‘ಸೂತಕ ನಮ್ಮ ಮನೆ ದೇವರಿಗೆ ಆಗಲ್ಲ’ವೆಂದು ಹುಟ್ಟಿದ ಹಸುಗೂಸು ಮತ್ತು ಬಾಣಂತಿಯನ್ನು ಊರಾಚೆಯ ಗುಡಿಸಲಿಲ್ಲಿಯೇ ಇರಿಸಿ, ಹಸುಗೂಸು ಸಾವನ್ನಪ್ಪಿದ್ದ ಘಟನೆ ಭಾನುವಾರ ನಡೆದಿತ್ತು. ಚಳಿ-ಗಾಳಿ ತಾಳಲಾರದೆ ಮಗು ಸತ್ತ ಮೇಲೂ ಬಾಣಂತಿ ತಾಯಿಯನ್ನು ಊರಾಚೆಯ ಗುಡಿಸಲಿನಲ್ಲಿಯೇ ಇರಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದು, ಸ್ಥಳಕ್ಕೆ ದೌಡಾಯಿಸಿದ ತುಮಕೂರು ಸಿವಿಲ್ ನ್ಯಾಯಾಧೀಶೆ ಬಾಣಂತಿಯನ್ನು ಮನೆಗೆ ಕಳುಹಿಸಿದ್ದಾರೆ.
ತುಮಕೂರು ಜಿಲ್ಲೆಯ ಮಲ್ಲೇನಹಳ್ಳಿ ಗ್ರಾಮದ ಗೊಲ್ಲ ಸಮುದಾಯದ ಮಹಿಳೆಯೊಬ್ಬರು ಇಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಒಂದು ಮಗು ಹುಟ್ಟುವಾಗಲೇ ಸಾವನ್ನಪ್ಪಿತ್ತು. ಇನ್ನೊಂದು ಬದುಕುಳಿದಿತ್ತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಕರೆತಂದ ಮಹಿಳೆಯ ಕುಟುಂಬಸ್ಥರು, ಸೂತಕದ ಮೌಢ್ಯದಿಂದಾಗಿ ಆಕೆ ಮತ್ತು ಹಸುಗೂಸನ್ನು ಮಳೆ-ಗಾಳಿಯ ನಡುವೆಯೇ ಊರಾಚೆಯ ಗುಡಿಸಲಿನಲ್ಲಿ ಒಂಟಿಯಾಗಿ ಬಿಟ್ಟಿದ್ದರು.
ಮಳೆ, ಚಳಿ, ಗಾಳಿಯನ್ನು ತಾಳಲಾರದ ಹಸುಗೂಸು ಭಾನುವಾರ ಸಾವನ್ನಪ್ಪಿತ್ತು. ಅದಾದ ಮೇಲೂ, ಬಾಣಂತಿ ಮಹಿಳೆಯನ್ನು ಮನೆಗೆ ಕರೆದೊಯ್ಯದ ಕುಟುಂಬಸ್ಥರು ಆಕೆಯನ್ನು ಏಕಾಂಗಿಯಾಗಿ ಅದೇ ಗುಡಿಸಲಿನಿಲ್ಲಿ ಬಿಟ್ಟಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸ ಅವರು ಸ್ಥಳಕ್ಕೆ ದಿಢೀರ್ ಭೇಟಿ ನೀಡಿ, ಮಹಿಳೆಯ ಕುಟುಂಬಸ್ಥರು ಮತ್ತು ಗ್ರಾಮಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮಸ್ಥರಿಗೆ ಕಾನೂನುಗಳ ತಿಳುವಳಿಕೆ ನೀಡಿ, ಗುಡಿಸಲನ್ನು ಕೆಡವಿಸಿದ್ದು, ಬಾಣಂತಿಯನ್ನು ಮನೆಗೆ ಕಳುಹಿಸಿದ್ದಾರೆ.
ಈ ಸಂಧರ್ಭದಲ್ಲಿ ತಹಸೀಲ್ದಾರ್ ಸಿದ್ದೇಶ್, ಮಾನವ ಹಕ್ಕುಗಳ ಸೇವಾ ಕೇಂದ್ರದ ಅಧ್ಯಕ್ಷ ಸಿದ್ದಲಿಂಗೇಗೌಡ, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಇನ್ನಿತರರು ಉಪಸ್ಥಿತರಿದ್ದರು.