ಕಲುಷಿತ ನೀರು ಸೇವಿಸಿ 10 ಮಂದಿ ಅಸ್ವಸ್ಥಗೊಂಡಿರುವ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೈ ಎನ್ ಹೊಸಕೋಟೆಯ ತಾತಯ್ಯನ ಗುಡಿಯ ಬಳಿ ನಡೆದಿದೆ.
ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣಗೊಂಡ ಪರಿಣಾಮ ಈ ಅವಘಡ ಸಂಭವಿಸಿದೆ. ಗೇಟ್ ವಾಲ್‌ಗಳ ಮೂಲಕ ಕುಡಿಯುವ ನೀರಿಗೆ ಕಲುಷಿತ ನೀರು ಸೇರಿದೆ. ನಲ್ಲಿ ನೀರು ಕುಡಿದ 10ಕ್ಕೂ ಹೆಚ್ಚು ಜನರಲ್ಲಿ ವಾಂತಿ, ಭೇದಿ ಜತೆಗೆ ಜ್ವರ ಕಾಣಿಸಿಕೊಂಡಿದೆ. ಓರ್ವ ಬಾಲಕಿ ತೀವ್ರ ಅಸ್ವಸ್ಥಗೊಂಡಿರುವ ಕಾರಣ ಆಕೆಯನ್ನು ಕೂಡಲೇ ಪಾವಗಡ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

“ಬಡವರ್ಗದವರು, ಕೂಲಿ ಕಾರ್ಮಿಕರು ಈ ಭಾಗದಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದು, ಜಿಲ್ಲಾಡಳಿತ, ಸ್ಥಳೀಯ ಆಡಳಿತ ಸೇರಿದಂತೆ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ” ಎಂದು ಸ್ಥಳೀಯರು ಆರೋಪಿಸಿದ್ದಾರೆ.
ತಹಶೀಲ್ದಾರ್ ಸುಜಾತಾ, ಇಒ ಶಿವರಾಜಯ್ಯ ಹಾಗೂ ವೈದ್ಯಾಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಗ್ರಾಮದಲ್ಲಿ ಬೀಡುಬಿಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ಆಂಬುಲೆನ್ಸ್‌ಗಳನ್ನು ರವಾನೆ ಮಾಡಲಾಗಿದ್ದು, ಅಗತ್ಯ ಔಷಧಗಳನ್ನು ದಾಸ್ತಾನು ಮಾಡಲಾಗುತ್ತಿದೆ.