ತುಮಕೂರು | ಕಲುಷಿತ ನೀರಿಗೆ ಆರು ಮಂದಿ ಬಲಿ; 50 ಮಂದಿ ಅಸ್ವಸ್ಥ

Date:

Advertisements

ಕರ್ನಾಟಕದ ಗಡಿಭಾಗದಲ್ಲಿರೊ ಪುಟ್ಟ ಗ್ರಾಮ ತುಮಕೂರು ಜಿಲ್ಲೆಯ ಚಿನ್ನೇನಹಳ್ಳಿ. ಗ್ರಾಮದಲ್ಲಿ ಸುಮಾರು 280 ಮನೆಗಳಿವೆ. ಚಿನ್ನೇನಹಳ್ಳಿಯಲ್ಲಿ ಇತ್ತೀಚೆಗೆ ತುಂಬಾ ಅದ್ಧೂರಿಯಾಗಿ ಲಕ್ಷ್ಮಿದೇವಿ ಮತ್ತು ಕೆಂಪಮ್ಮ ಜಾತ್ರೆ ನಡೆದಿದೆ. ವರ್ಷಕ್ಕೊಮ್ಮೆ ನಡೆಯೋ ಜಾತ್ರೆ ಇಡೀ ಊರಲ್ಲಿ ಸಂಭ್ರಮ ಮನೆ ಮಾಡಿತ್ತು. ಇನ್ನೇನು ಈ ವರ್ಷ ಮಳೆ ಬೆಳೆ ಚೆನ್ನಾಗಿ ಆಗುತ್ತದೆ, ನಾವು ನೆಮ್ಮಯಿಂದ ಬದುಕಬಹುದು ಎಂದುಕೊಂಡಿದ್ದ ಗ್ರಾಮದಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಸಂತೋಷದ ಬದಲಿಗೆ ಆಕ್ರಂದನ ಮುಗಿಲು ಮುಟ್ಟಿದೆ. ಕುಲುಷಿತ ನೀರು ಕುಡಿದು ಆರು ಮಂದಿ ಸಾವನ್ನಪ್ಪಿದ್ದಾರೆ.

ಜೂನ್‌ 10ರಂದು ಗ್ರಾಮದಲ್ಲಿ ಜಾತ್ರೆ ನಡೆದಿದ್ದು, ಅದೇ ದಿನ ಕಲುಷಿತ ನೀರು ಸೇವಿಸಿ ಆರು ಮಂದಿ ಸಾವನ್ನಪ್ಪಿದ್ದರೆ, 50ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಹಲವರಿಗೆ ವಾಂತಿ-ಭೇದಿ ಕಾಣಿಸಿಕೊಂಡಿದ್ದು, ತುಮಕೂರು ಜಿಲ್ಲಾಸ್ಪತ್ರೆ ಮತ್ತು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ, ಚಿಕಿತ್ಸೆ ಫಲಿಸದೆ, ಹನುಮಕ್ಕ(85), ನಾಗಪ್ಪ (85), ನಿಂಗಮ್ಮ(90), ಮೀನಾಕ್ಷಿ (3), ಚಿಕ್ಕದಾಸಪ್ಪ (76) ಮತ್ತು ಪೆದ್ದಣ್ಣ (74) ಸೇರಿದಂತೆ ಒಟ್ಟು ಆರು ಮಂದಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಕುಡಿಯುವ ನೀರಿನ ಪೈಪ್ ಲೈನ್‌ಗಳು ಚರಂಡಿಯ ಮೂಲಕ ಹಾದುಹೋಗಿವೆ. ಪೈಪ್‌ಗಳು ಹೊಡೆದಾಗ ಚರಂಡಿಯ ಕಲುಷಿತ ನೀರು ಕುಡಿಯುವ ನೀರಿಗೆ ಮಿಶ್ರಣವಾಗುತ್ತಿದೆ. ಶುದ್ಧ ನೀರಿನ ಘಟಕದಿಂದಲೂ ಕಲುಷಿತ ನೀರೇ ಸರಬರಾಜಾಗುತ್ತಿದೆ ಎಂಬುದು ಗ್ರಾಮಸ್ಥರ ಆರೋಪ.

Advertisements

ಚರಂಡಿಗಳು ಸ್ವಚ್ಛತೆಯನ್ನು ನೋಡಿ ವರ್ಷಗಳೇ ಕಳೆದಿವೆ. ಗ್ರಾಮದಲ್ಲಿ ಸಿಸಿ ರಸ್ತೆ ಆಗಿದ್ದು, ಅವುಗಳಿಗೆ ಚರಂಡಿಗಳೇ ಇಲ್ಲದಾಗಿವೆ. ಇದರಿಂದ ಕೊಳಚೆ ನೀರು ರಸ್ತೆಯಲ್ಲಿ‌ ಮಡುಗಟ್ಟಿ ಹರಿಯುತ್ತಿದೆ. ಅದರಲ್ಲೇ ಪುಟ್ಟ ಮಕ್ಕಳು ಆಟವಾಡುತ್ತಾರೆ. ಜಲಜೀವನ್ ಮಿಷನ್‌ನ ಮನೆ ಮನೆಗೆ ಗಂಗೆ ಅನುಷ್ಠಾನ ಕಾಮಗಾರಿಗೆ ತೆಗೆಸಿರುವ ಗುಂಡಿಗಳೇ ಚರಂಡಿಗಳಾಗಿ ಮಾರ್ಪಟ್ಟಿವೆ. ಗ್ರಾಮಕ್ಕೆ ಅಲ್ಲಲ್ಲಿ ಅಳವಡಿಸಿರುವ ಕೊಳಾಯಿಗಳು ಚರಂಡಿಯ ಒಳಗಿನಿಂದಲೇ ಎದ್ದು ಬಂದಿವೆ.

ಚರಂಡಿ ಇಲ್ಲದ ಕಾರಣ ಕೊಳಚೆ ಕಸ ರಸ್ತೆಯ ಮೇಲೆಯೇ ನಿಂತು ಗಬ್ಬು ನಾರುತ್ತಿದೆ‌. ಪಂಚಾಯತಿಯವರು ನೈರ್ಮಲ್ಯತೆ ಕಾಪಾಡದ ಕಾರಣ ದುರ್ವಾಸನೆ ಎಲ್ಲೆಲ್ಲೂ ಬೀರಿದೆ. ಇದರಿಂದ ಸೊಳ್ಳೆ, ನೊಣಗಳು, ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಎಳೆ ಕಂದಮ್ಮ, ವೃದ್ಧರು, ಗರ್ಭಿಣಿ ಮಹಿಳೆಯರು ಹಾಗೂ ಅನಾರೋಗ್ಯ ಪೀಡಿತರನ್ನು ಈ ಕಲುಷಿತ ವಾತಾವರಣ ಮತ್ತಷ್ಟು ಖಾಯಿಲೆಗಳಿಗೆ ಕಾರಣವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡಿದ್ದ ಗ್ರಾಮಸ್ಥರಿಗೆ ತುರ್ತು ಚಿಕಿತ್ಸೆ ವ್ಯವಸ್ಥೆಯನ್ನು ಗ್ರಾಮದ ಸರ್ಕಾರಿ ಶಾಲೆ ಕೊಠಡಿಗಳಲ್ಲಿ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಆ ಕೊಠಡಿಗಳ ಸುತ್ತಮುತ್ತ ಕಳೆಗಿಡಗಳು ಆವರಿಸಿಕೊಂಡು ಅನೈಮರ್ಮಲ್ಯ ತಾಂಡವವಾಡುತ್ತಿದೆ. ಅಧಿಕಾರಿಗಳಿಗೆ ಇಚ್ಛಾಶಕ್ತಿ, ಕಾಳಜಿ ಇದ್ದಿದ್ದರೆ ಚಿಕಿತ್ಸಾ ಕೊಠಡಿ ಆವರಣವನ್ನು ಸ್ವಚ್ಛವಾಗಿಡುತ್ತಿದ್ದರು.

ಆವರಣದಲ್ಲಿ ಬೆಳೆದಿರುವ ಕಳೆಗಿಡಗಳು ಸೊಳ್ಳೆಗಳ ತಾಣಗಳು. ಓವರ್ ಹೆಡ್ ಟ್ಯಾಂಕ್ ಕ್ಲೀನ್ ಮಾಡದೇ ಇರುವುದು, ಚರಂಡಿರಂಡಿಯಲ್ಲಿ ಪೈಪ್ ಲೀಕೇಜ್ ಆಗಿರುವುದೇ ನೀರಿನ ಮಲಿನಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಚಿನ್ನೇನಹಳ್ಳಿ ಗ್ರಾಮಪಂಚಾಯತಿಯ ಕೇಂದ್ರ ಸ್ಥಾನವಾಗಿರುವ ಈ ಊರು ತಮ್ಮ ವ್ಯಾಪ್ತಿಯ ಇತರ ಹಳ್ಳಿಗಳಿಗೆ ಮಾದರಿಯಾಗಬೇಕಿತ್ತು. ಜಡ್ಡುಗಟ್ಟಿದ ಪಂಚಾಯತಿ ಆಡಳಿತ, ಮೇಲಾಧಿಕಾರಿಗಳ ತಾತ್ಸಾರ ಮನೋಭಾವ ಈ ಹಳ್ಳಿಯನ್ನು ಅನೈರ್ಮಲ್ಯಕ್ಕೆ ತಳ್ಳಿರುವುದು ಜನರನ್ನು ಸಾವಿನ ಮನೆಯ ಕದ ತಟ್ಟುವಂತೆ ಮಾಡಿದೆ. ಇದನ್ನು ಗಮನಿಸಿದರೆ ಇತರ ಹಳ್ಳಿಗಳ ದುಸ್ಥಿತಿಯನ್ನು ಊಹಿಸಬಹುದು.

ಇದರಿಂದ ಜಿಲ್ಲಾ ಪಂಚಾಯತಿ ಸಿಇಓ ಹಾಗೂ ತಾಲ್ಲೂಕು ಪಂಚಾಯತಿ ಇಓ ಅವರ ಕಾರ್ಯವೈಖರಿ ಅನಾವರಣ ಆಗಿದೆ. ಘಟನೆ ಸಂಬಂಧಿಸಿದಂತೆ ಚಿನ್ನೇನಹಳ್ಳಿ ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಒ, ವಾಟರ್ ಮ್ಯಾನ್ ಅವರನ್ನು ಅಮಾನತು ಮಾಡಲಾಗಿದೆ.

ಗ್ರಾಮದಲ್ಲಿ ಸ್ಥಾಪನೆಯಾಗಿರುವ ಚಿಕಿತ್ಸಾ ಕೇಂದ್ರದಲ್ಲಿ 135 ಜನರು ಚಿಕಿತ್ಸೆ ಪಡೆದಿದ್ದಾರೆ ಎಂದು ತಹಶೀಲ್ದಾರ್ ಸಿಗ್ಬತ್ ವುಲ್ಲಾ ತಿಳಿಸಿದ್ದಾರೆ. ಆದರೆ, 200ಕ್ಕೂ ಅಧಿಕ ಜನರು ವಾಂತಿ ಭೇದಿಗೆ ತುತ್ತಾಗಿ ಸರ್ಕಾರಿ ಹಾಗೂ ವಿವಿಧ ಖಾಸಗಿ ಆಸ್ಪತ್ರೆ ಸೇರಿದ್ದಾರೆ. ಜನರು ಭೀತಿಗೆ ಒಳಗಾಗಿ ಊರನ್ನು ತೊರೆಯುತ್ತಿದ್ದಾರೆ. ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿನ್ನೇನಹಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿಯೇ ಅನೈರ್ಮಲ್ಯ ತಾಂಡವವಾಡುತ್ತಿದೆ. ಗ್ರಾಪಂ ಆವರಣಕ್ಕೆ ಕಸದಿಂದ ಮುಕ್ತಿ ಸಿಕ್ಕಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಗ್ರಾಪಂ ಆಡಳಿತದ ಗಮನಕ್ಕೆ ಬಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು.

ಗ್ರಾಮದಲ್ಲಿರುವ 2 ಕೊಳವೆ ಬಾವಿಗಳಿಂದ ಓವರ್ ಹೆಡ್ ಟ್ಯಾಂಕ್ ಗೆ ನೀರು ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕ್ ನಿಂದ ಶುದ್ದಕುಡಿಯುವ ನೀರಿನ ಘಟಕಕ್ಕೆ, ಅಲ್ಲಿಂದ ನಲ್ಲಿಗಳ ಮೂಖಾಂತರ ಮನೆಗಳಿಗೆ ನೀರು ಪೂರೖಕೆ ಮಾಡಲಾಗುತ್ತದೆ. ಕುಲುಷಿತ ನೀರು ಕುಡಿದು ಜನರು ಅಸ್ವಸ್ಥರಾದ ನಂತರ ಕೊಳವೆ ಬಾವಿಯ 3, ಶುದ್ದಕುಡಿಯುವ ನೀರಿನ ಘಟಕದಿಂದ 1, ನಲ್ಲಿಯಲ್ಲಿ 2 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದೆ. ಎಲ್ಲ ಮಾದರಿಯ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬುದು ದೃಢವಾಗಿದೆ.

100 ಎಂ.ಎಲ್ ನೀರಿನಲ್ಲಿ 10 ಕ್ಕಿಂತ ಹೆಚ್ಚು ಬ್ಯಾಕ್ಟೀರಿಯಗಳು ಇದ್ದರೆ, ಆ ನೀರು ಕುಡಿಯಲು ಯೋಗ್ಯವಲ್ಲ ಎಂದು ನಿರ್ಧರಿಸಲಾಗುತ್ತದೆ. ಈಗ ಪರೀಕ್ಷೆಗೆ ಒಳಪಡಿಸಿದ ಎಲ್ಲ ಮಾದರಿಗಳಲ್ಲಿ ಬ್ಯಾಕ್ಟೀರಿಯಗಳು ಹೆಚ್ಚಿನ ಸಂಖ್ಯೆಯಲ್ಲಿವೆ ಎಂದು ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ. ರಾಮೇಗೌಡ ಮಾಹಿತಿ ನೀಡಿರುವುದು ವರದಿಯಾಗಿದೆ.

ಚೆನ್ನೇನಹಳ್ಳಿಯಲ್ಲಿ ಕೊಳವೆಬಾವಿಯಿಂದ ನೀರು ಸರಬರಾಜು ಮಾಡುವುದನ್ನು ನಿಲ್ಲಿಸಲಾಗಿದೆ. ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ. ಆದರು ವಾಂತಿ, ಬೇಧಿ ನಿಲ್ಲುತಿಲ್ಲ. ಅಧಿಕಾರಿಗಳು ನೀರಿನ ಗುಣಮಟ್ಟ ಪರಿಶೀಲಿಸುವುದನ್ನು ಮರೆತಿದ್ದಾರೆ. ಕಾಲ ಕಾಲಕ್ಕೆ ಪರೀಕ್ಷೆ ನಡೆಸಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಮಾಯಕ ಜನ ಪ್ರಾಣ ಕಳೆದುಕೊಂಡಿದ್ದಾರೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿರುವ ಒಬ್ಬರಲ್ಲಿ ಕಾಲರ ಸೋಂಕು ದೃಢಪಟ್ಟಿದೆ. ಜೂನ್ 10 ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಕೃಷ್ಣಪ್ಪ (32) ಋಂಬುವವರಲ್ಲಿ ಸೋಕು ಕಾಣಿಸಿಕೊಂಡಿದೆ. ಇವರು ಈಗಾಲೇ ಆಸ್ಪತ್ರೆಯಿಂದ ಬಿಡುಗಡೆಯಾಗಿ ಸಂಬಂಧಿಕರ ಮನೆರಲ್ಲಿದ್ದಾರೆ.

ರಾಜ್ಯದ ಯಾವುದೇ ಭಾಗದಲ್ಲಿ ಕಲುಷಿತ ನೀರಿನಿಂದ ತೊಂದರೆಯಾದರೆ ಜಿಲ್ಲಾಧಿಕಾರಿಗಳನ್ನೇ ಹೊಣೆಗಾರರನ್ನಾಗಿ‌ ಮಾಡಲಾಗುವುದು ಹಾಗೂ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಎಚ್ಚರಿಕೆ ನೀಡಿದ್ದರೂ ಈ ಘಟನೆ ನಡೆಸಿದೆ. ಈಗ ಸಿಎಂ ಅವರು ಕ್ರಮ ಕೈಗೊಳ್ಳುವರೇ ಎಂದು ಕಾದು ನೋಡಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

ಬೆಳ್ತಂಗಡಿ | ಸೌಜನ್ಯ ಹೋರಾಟಗಾರರ ಮೇಲೆ ನಿರಂತರ ಎಫ್‌ಐಆರ್: ಗಿರೀಶ್ ಮಟ್ಟಣ್ಣನವರ್ ಆಕ್ರೋಶ

ಗುರುವಾರ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ...

Download Eedina App Android / iOS

X