ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು, ಯಾವುದೇ ಸಬೂಬು ನೀಡದೆ, ವಿಳಂಬಧೋರಣೆ ಅನುಸರಿಸದೆ ನಿಗದಿತ ಸಮಯದೊಳಗೆ ಪೂರ್ಣಗೊಳಿಸುವಂತೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಜಿ ಪರಮೇಶ್ವರ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಶುಕ್ರವಾರ ಸ್ಮಾರ್ಟ್ ಸಿಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು 2023ರ ನವೆಂಬರ್ ಮಾಹೆಯೊಳಗಾಗಿ ಪೂರ್ಣಗೊಳಿಸಬೇಕು” ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕೆಲವು ತಾಂತ್ರಿಕ ಕಾರಣಗಳಿಂದ ಸ್ಮಾರ್ಟ್ ಬಸ್ ನಿಲ್ದಾಣದ ಕಾಮಗಾರಿಯನ್ನು 2024ರ ಜನವರಿ ಮಾಹೆಯವರೆಗೆ ವಿಸ್ತರಿಸುವಂತೆ ಕೋರಿ ಸರ್ಕಾರಕ್ಕೆ ಪತ್ರ ಸಲ್ಲಿಸಲಾಗಿದೆ ಎಂಬ ಅಧಿಕಾರಿಗಳ ಸಮಜಾಯಿಷಿಯನ್ನು ಒಪ್ಪಿಕೊಳ್ಳದ ಸಚಿವರು, “ಈ ಸಬೂಬನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. 2023ರ ನವೆಂಬರ್ ಮಾಹೆಯೊಳಗಾಗಿ ಬಸ್ ನಿಲ್ದಾಣವನ್ನು ಪೂರ್ಣಗೊಳಿಸದಿದ್ದಲ್ಲಿ ದಂಡ ಸಂಹಿತೆಯನ್ವಯ ಗುತ್ತಿಗೆದಾರರಿಗೆ ಪ್ರತಿ ದಿನ ದಂಡ ವಿಧಿಸಲಾಗುವುದು ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದರು.
“ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಿಸಲಾಗಿರುವ ಸೈಕಲ್ ಟ್ರ್ಯಾಕ್ ಸ್ಥಳದಲ್ಲಿ ಖಾಸಗಿ ವಾಹನಗಳನ್ನು ಪಾರ್ಕಿಂಗ್ ಮಾಡಲಾಗಿದೆ. ಪಾಲಿಕೆಯವರಾಗಲಿ ಅಥವಾ ಸ್ಮಾರ್ಟ್ ಸಿಟಿ ಅಧಿಕಾರಿಗಳಾಗಲಿ ಇಂತಹ ವಿಷಯಗಳನ್ನು ಗಮನಿಸುತ್ತಿಲ್ಲ. ಶೀಘ್ರವೇ ಖಾಸಗಿ ವಾಹನಗಳ ತೆರವಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಸೂಚಿಸಿದರು.
”ಎಸ್ ಎಸ್ ವೃತ್ತದಲ್ಲಿ ಉದ್ಯಾನವನ ನಿರ್ಮಾಣ ಕಾಮಗಾರಿಗೆ ಖಾಸಗಿ ವ್ಯಕ್ತಿಯೊಬ್ಬರು ಹೈಕೋರ್ಟ್‌ನಿಂದ ತಡೆಯಾಜ್ಞೆ ಜಾರಿಗೊಳಿಸಿದ್ದು, ಸದರಿ ಸ್ಟೇಯನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಬೇಕು. ಜಿಮ್ನಾಸ್ಟಿಕ್ ಸೆಂಟರ್ ನಿರ್ಮಾಣ ಸಂಬಂಧ ಅನುಮೋದಿತ ಮೊತ್ತ 3.5 ಕೋಟಿ ರೂ.ಗೆ ಸಂಬಂಧಿಸಿದಂತೆ ಸಂಪೂರ್ಣ ವರದಿ ಸಲ್ಲಿಸಬೇಕು” ಎಂದರು.
“ಅಮಾನಿಕೆರೆಗೆ ತ್ಯಾಜ್ಯ ನೀರು ಸೇರುವಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಸಂಬಂಧ ಚರಂಡಿ ನೀರಿನ ಬದಲಿ ಮಾರ್ಗದ ಕಾಮಗಾರಿಯನ್ನು ಇನ್ನು 10 ದಿನದೊಳಗಾಗಿ ಪೂರ್ಣಗೊಳಿಸಬೇಕು. ತುಮಕೂರು ನಗರವನ್ನು ಸೌಂದರ್ಯೀಕರಣಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಈ ಹಿಂದೆಯೇ ತಾವು ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದು, ಈವರೆಗೂ ಈ ಕೆಲಸ ಆಗಿರುವುದಿಲ್ಲ. ಹಾಗಾಗಿ ಶೀಘ್ರದಲ್ಲೇ ನಗರದ ಸೌಂದರ್ಯೀಕರಣ ಕೆಲಸಗಳನ್ನು ಪ್ರಾರಂಭಿಸಬೇಕು” ಎಂದರು.
“ತುಮಕೂರು ನಗರದಲ್ಲಿ ಅಂದಾಜು 1.10 ಲಕ್ಷ ಆಸ್ತಿಗಳಿದ್ದು, 79,442 ವಾಣಿಜ್ಯ ಮತ್ತು ವಾಸದ ಕಟ್ಟಡಗಳಿವೆ. ಇವೆಲ್ಲವನ್ನೂ ಡ್ರೋನ್ ಸರ್ವೆ ಮೂಲಕ ಮ್ಯಾಪಿಂಗ್ ಮಾಡಿದಲ್ಲಿ ಆಸ್ತಿ ತೆರಿಗೆ ವಸೂಲಾತಿ ಸುಲಭವಾಗಲಿದೆ. ರಾಜಕಾಲುವೆಗಳಲ್ಲಿ ತ್ಯಾಜ್ಯವಿರುವ ಕುರಿತು ಡ್ರೋನ್ ಸರ್ವೆ ಆದಲ್ಲಿ ಮುಂದಿನ ದಿನಗಳಲ್ಲಿ ನೀರಿನ ಸರಾಗ ಹರಿಯುವಿಕೆಗೆ ಸಹಕಾರಿಯಾಗಲಿದೆ. ಆದರೆ ಈ ನಿಟ್ಟಿನಲ್ಲಿ ಈವರೆಗೆ ಪಾಲಿಕೆ ವತಿಯಿಂದ ಕೈಗೊಳ್ಳಲಾದ ಡ್ರೋನ್ ಸರ್ವೆ ಸಮರ್ಪಕವಾಗಿ ಆಗಿರುವುದಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಸಂಬಂಧಿಸಿದ ಸಂಸ್ಥೆಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ರಾಜ್ಯದಲ್ಲಿ ಬರ ನಿರ್ವಹಣೆಗೆ ₹ 400 ರಿಂದ ₹ 500 ಕೋಟಿ ಮೀಸಲು: ಜಿ ಪರಮೇಶ್ವರ್
“ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣವಾಗಿರುವ 105 ಉದ್ಯಾನವನಗಳ ಅಭಿವೃದ್ಧಿ ಹಾಗೂ ನಿರ್ವಹಣೆ ಸರಿಯಾಗಿ ಆಗಿರುವುದಿಲ್ಲ. ಮುಂದಿನ ದಿನಗಳಲ್ಲಿ ಉದ್ಯಾನವನಗಳಿಗೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಲಾಗುವುದು” ಎಂದು ಸಚಿವರು ಎಚ್ಚರಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ ಶ್ರೀನಿವಾಸ್, ಜಿ.ಪಂ ಸಿಇಒ ಜಿ ಪ್ರಭು, ಪಾಲಿಕೆ ಆಯುಕ್ತೆ ಬಿ ವಿ ಅಶ್ವಿಜ, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ ಸೇರಿದಂತೆ ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು ಇದ್ದರು.