ಗೊಲ್ಲರ ಹಟ್ಟಿಗಳಲ್ಲಿ ಬಾಣಂತಿ ಹಾಗೂ ಹಸುಗೂಸನ್ನು ಊರ ಹೊರಗಿನ ಗುಡಿಸಿಲಿನಲ್ಲಿರಿಸಿ, ಶಿಶು ಸಾವನ್ನಪ್ಪಿದ್ದ ಘಟನೆಯ ಬಳಿಕವೂ, ಮೌಢ್ಯಾಚರಣೆ ಮುಂದುವರೆದಿದೆ. ಇಂದಿಗೂ ತಮಕೂರು ಜಿಲ್ಲೆಯಲ್ಲಿ ಗೊಲ್ಲ ಸಮುದಾಯವು ಬಾಣಂತಿ ಮತ್ತು ಶಿಶುಗಳನ್ನು ಊರ ಹೊರಗಿನ ಗುಡಿಸಲಿನಲ್ಲಿ ಇರಿಸಲಾಗುತ್ತಿದೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ತುಮಕೂರು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶೆ, ಗೊಲ್ಲರಹಟ್ಟಿಗಳಿಗೆ ಪದೇ-ಪದೇ ಭೇಟಿ ನೀಡಿ, ಅಲ್ಲಿನ ಜನರನ್ನು ಅರಿವು ಮೂಡಿಸುತ್ತಿದ್ದಾರೆ. ಬಾಣಂತಿಯನ್ನು ಮನೆಗೆ ಸೇರಿಸುತ್ತಿದ್ದಾರೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಗೌರಿಪುರ, ಬಿದರೆ, ನಲ್ಲೂರು ಭಾಗದ ಗೊಲ್ಲರಹಟ್ಟಿಗಳಿಗೆ ನ್ಯಾಯಾಧೀಶರ ನೇತೃತ್ವದ ತಂಡ ಭೇಟಿ ನೀಡಿದ್ದು, ಗೌರಿಪುರದಲ್ಲಿ ಊರ ಹೊರಗಿನ ಗುಡಿಸಲಿನಲ್ಲಿದ್ದ ಒಂದು ತಿಂಗಳ ಹಾಗೂ ಒಂದೂವರೆ ತಿಂಗಳ ಹಸುಗೂಸು ಹಾಗೂ ಬಾಣಂತಿಯರನ್ನು ಮನೆಗೆ ಕಳುಹಿಸಿದ್ದಾರೆ. ನಲ್ಲೂರು ಹಟ್ಟಿಯಲ್ಲಿ ಒಂದು ತಿಂಗಳ ಹಾಗೂ ಒಂದೂವರೆ ತಿಂಗಳ ಇಬ್ಬರು ಬಾಣಂತಿಯರ ಪೋಷಕರ ಮನವೊಲಿಸಿ ಆರೋಗ್ಯ ತಪಾಸಣೆ ನಡೆಸಿ ಮನೆಗೆ ಕಳುಹಿಸಿದ್ದಾರೆ.
“ಆಧುನಿಕ ಕಾಲದಲ್ಲಿಯೂ ಜನರು ಮೂಢನಂಬಿಕೆಯನ್ನು ಪಾಲಿಸುತ್ತಿರುವುದು ದುರದೃಷ್ಟಕರ. ಬಾಣಂತಿ, ಮಕ್ಕಳಿಗೆ ಉತ್ತಮ ಆರೈಕೆಯ ಅಗತ್ಯವಿದೆ. ಯಾವುದೇ ಕಾರಣಕ್ಕೂ ಅವರನ್ನು ಊರ ಹೊರಗೆ ಬಿಡಬಾರದು. ಅಂತಹ ಯಾವುದೇ ಪ್ರಕರಣ ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಾಲೂಕಿನ ಯಾವುದೇ ಭಾಗದಲ್ಲಿ ಇಂತಹ ಪ್ರಕರಣ ಕಂಡುಬಂದಲ್ಲಿ ಕಾನೂನು ಸೇವಾ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು” ಎಂದು ನ್ಯಾಯಾಧೀಶೆ ಉಂಡಿ ಮಂಜುಳ ಶಿವಪ್ಪ ಸೂಚಿಸಿದರು.
“ಗೊಲ್ಲರಹಟ್ಟಿಯ ವಿದ್ಯಾವಂತರೂ ಮೂಢನಂಬಿಕೆಗೆ ಬಲಿಯಾಗಿರುವುದು ವಿಪರ್ಯಾಸ. ಇಂತಹ ಪದ್ಧತಿಗಳನ್ನು ತ್ಯಜಿಸಿ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು. ಸಂಪ್ರದಾಯವನ್ನು ಆಚರಿಸಿ, ಆದರೆ ಮೂಢನಂಬಿಕೆಗೆ ಒಳಗಾಗಿ ಹಸುಗೂಸುಗಳನ್ನು ಬಲಿ ಕೊಡಬೇಡಿ” ಎಂದು ತಹಶೀಲ್ದಾರ್ ಬಿ ಆರತಿ ಜಾಗೃತಿ ಮೂಡಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ನ್ಯಾ. ಉಂಡಿ ಮಂಜುಳಾ ಶಿವಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ; ಬಾಣಂತಿ ಬಿಡುವ ಗುಡಿಸಲು ನಾಶ
“ಹೆರಿಗೆಯ ನಂತರ ಮಗು, ಬಾಣಂತಿಗೆ ಹೆಚ್ಚಿನ ಆರೈಕೆಯ ಅಗತ್ಯವಿದೆ. ಚಳಿ, ಮಳೆಗೆ ಲೆಕ್ಕಿಸದೆ ಗುಡಿಸಲಿನಲ್ಲಿ ಬಿಡುವುದು ತರವಲ್ಲ. ಇದು ಅಮಾನವೀಯ ಕೃತ್ಯ. ಸ್ಥಳೀಯರು ಜಾಗೃತಿಗೊಂಡು ಮಗು ಮತ್ತು ಬಾಣಂತಿಗೆ ಉತ್ತಮ ಆರೈಕೆ ಮಾಡುವುದರ ಜತೆಗೆ ಆಗಾಗ ಆರೋಗ್ಯ ತಪಾಸಣೆ ಮಾಡಿಸುತ್ತಿರಬೇಕು” ಎಂದು ತಾಲೂಕು ಆರೋಗ್ಯಾಧಿಕಾರಿ ಡಾ ಬಿಂದು ಮಾಧವ್ ಸಲಹೆ ನೀಡಿದರು.
ಈ ವೇಳೆ ತಾಲೂಕು ಪಂಚಾಯಿತಿ ಇಒ ಪರಮೇಶ್ ಕುಮಾರ್, ದೇವಿಕಾರಾಣಿ, ನಾಗರಾಜು, ಪವಿತ್ರ ಇದ್ದರು.