ನಾಡೋಜ ಪ್ರೊ.ಬರಗೂರು ಸ್ನೇಹ ಬಳಗದ ವತಿಯಿಂದ ಬರಗೂರು ಮೀಮಾಂಸೆ ಮತ್ತು ಬರಗೂರರಿಗೆ ತವರು ಜಿಲ್ಲೆಯ ಗೌರವ ಕುರಿತ ವಿಚಾರ ಸಂಕಿರಣವನ್ನು ಜ.5, 2025ರಂದು ತುಮಕೂರು ನಗರದ ಜಿಲ್ಲಾ ಗ್ರಂಥಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಬರಗೂರು ಮೀಮಾಂಸೆ ಕಾರ್ಯಕ್ರಮವನ್ನು ಹಂಪಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಉದ್ಘಾಟಿಸುವರು. ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಅರುಣ ಜೋಳದ ಕೂಡ್ಲಗಿ ದಿಕ್ಸೂಚಿ ಭಾಷಣ ಮಾಡಲಿದ್ದು ಸಾಮಾಜಿಕ ಚಿಂತಕ ಕೆ.ದೊರೈರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ತುಮಕೂರು ವಿವಿ ಕುಲಸಚಿವೆ ನಾಹಿದ ಜಮ್ ಜಮ್, ಲೇಖಕಿ ಮಲ್ಲಿಕಾ ಬಸವರಾಜ್ ಭಾಗವಹಿಸುವರು.
ಅಂದು ಮಧ್ಯಾಹ್ನ 12 ಗಂಟೆಗೆ ಮೊದಲ ಗೋಷ್ಠಿ ನಡೆಯಲಿದ್ದು, ಬರಗೂರು ಸಾಹಿತ್ಯದಲ್ಲಿ ಸಾಮಾಜಿಕ-ಆರ್ಥಿಕ ಮೀಮಾಂಸೆ ವಿಷಯದ ಕುರಿತು ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಕಿರಣ್ ಗಾಜನೂರು, ಬರಗೂರು ಸಾಹಿತ್ಯದಲ್ಲಿ ಮಹಿಳಾ ಮೀಮಾಂಸೆ ವಿಷಯ ಕುರಿತು ಚಿಕ್ಕಮಗಳೂರು ಸರ್ಕಾರಿ ಕಾಲೇಜು ಪ್ರಾಂಶುಪಾಲೆ ಡಾ.ಪುಷ್ಪ ಭಾರತಿ ವಿಷಯ ಮಂಡಿಸುವರು. ಹಿರಿಯ ಪತ್ರಕರ್ತ ಗಂಗಾಧರ್ ಮೊದಲಿಯಾರ್ ಗೋಷ್ಠಿಯ ಅಧ್ಯಕ್ಷತೆ ವಹಿಸುವರು ಮತ್ತು ಬರಗೂರರ ಸಿನಿಮಾಗಳ ವಸ್ತು ಮೀಮಾಂಸೆ ಕುರಿತು ಮಾತನಾಡುವರು.

ಮಧ್ಯಾಹ್ನ 2.40ಕ್ಕೆ ಎರಡನೇ ಗೋಷ್ಠಿ ನಡೆಯಲಿದ್ದು, ಕವಿತೆಯಲ್ಲಿ ಕಂಡ ಬರಗೂರು (ಬರಗೂರರನ್ನು ಕುರಿತ ಸ್ವರಚಿತ ಕವಿತೆಗಳ ವಾಚನ) ನಡೆಯಲಿದೆ. ಈ ಗೋಷ್ಠಿಯ ಆಶಯ ನುಡಿಗಳನ್ನು ಗಂಗಾವತಿ ಸರ್ಕಾರಿ ಕಾಲೇಜು ಪ್ರಾಂಶುಪಾಲ ಡಾ.ಮುಮ್ತಾಜ್ ಬೇಗಂ ಆಡುವರು. ಪ್ರಸಿದ್ದ ಲೇಖಕಿ ಬಾ.ಹ.ರಮಾಕುಮಾರಿ ಗೋಷ್ಠಿಯ ಅಧ್ಯಕ್ಷತೆ ವಹಿಸುವರು.
ಅಂದು ಸಂಜೆ 4.30ಕ್ಕೆ ಸಮಾರೋಪ ಸಮಾರಂಭವಿದ್ದು, ಪ್ರೊ.ಬರಗೂರರಿಗೆ ತವರು ಜಿಲ್ಲೆಯ ಗೌರವ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ ಭಾಗವಹಿಸುವರು. ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಶುಭ ಹಾರೈಸುವರು. ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಮತ್ತು ಕಸಾಪ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ ಭಾಗವಹಿಸುವರು.
