ಅಂಬೇಡ್ಕರರ ಪ್ರಬುದ್ಧ ಭಾರತ ಮತ್ತು ಮೋದಿಯವರ ವಿಕಸಿತ ಭಾರತ

Date:

ರಾಜಕೀಯ ಸ್ವಾತಂತ್ರ್ಯಕ್ಕಿಂತ ಸ್ವತಂತ್ರ ಭಾರತದಲ್ಲಿ ಸಾಮಾಜಿಕ ಪ್ರಜಾಸತ್ತೆ ಮತ್ತು ಆರ್ಥಿಕ ಪ್ರಜಾಸತ್ತೆಗಳನ್ನು ಬಲಪಡಿಸಿ ಪ್ರಬುದ್ಧ ಭಾರತ ನಿರ್ಮಾಣ ಮಾಡುವುದು ಬಹುದೊಡ್ಡ ಅವಶ್ಯಕತೆಯೆಂದು ಅಂಬೇಡ್ಕರ್ ಮನಗಂಡಿದ್ದರು.

 

ಬಾಬಾಸಾಹೇಬ್ ಅಂಬೇಡ್ಕರ್ ಜಗತ್ತಿನ ಮಹಾನ್ ಪ್ರತಿಭೆ, ನೇತಾರ, ಮಾನವತಾವಾದಿ ಮತ್ತು ಸ್ವರಾಜ್ಯ ಸ್ಥಾಪನೆಗಾಗಿ ವಿಶ್ವಶ್ರೇಷ್ಠ ಸಂವಿಧಾನವನ್ನು ರಚಿಸಿದ ಮಹಾಶಕ್ತಿ. ಅನೇಕ ರಾಷ್ಟ್ರ ನಾಯಕರು ಬ್ರಿಟಿಷ್ ವಸಾಹತುವಾದಿಗಳಿಂದ ಭಾರತಕ್ಕೆ ತಮ್ಮ ಅವಿರತ ಶ್ರಮ, ಹೋರಾಟ ಮತ್ತು ಬಲಿದಾನಗಳಿಂದ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಆದರೆ ಅಂಬೇಡ್ಕರ್ ಕರಡು ರಚನಾ ಸಮಿತಿಯಲ್ಲಿ ನೇಮಕಗೊಂಡಿದ್ದ ಕೆಲವು ಸದಸ್ಯರ ನಿಧನ, ನಿಷ್ಕ್ರಿಯತೆ ಮತ್ತು ಹೊಣೆಗೇಡಿತನದಿಂದಾಗಿ ಒಬ್ಬರೇ ಸಂವಿಧಾನವನ್ನು ಬರೆಯಬೇಕಾಯಿತು.

ಅಂಬೇಡ್ಕರ್ ಅವರ ಸಂವಿಧಾನಾತ್ಮಕ ಚಿಂತನೆಗಳು ಮತ್ತು ಕೊಡುಗೆಗಳು ಸಮಸ್ತ ಭಾರತೀಯರ ವರ್ತಮಾನಕ್ಕೆ ಎಚ್ಚರಿಕೆ ಹಾಗೂ ಭವಿಷ್ಯಕ್ಕೆ ಮಾರ್ಗಸೂಚಿ. ಅವರು ಭಾರತದಲ್ಲಿ ಸ್ವಾತಂತ್ರ್ಯಾ ನಂತರದಲ್ಲಿ ಸಂಭವಿಸಬಹುದಾದ ಹಲವಾರು ವಿದ್ಯಮಾನಗಳನ್ನು ಬಹಳ ಹಿಂದೆಯೇ ಗ್ರಹಿಸಿ ಅವುಗಳಿಗೆ ಸಂವಿಧಾನದಲ್ಲಿ ಸೂಕ್ತ ಪರಿಹಾರಗಳನ್ನು ಒದಗಿಸಿದ್ದಾರೆ.

ಸಂವಿಧಾನ ಮಾರ್ಗವನ್ನು ಅನುಸರಿಸುವುದರಿಂದಲೇ ಭಾರತೀಯ ಸಮಾಜ, ಆರ್ಥಿಕತೆ ಮತ್ತು ರಾಜಕಾರಣಗಳಲ್ಲಿ ಮೂಲಭೂತ ಬದಲಾವಣೆಗಳನ್ನು ತಂದು ಸರ್ವರಿಗೂ ಸಮಬಾಳು ಮತ್ತು ಸರ್ವರಿಗೂ ಸಮಪಾಲು ನೀಡಲು ಸಾಧ್ಯವೆಂದು ಅಂಬೇಡ್ಕರ್ ಪ್ರತಿಪಾದಿಸಿದರು. ಗಾಂಧಿ ನೇತೃತ್ವದಲ್ಲಿ ಗಳಿಸಿದ ರಾಜಕೀಯ ಸ್ವಾತಂತ್ರ್ಯಕ್ಕಿಂತ ಸ್ವತಂತ್ರ ಭಾರತದಲ್ಲಿ ಸಾಮಾಜಿಕ ಪ್ರಜಾಸತ್ತೆ ಮತ್ತು ಆರ್ಥಿಕ ಪ್ರಜಾಸತ್ತೆಗಳನ್ನು ಬಲಪಡಿಸಿ ಪ್ರಬುದ್ಧ ಭಾರತ ನಿರ್ಮಾಣ ಮಾಡುವುದು ಬಹುದೊಡ್ಡ ಅವಶ್ಯಕತೆಯೆಂದು ಅಂಬೇಡ್ಕರ್ ಮನಗಂಡಿದ್ದರು. ಪುರೋಹಿತಶಾಹಿ ರೂಪಿಸಿದ ಜಾತಿವ್ಯವಸ್ಥೆ ಮತ್ತು ಬಂಡವಾಳಶಾಹಿ ರೂಪಿಸಿದ ಅರ್ಥವ್ಯವಸ್ಥೆಗಳನ್ನು ಅಮೂಲಾಗ್ರವಾಗಿ ಬದಲಿಸಿ ದೇಶದಲ್ಲಿ ಸಾಮಾಜಿಕ-ಆರ್ಥಿಕ ಪ್ರಜಾಸತ್ತೆಯನ್ನು ಸಾಧಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ನೀಡಿದ ಸಾಂವಿಧಾನಿಕ ಕೊಡುಗೆಗಳು ಅಮೂಲ್ಯವಾಗಿವೆ. ಸ್ವಾತಂತ್ರ್ಯ ಬಂದು 77 ವರ್ಷಗಳು ಮತ್ತು ಸಂವಿಧಾನ ಜಾರಿಗೊಂಡು 74 ವರ್ಷಗಳು ಸಂದಿದ್ದರೂ ಶ್ರೀಮಂತರು- ಬಡವರ ನಡುವಿನ ಆರ್ಥಿಕ ಅಸಮಾನತೆ ಅಗಾಧವಾಗಿ ಬೆಳೆದಿದೆ. ಜಾತಿ ಕೇಂದ್ರಿತ ಅಪಮಾನ, ಅಸ್ಪೃಶ್ಯತೆ, ತಾರತಮ್ಯಗಳು ಮತ್ತು ಶೋಷಣಾ ಪ್ರವೃತ್ತಿಗಳಿಂದ ಭಾರತದ ಬಹುಜನರ ಬದುಕು ದಯನೀಯವಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನೂ ಓದಿ ಸಂವಿಧಾನಕ್ಕೆ ಅಪಾಯ ಎದುರಾಗಿರುವುದು ಆರ್‌ಎಸ್‌ಎಸ್‌ನವರಿಂದ: ಸಿದ್ದರಾಮಯ್ಯ ಕಿಡಿ

ಸಮಾನ ಹಕ್ಕು ಬಾಧ್ಯತೆಗಳನ್ನುಳ್ಳ ಪ್ರಜೆಗಳು ರೂಪುಗೊಂಡಾಗ ಮಾತ್ರ ಭಾರತವು ಸರ್ವಸ್ವತಂತ್ರ ಗಣರಾಜ್ಯವಾಗುತ್ತದೆ ಎಂದು ಅಂಬೇಡ್ಕರ್ ಪ್ರತಿಪಾದಿಸಿದ್ದರು. ಭಾರತದ ಸಂವಿಧಾನ ಈ ನಿಟ್ಟಿನಲ್ಲಿ ಹಲವಾರು ಪ್ರಗತಿಶೀಲ ಆಶಯಗಳು ಮತ್ತು ಅನುಚ್ಛೇದಗಳನ್ನು ಒಳಗೊಂಡಿದೆ. ಆದರೆ ಇದುವರೆಗೂ ಕೂಡ ಜಾತಿವಿನಾಶಗೊಂಡು ಪ್ರಬುದ್ಧ ಭಾರತ ನಿರ್ಮಾಣಗೊಂಡಿಲ್ಲ. ಈ ನಿಟ್ಟಿನಲ್ಲಿ ಸಂವಿಧಾನ ಪ್ರಜ್ಞೆಯನ್ನು ಆಧರಿಸಿದ ಪ್ರಜಾಸತ್ತಾತ್ಮಕ ಚಿಂತನೆಗಳು ಮತ್ತು ಹೋರಾಟಗಳು ಭಾರತದಲ್ಲಿ ವಿಶೇಷ ಮಹತ್ವ ಹೊಂದಿದೆ. ಇತ್ತೀಚೆಗೆ ನಮ್ಮನ್ನಾಳುತ್ತಿರುವವರು ಬ್ರಾಹ್ಮಣಶಾಹಿಯನ್ನು ಸಾಂಸ್ಥೀಕರಣಗೊಳಿಸುವ ನಿಟ್ಟಿನಲ್ಲಿ ಮನು ಸಂವಿಧಾನವನ್ನು ಮತ್ತೆ ಭಾರತೀಯರ ಮೇಲೆ ಹೇರುವ ಪ್ರಯತ್ನ ನಡೆಸುತ್ತಿರುವುದನ್ನು ಪ್ರಜ್ಞಾವಂತ ಭಾರತೀಯರು ಪ್ರಬಲವಾಗಿ ವಿರೋಧಿಸಿ ಅಂಬೇಡ್ಕರ್ ಸಂವಿಧಾನವನ್ನು ಉಳಿಸುವುದರ ಮೂಲಕ ಭಾರತದ ಗಣತಂತ್ರವನ್ನು ರಕ್ಷಿಸಬೇಕು.

ಭಾರತದಲ್ಲಿ ಪ್ರಸ್ತುತ ಮೋದಿ ಪ್ರಭುತ್ವದಲ್ಲಿ ಸಾಮಾಜಿಕ ಸುಧಾರಣೆ ಮತ್ತು ಆರ್ಥಿಕ ಸುಧಾರಣೆಗಳಿಗೆ ಬಹುದೊಡ್ಡ ಅಡ್ಡಗಲ್ಲು ಎದುರಾಗಿವೆ. ಬೆಳೆಯುತ್ತಿರುವ ಬಲಪಂಥೀಯ ರಾಜಕಾರಣ ಮತ್ತು ಮಾರುಕಟ್ಟೆ ಶಕ್ತಿಗಳ ಪ್ರಾಬಲ್ಯಗಳಿಂದಾಗಿ ಸಾಮಾಜಿಕ ಪ್ರಜಾಸತ್ತೆ ಮತ್ತು ಆರ್ಥಿಕ ಸಮಾನತೆಗಳಿಗೆ ಹಿನ್ನಡೆಯುಂಟಾಗಿದೆ. ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ಸಮುದಾಯಗಳಿಗೆ ಸಂವಿಧಾನದತ್ತವಾಗಿ ಲಭಿಸಲಿರುವ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಶಕ್ತಿಗಳ ಕೈ ನೂತನ ಸಹಸ್ರಮಾನದಲ್ಲಿ ಮೇಲಾಗಿದೆ.

ಸುಧಾರಣಾವಾದಿಗಳು ರಾಜಕೀಯ ಸುಧಾರಣೆಗಿಂತ ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗಳು ಮೊದಲಾಗಬೇಕೆಂದು ಕಾರ್ಯಪ್ರವೃತ್ತರಾದಾಗ ಅವರಿಗೆ ದೇಶದ್ರೋಹಿಗಳ ಹಣೆಪಟ್ಟಿಯನ್ನು ಕಟ್ಟಿ ಅವರನ್ನು ಸೆರೆಮನೆಗೆ ದಬ್ಬುವ ಪ್ರವೃತ್ತಿ ಕಳೆದ ಹತ್ತು ವರ್ಷಗಳಲ್ಲಿ ಕಂಡುಬಂದಿದೆ. ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗಳಿಂದ ಭಾರತವು ಪ್ರಬುದ್ಧ ರಾಷ್ಟ್ರವಾಗಿ ರೂಪುಗೊಳ್ಳಬಹುದೆಂಬ ಅಂಬೇಡ್ಕರ್ ಆಶಯ ಪ್ರಸ್ತುತ ಸಂದರ್ಭದಲ್ಲಿ ಕಾರ್ಯರೂಪಕ್ಕೆ ಬರಬೇಕಾಗಿದೆ.

ಇದನ್ನೂ ಓದಿ ಗುಜರಾತ್| ಕೇಂದ್ರ ಸಚಿವರ ವಿರುದ್ಧ ಕ್ಷತ್ರಿಯರ ಬೃಹತ್ ಪ್ರತಿಭಟನೆ; ಬಿಜೆಪಿಗೆ ಮುಗಿಯದ ಸಂಕಷ್ಟ!

ಧರ್ಮ ಮತ್ತು ಆಸ್ತಿಗಳು ಶಕ್ತಿ ರಾಜಕಾರಣದ ಮೂಲವಾಗಿದ್ದು ಅಂಬೇಡ್ಕರ್ ಪ್ರತಿಪಾದಿಸಿದ ಮುಕ್ತಿ ರಾಜಕಾರಣಕ್ಕೆ ಪ್ರಸ್ತುತ ಸಂದರ್ಭದಲ್ಲಿ ಬಹುದೊಡ್ಡ ಅಡ್ಡಗಲ್ಲುಗಳಾಗಿವೆ. “ನಮ್ಮ ಎಲ್ಲ ಗಮನವನ್ನು ನಮ್ಮ ದೇಶದ ರಾಜಕೀಯ ಸ್ವಾತಂತ್ರ್ಯದ ಮೇಲೆ ಮಾತ್ರ ಕೇಂದ್ರೀಕರಿಸುತ್ತಾ, ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯದಂಥ ಅದಕ್ಕಿಂತ ಗಂಭೀರವಾದ ಸಮಸ್ಯೆಗಳನ್ನು ಕಡೆಗಣಿಸುವುದು ಸಂಪೂರ್ಣವಾಗಿ ತಪ್ಪು. ರಾಜಕೀಯ ಸ್ವಾತಂತ್ರ್ಯವೇ ನಿಜವಾದ ಮತ್ತು ಎಲ್ಲ ಬಗೆಯ ಸ್ವಾತಂತ್ರ್ಯ ಎಂದು ತಿಳಿದುಕೊಳ್ಳುವುದು ಆತ್ಮಘಾತುಕವಾದದ್ದು” ಎಂಬ ಅಂಬೇಡ್ಕರ್ ವಿಚಾರಧಾರೆ ಪ್ರಭುತ್ವ ಮತ್ತು ಪ್ರಜೆಗಳ ನಡುವಿನ ಮೂಲಭೂತ ಸಂಬಂಧವನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸುತ್ತದೆ. ನಮ್ಮ ದೇಶದ ಸಂವಿಧಾನದಲ್ಲಿ ದಮನಿತ ಜನವರ್ಗಗಳ ಹಕ್ಕುಗಳ ರಕ್ಷಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಅನುಚ್ಛೇದಗಳು ಬಹುಪಾಲು ಸ್ವತಂತ್ರ ಭಾರತದಲ್ಲಿ ಮೂಲೆಗೆ ತಳ್ಳಲ್ಪಟ್ಟಿರುವ ಹಿನ್ನೆಲೆಯಲ್ಲಿ ಸಂವಿಧಾನ ರಕ್ಷಣೆ ಮಹತ್ವವನ್ನು ಪ್ರಜ್ಞಾವಂತರು ಮನಗಾಣಬೇಕು.

ಭಾರತದ ಕಾಯಕ ಜೀವಿಗಳು, ದಲಿತರು, ದಮನಿತರು, ಮಹಿಳೆಯರನ್ನೂ ಒಳಗೊಂಡಂತೆ ಎಲ್ಲ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದುರ್ಬಲ ಜನಸಮುದಾಯಗಳ ಪಾಲಿಗೆ ಸಂವಿಧಾನದ ಆಶಯಗಳು ವಿಕಸಿತ ಭಾರತ ಮತ್ತು ವಿಶ್ವಗುರುವಿನ ನಾಯಕತ್ವದಲ್ಲಿ ಇನ್ನೂ ಪೂರ್ಣವಾಗಿ ಕೈಗೂಡದ ಕನಸಿನ ಗಂಟಾಗಿದೆ. ಎಲ್ಲ ಮಿತಿಗಳ ನಡುವೆ ಕೂಡ ಸ್ವತಂತ್ರ ಭಾರತದ ಏಳು ದಶಕಗಳ ಸಾಧನೆ ಗಮನಾರ್ಹವಾದದ್ದು. ಇದು ಸಾಧ್ಯವಾಗಿರುವುದು ಸಂವಿಧಾನದ ಆಶಯಗಳು ಭಾಗಶಃವಾಗಿಯಾದರೂ ಜಾರಿಯಾಗಿರುವುದರಿಂದ ಎನ್ನುವ ಸತ್ಯ ನಮ್ಮೊಂದಿಗಿದೆ. 2014-2024ರ ಅವಧಿಯಲ್ಲಿ ಹಿಂದುತ್ವ ಸಂಸ್ಕೃತಿಯ ಪ್ರಚಾರದ ಮೂಲಕ ಸಂವಿಧಾನದ ಮೂಲ ಆಶಯಗಳ ಮೇಲೆ ಧಾಳಿ ಮಾಡುತ್ತಾ, ನಮ್ಮ ಯುವಪೀಳಿಗೆಯನ್ನು ದಿಕ್ಕುಗೆಡಿಸುವ ಪ್ರಯತ್ನ ಜರುಗಿದೆ. ಇಂದು ಪ್ರಜಾಪ್ರಭುತ್ವ, ಸಂವಿಧಾನ, ನಾಗರಿಕ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ವಿತರಣೆಗಳಿಗೆ ತದ್ವಿರುದ್ಧವಾಗಿರುವ ಸ್ಥಾಪಿತ ಹಿತಾಸಕ್ತಿಗಳಿಂದ ಭಾರತವನ್ನು ಉಳಿಸುವ ನಿಟ್ಟಿನಲ್ಲಿ ಅಂಬೇಡ್ಕರ್‌ ವಾದ ಅತ್ಯಂತ ಪ್ರಸ್ತುತವಾಗಿದೆ.

ಭಾರತೀಯರು ಸಂವಿಧಾನದ ಮೂಲತತ್ವಗಳನ್ನು ಅರ್ಥಮಾಡಿಕೊಳ್ಳಬೇಕು, ಮೈಗೂಡಿಸಿಕೊಳ್ಳಬೇಕು ಮತ್ತು ಸರ್ಕಾರ ಅಳವಡಿಸಿಕೊಳ್ಳುವಂತೆ ಪ್ರಬಲ ಹೋರಾಟ ನಡೆಸಬೇಕು. ಪ್ರಸ್ತುತ ಸಂದರ್ಭದಲ್ಲಿ ಸಂವಿಧಾನ ಎದುರಿಸುತ್ತಿರುವ ಸವಾಲುಗಳನ್ನು ಪ್ರಜಾಸತ್ತಾತ್ಮಕವಾಗಿ ಹಿಮ್ಮೆಟ್ಟಿಸಬೇಕು. ಭಾರತದ ಶೋಷಿತ ಸಮುದಾಯಗಳು ಎಲ್ಲ ಅಸ್ಮಿತೆಗಳನ್ನು ಬದಿಗಿಟ್ಟು ಒಗ್ಗೂಡಿ ಹೋರಾಡಿದರೆ ಎಂತಹ ಪ್ರಭುತ್ವದ ವಿರುದ್ಧವಾದರೂ ಗೆಲುವು ಸಾಧಿಸಿ ಸಂಸದೀಯ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕು. ಭಾರತೀಯ ರಾಷ್ಟ್ರೀಯತೆಯೆಂಬುದು ಬಹುತ್ವವನ್ನು ಪ್ರಧಾನವಾಗಿ ಅವಲಂಬಿಸಿದೆ.

ಬಹುಸಾಂಸ್ಕೃತಿಕತೆಯನ್ನು ರಕ್ಷಿಸಲು ಏಕತ್ವವನ್ನು ಬದಿಗಿತ್ತು ಬಹುತ್ವವನ್ನು ಸಾಂಸ್ಥೀಕರಣಗೊಳಿಸುವ ನಿಟ್ಟಿನಲ್ಲಿ ಪ್ರಜಾಸತ್ತಾತ್ಮಕ ಚಳವಳಿ ಅತ್ಯವಶ್ಯಕ. ಭಾರತವು ಹಿಂದುತ್ವ ಕೇಂದ್ರಿತ ರಾಷ್ಟ್ರವಾಗಿರದೇ ಧರ್ಮನಿರಪೇಕ್ಷತೆ ಕೇಂದ್ರಿತ ಒಕ್ಕೂಟ ವ್ಯವಸ್ಥೆಯನ್ನು ಹೊಂದಿದೆ. ಧರ್ಮನಿರಪೇಕ್ಷತೆ ರಕ್ಷಣೆಯಿಂದಲೇ ಭಾರತದಲ್ಲಿ ಭ್ರಾತೃತ್ವ ಮತ್ತು ಪ್ರಜೆಗಳ ಸಾರ್ವಭೌಮತ್ವವನ್ನು ರಕ್ಷಿಸಲು ಸಾಧ್ಯವಾಗುತ್ತದೆಂಬ ಅಂಬೇಡ್ಕರ್ ಆಶಯವನ್ನು ಸಮಸ್ತ ಭಾರತೀಯರು ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಜಾಸತ್ತಾತ್ಮಕ ಹೋರಾಟ ಅತ್ಯವಶ್ಯಕ.

ಡಾ. ಮಹೇಶ್‌ ಚಂದ್ರ ಗುರು
+ posts

ನಿವೃತ್ತ ಪ್ರಾಧ್ಯಾಪಕ, ಮೈಸೂರು ವಿಶ್ವವಿದ್ಯಾಲಯ

ಪೋಸ್ಟ್ ಹಂಚಿಕೊಳ್ಳಿ:

ಡಾ. ಮಹೇಶ್‌ ಚಂದ್ರ ಗುರು
ಡಾ. ಮಹೇಶ್‌ ಚಂದ್ರ ಗುರು
ನಿವೃತ್ತ ಪ್ರಾಧ್ಯಾಪಕ, ಮೈಸೂರು ವಿಶ್ವವಿದ್ಯಾಲಯ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅವಲೋಕನ | ‘ಹಿಂದು ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು’; ದೇಶದ ಆರ್ಥಿಕತೆಯ ನಿಜ ದರ್ಶನ ಮಾಡಿಸುವ ಕೃತಿ

ಇತ್ತೀಚೆಗೆ ಬಿಡುಗಡೆಯಾದ ಗ್ರಾಮೀಣಾಭಿವೃದ್ಧಿ ತಜ್ಞೆ ಲತಾಮಾಲ ಅವರ ‘ಹಿಂದು ರಾಷ್ಟ್ರದೆಡೆಗೆ ಹಿಂಸೆಯ...

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಹೈದರಾಬಾದ್ ಮೆಟ್ರೋ ನಷ್ಟದಲ್ಲಿದೆ ಎಂಬ ಎಲ್&ಟಿ ವಾದ ನಿಜವೇ?

ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ 2017ರಲ್ಲಿ ಆರಂಭವಾದ ಮೆಟ್ರೋ ಸೇವೆ ಪ್ರಸ್ತುತ ದೇಶದ...

ರಾಜ್ಯದಲ್ಲಿ ಬಿಜೆಪಿಗೆ ಮೂರನೇ ಬಾರಿ ‘ಆಪರೇಷನ್‌ ಕಮಲ’ ಸಾಧ್ಯವೇ?, ಅಂಕಿ-ಅಂಶ ಏನು ಹೇಳುತ್ತೆ?

ರಾಜ್ಯದ ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಆಪರೇಷನ್ ಕಮಲದ ಸಾಧ್ಯತೆ ಎಷ್ಟರಮಟ್ಟಿಗಿದೆ ಎಂಬುದನ್ನು...

ಸಾಮಾನ್ಯರ ಭಾರತವು ಒಳ್ಳೆಯ ದಿನಗಳನ್ನು ಕಂಡಿದೆಯೇ?

ಪಾಲ್ಕಿಯವರು ಯಾವ ಭಾರತದಲ್ಲಿ ಜೀವಿಸುತ್ತಿದ್ದಾರೆ ಎಂದು ಅವರು ಮಂಡಿಸಿದ ವಿಷಯಗಳಿಂದ ತಿಳಿಯುತ್ತದೆ....