ನಾ ಕಾವೂಂಗ, ನಾ ಕಾನೆದೂಂಗ ಎಂಬ ನೀತಿ ಪಾಠ ಹೇಳುತಿದ್ದ ಪ್ರಧಾನಿ ನರೇಂದ್ರಮೋದಿಯವರ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸುಪ್ರಿಂಕೋರ್ಟ್ ಬಹಿರಂಗ ಮಾಡಿದ್ದು, ಇಂತಹ ಸೋಗಲಾಡಿ ವ್ಯಕ್ತಿ ಮತ್ತೊಮ್ಮೆ ಪ್ರಧಾನಿಯಾದರೆ ಈ ದೇಶದ ಗತಿ ಏನಾಗುತ್ತದೆ ಎಂಬುದನ್ನು ದೇಶದ ಜನರು ಅರ್ಥ ಮಾಡಿಕೊಂಡು ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಬೇಕು ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ತಿಳಿಸಿದರು.
ತುಮಕೂರು ನಗರದ ಸ್ಟಾರ್ ಪ್ಯಾಲೇಸ್‌ನಲ್ಲಿ ತುಮಕೂರು ನಗರ ಬ್ಲಾಕ್ 1 ಮತ್ತು ಬ್ಲಾಕ್ 2 ಕಾಂಗ್ರೆಸ್ ಮುಖಂಡರ ಪ್ರಚಾರಾಂದೋಲನ ಸಭೆಯಲ್ಲಿ ಮಾತನಾಡಿದರು.
“ಸಾರ್ವಜನಿಕ ವೇದಿಕೆಗಳನ್ನು ಹೊರತುಪಡಿಸಿದರೆ ಸದನದಲ್ಲಿ ಈ ದೇಶದ ಜನರ ಸಮಸ್ಯೆಗಳ ಕುರಿತು ಪ್ರಧಾನಿ ಮಾತನಾಡಿದ ಉದಾಹರಣೆಯಿಲ್ಲ. ವಾಡಿಕೆ ಎಂಬಂತೆ ರಾಷ್ಟ್ರಪತಿ ಭಾಷಣದ ಮೇಲೆ ವರ್ಷಕ್ಕೊಮ್ಮೆ ಮಾತನಾಡುವ ಶಾಸ್ತ್ರ ಮಾಡುತ್ತಾರೆ. ಇಂತಹ ಪ್ರಧಾನಿಯನ್ನು ಮತ್ತೊಮ್ಮೆ ಆಯ್ಕೆ ಮಾಡುವ ಅಗತ್ಯವಿದೆಯೇ” ಎಂದು ಪ್ರಶ್ನಿಸಿದರು.
“ನಮ್ಮ ಸರ್ಕಾರ ಬಡವರು, ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಪರವಾದ ಆಡಳಿತ. ಈ ಹಿಂದೆ ಟಿಪ್ಪು ಜಯಂತಿಯನ್ನು ಆರಂಭಿಸಿದಾಗ ಅದನ್ನು ವಿರೋಧಿಸಿದ್ದ ಬಿಜೆಪಿ ಏನೆಲ್ಲ ಅವಾಂತರಗಳನ್ನು ಸೃಷ್ಟಿಸಿತ್ತು ಎಂಬುದನ್ನು ನಾವೆಲ್ಲರೂ ಮತ್ತೊಮ್ಮೆ ನೆನಪಿಸಿಕೊಳ್ಳಬೇಕಿದೆ. ಬ್ರಿಟಿಷರ ವಿರುದ್ಧದ ಯುದ್ದದಲ್ಲಿ ಸೋತು, ಯುದ್ದದ ಖರ್ಚಿಗಾಗಿ ತನ್ನ ಎರಡು ಮಕ್ಕಳನ್ನು ಒತ್ತೆ ಇಟ್ಟ ಇಡೀ ವಿಶ್ವದ ಏಕೈಕ ಸ್ವಾತಂತ್ರ ಸೇನಾನಿ ಟಿಪ್ಪು ಕನ್ನಂಬಾಡಿ ಕಟ್ಟೆಯ ಸೃಷ್ಟಿಕರ್ತ, ಈ ನಾಡಿಗೆ ರೇಷ್ಮೆ ಬೆಳೆ ಪರಿಚಯಿಸಿದವ, ಶೃಂಗೇರಿ ಸೇರಿದಂತೆ ಹಲವು ದೇವಾಲಯಗಳ ಮೇಲೆ ದೇಶದ ಬೇರೆ ಬೇರೆ ಸಂಸ್ಥಾನಗಳ ರಾಜರುಗಳು ದಾಳಿ ಮಾಡಿದ ಸಂದರ್ಭದಲ್ಲಿ ಅವುಗಳಿಗೆ ರಕ್ಷಣೆ ಒದಗಿಸಿದವ ಟಿಪ್ಪು. ಅಧಿಕಾರಕೋಸ್ಕರ ಇತಿಹಾಸವನ್ನೇ ಮರೆಮಾಚಲು ಹೊರಟವರಿಗೆ ಸರಿಯಾದ ಬುದ್ಧಿ ಕಲಿಸಬೇಕಾಗಿದೆ” ಎಂದು ಕೆ ಎನ್ ರಾಜಣ್ಣ ಕರೆ ನೀಡಿದರು.
“ತುಮಕೂರು ಜಿಲ್ಲಾ ರಾಜಕೀಯ ಇತಿಹಾಸದಲ್ಲಿಯೇ ತುಮಕೂರಿನ ಹೊರಗಿನವರು ಗೆದ್ದ ಇತಿಹಾಸವಿಲ್ಲ. ಎ ಕೃಷ್ಣಪ್ಪ, ಮಾಜಿ ಪ್ರಧಾನಿ ದೇವೇಗೌಡರಂತಹ ನಾಯಕರನ್ನೇ ಮನೆಗೆ ಕಳುಹಿಸಿದ ಸ್ವಾಭಿಮಾನಿ ಮತದಾರರು ತುಮಕೂರಿನ ಜನ. ಹಾಗಾಗಿ ಶಾಸಕರಾಗಿ, ಸಂಸದರಾಗಿ ಜಿಲ್ಲೆಯ ಸಮಸ್ಯೆಗಳ ಕುರಿತು ಅಧಿವೇಶನಗಳಲ್ಲಿ ಸಮರ್ಥವಾಗಿ ಚರ್ಚೆ ಮಾಡಿ ಜಿಲ್ಲೆಯ ಮಾನ, ಮರ್ಯಾದೆ ಕಾಪಾಡಿದ ಮುದ್ದಹನುಮೇಗೌಡರನ್ನು ಗೆಲ್ಲಿಸುವ ಮೂಲಕ ಮತದಾರರ ಸ್ವಾಭಿಮಾನದ ಜತೆಗೆ, ಕಾಂಗ್ರೆಸ್ ಮುಖಂಡರುಗಳ ಮಾರ್ಯಾದೆಯನ್ನೂ ಮತದಾರರು ಉಳಿಸಬೇಕು” ಎಂದು ಕೆ ಎನ್ ರಾಜಣ್ಣ ಮನವಿ ಮಾಡಿದರು.
ಮಾಜಿ ಸಂಸದ ಹಾಗೂ ಹಾಲಿ ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್ ಪಿ ಮುದ್ದಹನುಮೇಗೌಡ ಮಾತನಾಡಿ, “ಕೆಲ ಸಣ್ಣ ಪುಟ್ಟ ಗೊಂದಲಗಳಿಂದ ಕಾಂಗ್ರೆಸ್ ಪಕ್ಷ ತೊರೆದಿದ್ದು, ಇದಕ್ಕಾಗಿ ಈಗಾಗಲೇ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆಗೊಂಡ ದಿನವೇ ಬಹಿರಂಗ ಕ್ಷಮೆ ಕೇಳಿದ್ದೇನೆ. ಮೂರು ಬಾರಿ ಶಾಸಕ, ಒಂದು ಬಾರಿ ಸಂಸದನಾಗಿರುವುದು ಕಾಂಗ್ರೆಸ್ ಪಕ್ಷದಿಂದಲೇ. ನಾನು ನಾಮಕಾವಸ್ಥೆ ಸಂಸದನಾಗಿ ಕೆಲಸ ಮಾಡಿಲ್ಲ. ನೀವು ಕೊಟ್ಟ ಅಧಿಕಾರವನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಶೇ.94ರಷ್ಟು ಲೋಕಸಭೆಯಲ್ಲಿ ಭಾಗವಹಿಸಿದ್ದೇನೆ. ಜಿಲ್ಲೆಯ ನೆಲ, ಜಲ, ಕೊಬ್ಬರಿ, ನೀರಾವರಿ ವಿಚಾರವಾಗಿ ಚರ್ಚೆ ನಡೆಸಿದ್ದು, 700ಕ್ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದೇನೆ. 120ಕ್ಕೂ ಹೆಚ್ಚು ಚರ್ಚೆಗಳಲ್ಲಿ ಪಾಲ್ಗೊಂಡಿದ್ದೇನೆ. ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಲು ನೀವು ಕೊಟ್ಟ ಅಧಿಕಾರ ಕಾರಣ. ಹಾಗಾಗಿ ಮತ್ತೊಮ್ಮೆ ನನಗೆ ಅವಕಾಶ ಮಾಡಿಕೊಡಿ” ಎಂದು ಮನವಿ ಮಾಡಿದರು.
ಗೃಹ ಸಚಿವರ ಡಾ. ಜಿ ಪರಮೇಶ್ವರ್ ಮಾತನಾಡಿ, “ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಸ್ ಪಿ ಮದ್ದಹನುಮೇಗೌಡರು, ದೆಹಲಿಯ ಸೌತ್ ಬ್ಲಾಕ್ ಮನೆಗಷ್ಟೇ ಸಿಮೀತವಾಗಿಲ್ಲ. ಜಿಲ್ಲೆಯನ್ನು ಸಮರ್ಥವಾಗಿ ಪ್ರತಿನಿಧಿಸಿದ್ದಾರೆ. ಎಲ್ಲರ ಕೈಗೆಟುವ ಸಂಸದರಾಗಿದ್ದಾರೆ. ನಮ್ಮದು ಜಾತ್ಯತೀತ ತಳಹದಿಯ ಮೇಲೆ ನಿಂತಿರುವ ಪ್ರಜಾಪ್ರಭುತ್ವ ಭಾರತ. ಇದು ಉಳಿಯಬೇಕಾದರೆ ನಾವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕಿದೆ. ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವ, ಹಿಂದು, ಮುಸ್ಲಿಂ ಹೆಸರಿನಲ್ಲಿ ಕೋಮು ಗಲಭೆ ಸೃಷ್ಟಿಸುವ ಬಿಜೆಪಿಯಿಂದ ಶಾಂತಿ ನೆಲೆಸಲು ಸಾಧ್ಯವಿಲ್ಲ” ಎಂದರು.
“ತುಮಕೂರು ನಗರ ಶಾಸಕರಾಗಿರುವ ಜೋತಿಗಣೇಶ್ ಅವರಿಗೆ ತಿಳುವಳಿಕೆ ಕಡಿಮೆ. ಎನ್‌ಡಿಆರ್‌ಎಫ್ ನಿಧಿ ಬಿಡುಗಡೆ ಬಗ್ಗೆ ನಮಗೆ ಪಾಠ ಮಾಡುತ್ತಾರೆ. ರಾಜ್ಯದಿಂದ ಆಯ್ಕೆಯಾಗಿರುವ 26 ಮಂದಿ ಬಿಜೆಪಿ ಶಾಸಕರು ಏನು ಮಾಡುತ್ತಿದ್ದಾರೆ. ಮೊದಲು ಅವರ ಜವಾಬ್ದಾರಿಯನ್ನು ನೆನಪಿಸಲಿ, ನಂತರ ರಾಜ್ಯ ಸರಕಾರವನ್ನು ಕೇಳಲಿ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೂಲಕ ಒಂದು ರಾಷ್ಟ್ರ ಒಂದು ಚುನಾವಣೆ ಹೆಸರಿನಲ್ಲಿ ವರದಿ ತರಿಸಿಕೊಂಡಿದ್ದಾರೆ. ಒಂದು ವೇಳೆ ಈ ವರದಿ ಜಾರಿಯಾದರೆ, ರಾಜೀವ್‌ಗಾಂಧಿ ಅವರು 73-74ನೇ ತಿದ್ದುಪಡಿಯ ಮೂಲಕ ಮಹಿಳೆಯರು, ಹಿಂದುಳಿದ ವರ್ಗಗಳಿಗೆ ಸಿಕ್ಕಿರುವ ರಾಜಕೀಯ ಹಕ್ಕು ಮರೀಚಿಕೆಯಾಗಲಿದೆ. ರಾಷ್ಟ್ರದ ಆಡಳಿತವನ್ನು ವಿಕೇಂದ್ರೀರಣಗೊಳಿಸುವ ಬದಲು ಕೇಂದ್ರೀಕರಣದ ಮೂಲಕ ಸರ್ವಾಧಿಕಾರಿ ಆಡಳಿತಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ. ಜನತೆ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ದೊಡ್ಡ ಪಶ್ಚತ್ತಾಪ ಕಾಡಲಿದೆ” ಎಂದು ಡಾ ಜಿ ಪರಮೇಶ್ವರ್ ಎಚ್ಚರಿಸಿದರು.
ಶಾಸಕ ಹಾಗೂ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಸ್ ಆರ್ ಶ್ರೀನಿವಾಸ್ ಮಾತನಾಡಿ, “ಇಡೀ ದೇಶದಲ್ಲಿ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ವಾರ್ಷಿಕ ಸುಮಾರು 4.50 ಲಕ್ಷ ಕೋಟಿ ತೆರಿಗೆ ನೀಡಿದರೂ ನಮಗೆ ನೀಡುತ್ತಿರುವ ಅನುದಾನ ₹54,000 ಕೋಟಿ ಮಾತ್ರ. ರಾಜ್ಯದ 226 ತಾಲೂಕುಗಳು ಬರ ಎದುರಿಸುತ್ತಿವೆ. ಕೇಂದ್ರ ನಯಾ ಪೈಸೆ ನೀಡಿಲ್ಲ. ರಾಜ್ಯ ಸರ್ಕಾರವೇ ಈವರೆಗೂ ನಿಭಾಯಿಸಿಕೊಂಡು ಬಂದಿದೆ. ಅನಿವಾರ್ಯವಾಗಿ ಸುಪ್ರಿಂ ಮೆಟ್ಟಿಲು ಹತ್ತಿದ್ದೇವೆ. ಮೋದಿ ಎದುರಿಗೆ ಮಾತನಾಡಲು ಹೆದರುವ ಸಂಸದರಿಂದ ಏನು ಪ್ರಯೋಜನವಿಲ್ಲ. ಹಾಗಾಗಿ ಲೋಕಸಭೆಯಲ್ಲಿ ರಾಜ್ಯವನ್ನು ಸಮರ್ಥವಾಗಿ ಪ್ರತಿನಿಧಿಸುವ ಕಾಂಗ್ರೆಸ್ ಪಕ್ಷವನ್ನು ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ರಾಜ್ಯದಲ್ಲಿ ಬರವಿದ್ದರೂ, ಕೇಂದ್ರ ಸರ್ಕಾರ ಬಿಡಿಗಾಸೂ ನೀಡದೇ ಸತಾಯಿಸುತ್ತಿದೆ: ಸಿಪಿಐ(ಎಂ)
ವೇದಿಕೆಯಲ್ಲಿ ಶಾಸಕ ವೆಂಕಟೇಶ್, ಮಾಜಿ ಶಾಸಕರುಗಳಾದ ಎಸ್ ಷಪಿಅಹಮದ್, ಡಾ ರಫೀಕ್ ಅಹಮದ್, ಗಂಗಹನುಮಯ್ಯ, ಇಕ್ಬಾಲ್ ಅಹಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಮುರುಳೀಧರ ಹಾಲಪ್ಪ, ನಿಖೇತರಾಜ್ ಮೌರ್ಯ, ಸುಲ್ತಾನ್ ಮೊಹಮದ್, ಅಸ್ಲಾಂಪಾಷ, ರಾಮಕೃಷ್ಣ, ಗೀತಾರಾಜಣ್ಣ, ಮಾಜಿ ಮೇಯರ್‌ಗಳಾದ ಫರೀದಾ ಬೇಗಂ, ಪ್ರಭಾವತಿ, ರೂಪಾ, ಗೀತಾ ರುದ್ರೇಶ್, ನಯಾಜ್ ಅಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಮಹೇಶ್, ಫಯಾಜ್, ಹಫೀಜ್ ಸೇರಿದಂತೆ ಹಲವಾರು ಮುಖಂಡರು ಇದ್ದರು.
