ತುಮಕೂರು ತಾಲೂಕಿನ ಕೋರಾ ಹೋಬಳಿಯ ಬೆಳಧರ ಗ್ರಾಮದ ಸರ್ಕಾರಿ ಶಾಲೆಯ ಆಟದ ಮೈದಾನದ ಉಳಿವಿಗಾಗಿ ಆಗ್ರಹಿಸಿ ತುಮಕೂರಿನ ಡಾ. ಶಿವಕುಮಾರ ಸ್ವಾಮೀಜಿ ವೃತ್ತದಿಂದ ಜಿಲ್ಲಾ ಪಂಚಾಯತಿ ಕಚೇರಿಯವರೆಗೆ ಕಾಳಜಿ ಫೌಂಡೇಶನ್, ವಿವಿಧ ಸಂಘಟನೆ ಮುಖಂಡರು ಮೌನ ಮೆರವಣಿಗೆ ನಡೆಸಿದ್ದಾರೆ. ಜಿಲ್ಲಾ ಪಂಚಾಯತಿ ಸಿಇಒಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಬೆಳಧರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದ ಬಳಿ ಇರುವ ಎರಡು ಎಕರೆ ಭೂಮಿ ಗ್ರಾಮಠಾಣಾಗೆ ಸೇರಿದ್ದು, ರಾಜ್ಯ ಸರ್ಕಾರ ಶಾಲಾ ಮಕ್ಕಳ ಆಟದ ಮೈದಾನದ ಉದ್ದೇಶಕ್ಕಾಗಿ 3ಎಕರೆ 3ಗುಂಟೆ ಜಮೀನು ಮಂಜೂರು ಮಾಡಿದೆ. ಸುಮಾರು ನಾಲ್ಕೈದು ಬಾರಿ ಕಂದಾಯ ಇಲಾಖೆಯಿಂದ ಸರ್ವೇ ಮಾಡಿ ಹದ್ದುಬಸ್ತು ಮಾಡಲಾಗಿದೆ ಹಾಗೂ ಇ-ಖಾತೆಯನ್ನು ಮಾಡಿಕೊಡಲಾಗಿದೆ. ಶಾಲೆಯ ಪಕ್ಕದಲ್ಲೇ ಇರುವ ಕಲ್ಯಾಣ ಮಂಟಪದ ಮಾಲೀಕರು ಶಾಲೆಯ ಆಟದ ಮೖದಾನವನ್ನು ಅತಿಕ್ರಮ ಮಾಡಿ ತಮ್ಮ ಸ್ವಂತಕ್ಕೆ ಬಳಸಿಕೊಳ್ಳುತಿದ್ದಾರೆ. ಆದರೆ, ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಿಲ್ಲ. ಸರ್ಕಾರಿ ಶಾಲೆ ಮಕ್ಕಳ ಕ್ರೀಡೆಗೆ ಅನುಕೂಲವಾಗುವಂತೆ ಆಟದ ಮೖದಾನವನ್ನು ಉಳಾಸಿಕೊಡಬೇಕು. ಅತಿಕ್ರಮಣ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೖಗೊಳ್ಳಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಶಾಲಾ ಅಭಿವೃದ್ಧಿಗಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಆಟದ ಮೈದಾನದ ಸುತ್ತಲೂ ತಂತಿ ಬೇಲಿ ನಿರ್ಮಾಣ ಕಾಮಗಾರಿಗೆ ಸುಮಾರು ಐದು ಲಕ್ಷ ರೂ. ಹಣ ಮಂಜೂರು ಮಾಡಿದ್ದರೂ ಸಹ, ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ, ತಹಸೀಲ್ದಾರ್, ಮೈದಾನವನ್ನ ಹದ್ದುಬಸ್ತು ಮಾಡಿಕೊಂಡು ಮಕ್ಕಳ ಆಟದ ಮೈದಾನ ಉಳಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಾಳಜಿ ತಂಡದ ನೇತೃತ್ವದಲ್ಲಿ ನಡೆದ ಬೆಳೆಧರ ಶಾಲೆ ಮೈದಾನ ಉಳಿವಿಗಾಗಿ ಮೌನ ಮೆರವಣಿಗೆ ಜಾಥಾದಲ್ಲಿ ನೈಜ ಹೋರಾಟಗಾರರ ವೇದಿಕೆ ಬೆಂಗಳೂರು, ಲಂಚಮುಕ್ತ ಕರ್ನಾಟಕ ಬೆಂಗಳೂರು, ಭೀಮ್ ಆರ್ಮಿ, ಕರುನಾಡು ವಿಜಯ ಸೇನೆ, ರಣಧೀರ ವೇದಿಕೆ, ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರ ಸಂಘಟನೆಗಳು ಭಗಿಯಾಗಿದ್ದವು.
ಮೌನ ಮೆರವಣಿಗೆ ಹೋರಾಟದಲ್ಲಿ ನೈಜ ಹೋರಾಟಗಾರರ ವೇದಿಕೆ ಬೆಂಗಳೂರು ಇದರ ಎಚ್.ಎಂ. ವೆಂಕಟೇಶ್, ಲಂಚಮುಕ್ತ ಕರ್ನಾಟಕ ಬೆಂಗಳೂರು ಇದರ ಕುಣಿಗಲ್ ನರಸಿಂಹ ಮೂರ್ತಿ, ಭೀಮ್ ಆರ್ಮಿ ಮುಖಂಡರಾದ ಶ್ರೀನಿವಾಸ್, ಕರುನಾಡು ವಿಜಯ ಸೇನೆ ಅರುಣ್ ಕೃಷ್ಣಯ್ಯ, ಮಧುಗಿರಿ ತಿಮ್ಮರಾಜು, ರಣಧೀರ ವೇದಿಕೆ ಶಂಕರೆ ಗೌಡ್ರು, ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರ, ಡಮರುಗ ಉಮೇಶ್, ಮಾಧ್ಯಮ ಮಿತ್ರರು ಹಾಗೂ ಬೆಳೆಧರ ಗ್ರಾಮಸ್ಥರು ಇದ್ದರು.
