ಮಾನಸಿಕ ಅಸ್ವಸ್ಥನೊಬ್ಬ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ತುಮಕೂರು ಜಿಲ್ಲೆ ಪಾವಗಡದಲ್ಲಿ ನಡೆದಿದೆ.
ಪಾವಗಡದಲ್ಲಿ ಅಲೆದಾಡುತ್ತಿದ್ದ ಅನಿಲ್ ಎಂಬ ಮಾನಸಿಕ ಅಸ್ವಸ್ಥ ಶಿವಶಂಕರಪ್ಪ(55) ಎಂಬುವವರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ.
ಅನಿಲ್ 6 ವರ್ಷದ ಹಿಂದೆ ತಂದೆಯ ಮೇಲೆ ಇದೇ ರೀತಿ ಹಲ್ಲೆ ನಡೆಸಿ ತಲೆ ಮೇಲೆ ಕಲ್ಲು ಹಾಕಿ ಹತ್ಯೆ ಮಾಡಿ ಜೈಲು ಸೇರಿದ್ದನು. ಇತ್ತೀಚೆಗಷ್ಟೇ ಜೈಲಿನಿಂದ ಬಂದಿದ್ದು, ಇದೀಗ ಎರಡನೇ ಹತ್ಯೆ ಮಾಡಿದ್ದಾನೆ. ಈ ಹಿನ್ನಲೆಯಲ್ಲಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೋಮವಾರ ರಾತ್ರಿ 10 ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು, ಪಟ್ಟಣದ ಶನೇಶ್ವರ ದೇವಸ್ಥಾನದ ಬಳಿ ಸ್ವಾಗತ್ ಹೋಟೆಲ್ ಮುಂದೆ ಕುಳಿತಿದ್ದ ಶಿವಶಂಕರಪ್ಪ ಅವರಿಗೆ ದೊಣ್ಣೆಯಿಂದ ತಲೆಗೆ ಹೊಡೆದಿದ್ದಾನೆ. ಅನಿರೀಕ್ಷಿತ ಹಲ್ಲೆಯಿಂದ ಕುಸಿದು ಬಿದ್ದ ಶಿವಶಂಕರಪ್ಪ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಆನ್‌ಲೈನ್‌ನಲ್ಲಿ ಕ್ರಿಕೆಟ್ ಬೆಟ್ಟಿಂಗ್; ಹಲವರ ಬಂಧನ
“ಶಿವಶಂಕರಪ್ಪ ಅವರು ರಕ್ತದ ಮಡುವಿನಲ್ಲಿ ಬಿದ್ದಾಗ ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಬರಲಿಲ್ಲ. ಹಾಗಾಗಿ ಅವರ ಸಾವು ಸಂಭವಿಸಿದೆ” ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
“ಮೃತ ಶಿವಶಂಕರಪ್ಪ ನ್ಯಾಯಬೆಲೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮಕ್ಕಳಿಲ್ಲ, ಪತ್ನಿ ಕಮಲಮ್ಮ ವಿಕಲಚೇತನರಾಗಿದ್ದು, ಇದೀಗ ಅನಾಥವಾಗಿದ್ದಾರೆ. ಮೃತನ ಪತ್ನಿಗೆ ಸರ್ಕಾರ ಪರಿಹಾರ ನೀಡಬೇಕು” ಎಂದು ಪುರಸಭೆ ಮಾಜಿ ಸದಸ್ಯ ಮನು ಮಹೇಶ್ ಒತ್ತಾಯಿಸಿದ್ದಾರೆ.