ಕಳೆದ ಒಂಭತ್ತು ತಿಂಗಳ ಹಿಂದೆ ವಿವಾಹವಾಗಿದ್ದ ಯುವತಿಯೋರ್ವಳು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಕೊಲೆಗೈದಿರುವುದಾಗಿ ಯುವತಿಯ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಗುಬ್ಬಿ ತಾಲೂಕಿನ ಬೊಮ್ಮೇನಹಳ್ಳಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿ, ಆ ಬಳಿಕ ಕೆರೆಯಲ್ಲಿ ಬಿಸಾಡಿರುವ ಶಂಕೆ ವ್ಯಕ್ತಪಡಿಸಿ ಮೃತ ಯುವತಿಯ ಕುಟುಂಬಸ್ಥರು ನೀಡಿದ ದೂರಿನ ಹಿನ್ನೆಲೆಯಲ್ಲಿ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಸಬ ಹೋಬಳಿ ದೊಡ್ಡ ಕಟ್ಟಿಗೇನಹಳ್ಳಿ ಗ್ರಾಮದ ಕಲಾವತಿ ಪಂಚಾಕ್ಷರಯ್ಯ ದಂಪತಿಯ ಪುತ್ರಿ ವಿನುತ(23) ಮೃತಪಟ್ಟ ನವ ವಧು.
“ಕಳೆದ ಒಂಬತ್ತು ತಿಂಗಳ ಹಿಂದೆ ಅಂದರೆ 2023ರ ಜನವರಿಯಲ್ಲಿ ನಿಟ್ಟೂರು ಹೋಬಳಿ ಬೊಮ್ಮೇನಹಳ್ಳಿ ರವೀಶ್ ಎಂಬಾತನ ಜೊತೆ ವಿವಾಹ ಮಾಡಲಾಗಿತ್ತು. ಮನೆ ಕಟ್ಟಬೇಕೆಂದು ಎರಡು ಲಕ್ಷ ಹಣ ತರುವಂತೆ ರವೀಶ್ ಹಾಗೂ ಕುಟುಂಬದವರು ಕಿರುಕುಳ ನೀಡಿ ಕೊಲೆ ಮಾಡಿ ಕೆರೆಯಲ್ಲಿ ಬಿಸಾಡಿದ್ದಾರೆ” ಎಂದು ಆರೋಪಿಸಿ ಮೃತರ ತಾಯಿ ಕಲಾವತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
“90 ಗ್ರಾಂ ಚಿನ್ನದ ಒಡವೆಗಳು ನೀಡಿ ಮದುವೆ ಮಾಡಿಕೊಡಲಾಗಿತ್ತು. ಆರಂಭದಲ್ಲಿ ಗಂಡ ಹೆಂಡತಿ ಅನ್ಯೋನ್ಯವಾಗಿದ್ದರು. ಕೆಲ ದಿನದಲ್ಲೇ ನಿತ್ಯ ಹಣಕ್ಕಾಗಿ ಪೀಡಿಸಿ ಕಿರುಕುಳ ನೀಡುತ್ತಿದ್ದರು. ಕುಡುಗೋಲು ಬಳಸಿ ಮುಖದ ಮೇಲೆ ಗಾಯ ಮಾಡಿದ್ದು, ಜಗಳ ಮಾಡುತ್ತಿದ್ದ ಬಗ್ಗೆ ಮಗಳು ಫೋನ್ ಮಾಡಿ ತಿಳಿಸಿದ್ದಳು” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ದಲಿತ ಯುವಕನನ್ನು ಮರಕ್ಕೆ ಕಟ್ಟಿ ಹಲ್ಲೆ; ಓರ್ವ ಆರೋಪಿ ಬಂಧನ
ಎರಡು ಲಕ್ಷ ಹಣಕ್ಕೆ ಪೀಡಿಸಿ ಆರೋಪಿ ರವೀಶ್ ಸೇರಿದಂತೆ ಒಟ್ಟು ಆರು ಮಂದಿ ಕುಟುಂಬಸ್ಥರು ಒಗ್ಗೂಡಿ ಕೊಲೆ ಮಾಡಿ ಕೆರೆಗೆ ಬಿಸಾಡಿದ್ದು, ಸೊಪ್ಪು ತರಲು ಹೋದವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ವದಂತಿ ಹಬ್ಬಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಕೊಲೆ ಪ್ರಕರಣ ದಾಖಲಿಸಿರುವ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.