತೆಯನ್ನು ಸೃಷ್ಟಿಸುತ್ತದೆ. ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಉಳಿಯಲು ಮೋದಿ ಗ್ಯಾರಂಟಿಗೆ ಬದಲಾಗಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನದ ಗ್ಯಾರಂಟಿಗಳು ದೊರೆಯಬೇಕಿದೆ. ಹಾಗಾಗಿ ನಾವು ಸಂವಿಧಾನ ಉಳಿಸುವ ಸಂಕಲ್ಪ ಮಾಡಿ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು” ಎಂದರು.
ಕಾರ್ಯಕ್ರಮಕ್ಕೂ ಮುನ್ನ ಗೃಹ ಸಚಿವ ಪರಮೇಶ್ವರ್ ಅವರು ಮಹಾ ಭೋದಿ ಸತ್ವ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಮತ್ತು ಹಸಿರುವ ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಂವಿಧಾನ ಪೀಠಿಕೆಯನ್ನು ಭೋದಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿ
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಾ ರಫೀಕ್ ಅಹಮದ್, ಹಿರಿಯ ಚಿಂತಕ ಕೆ ದೊರೈರಾಜ್, ಕಾಂಗ್ರೆಸ್ ಮುಖಂಡರುಗಳಾದ ಎನ್ ಗೋವಿಂದರಾಜು, ಇಕ್ಬಾಲ್ ಅಹಮದ್, ಕೆಪಿಸಿಸಿ ಕಾರ್ಯದರ್ಶಿ ರಾಮಕೃಷ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ, ಮಾಜಿ ನಗರಸಭೆ ಸದಸ್ಯರುಗಳಾದ ರೂಪಶ್ರೀ ಶೆಟ್ಟಾಳಯ್ಯ, ಎಸ್. ಮಹೇಶ್, ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ನರಸೀಯಪ್ಪ, ವಾಲೇಚಂದ್ರಯ್ಯ, ನಾರಾಯಾಣಮೂರ್ತಿ ಸೇರಿದಂತೆ ಬಹುತೇಕರು ಇದ್ದರು.
