ತುಮಕೂರು | ಅಹೋರಾತ್ರಿ ಧರಣಿಗೆ ಮಣಿದ ಜಿಲ್ಲಾಡಳಿತ; ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿಗೆ ಸಂದ ಜಯ

Date:

Advertisements

ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿಯ 8 ದಿನಗಳ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿಗೆ ತುಮಕೂರು ಜಿಲ್ಲಾಡಳಿತ ಮಣಿದಿದ್ದು, ಎರಡು ಬೇಡಿಕೆಗಳನ್ನು ಸಂಪೂರ್ಣವಾಗಿ ಈಡೇರಿಸಿದ್ದರಿಂದ ಜೂನ್‌ 25ರಂದು ಪ್ರತಿಭಟನಾಕಾರರು ಧರಣಿಯನ್ನು ಕೈ ಬಿಟ್ಟಿದ್ದಾರೆ.

ಜೂನ್‌ 18ರಿಂದ ಹೋರಾಟ ಸಮಿತಿಯಿಂದ ಅಹೋರಾತ್ರಿ ಧರಣಿಯನ್ನು ಆರಂಭಿಸಿದ್ದರು. ಅಂದಿನ ರಾತ್ರಿ ಡಿಸಿ ಶುಭ ಕಲ್ಯಾಣ್ ಅವರು ಪ್ರತಿಭಟನಾಕಾರರ ಮನವೊಲಿಸುವಿಕೆಗೆ ಮುಂದಾದರೂ ಕೂಡಾ ಅವರು ಮಣಿದಿರಲಿಲ್ಲ. ಜಿಲ್ಲಾಧಿಕಾರಿಯವರು ಪ್ರತಿಭಟನಾಕಾರರ ಬೇಡಿಕೆಗಳನ್ನು ಈಡೇರಿಸಿದ ಬಳಿಕ ಜೂ.25ರಂದು ಧರಣಿಯನ್ನು ಹಿಂಪಡೆದಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ರಾತ್ರಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿಯವರು ವಸತಿ ಹಕ್ಕು ವಂಚಿತರ ಬೇಡಿಕೆಗಳನ್ನು ಒಂದೊಂದಾಗಿ ಆಲಿಸಿ ಪರಿಹರಿಸುವ ಭರವಸೆ ನೀಡಿದರು.

Advertisements

“ಜಿಲ್ಲೆಯ ತುಮಕೂರು, ಮಧುಗಿರಿ ಹಾಗೂ ಕೊರಟಗೆರೆ ತಾಲೂಕಿನ ಕೆಲ ಗ್ರಾಮಗಳಲ್ಲಿ ಗುಡಿಸಲು ಹಾಕಿಕೊಂಡು ವಾಸವಿರುವ ಬಡ ಜನರು ಸುಮಾರು ಮೂರು ತಲೆಮಾರುಗಳಿಂದ ವಾಸಿಸಲು ಮನೆಗಳಿಲ್ಲದೆ, ನಿವೇಶನಗಳಿಲ್ಲದೆ, ವ್ಯವಸಾಯ ಮಾಡಿ ಜೀವನ ನಡೆಸಲು ಭೂಮಿಯಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಭೂಮಿಗಾಗಿ ನಮೂನೆ 50, 53, 57ರಲ್ಲಿ ಸ್ಥಳೀಯ ಆಡಳಿತಕ್ಕೆ ಅರ್ಜಿ ಸಲ್ಲಿಸಿದ್ದು, ನಮ್ಮ ಅರ್ಜಿಗಳನ್ನು ಪರಿಗಣಿಸಿರುವುದಿಲ್ಲ. ಅರ್ಹ ಫಲಾನುಭವಿಗಳಿಗೆ ನಿವೇಶನ, ಸಾಗುವಳಿ ಚೀಟಿ, ಖಾತೆ, ಪಹಣಿ ಸೌಲಭ್ಯ ಕಲ್ಪಿಸಬೇಕು” ಎಂದು ಸಮಿತಿಯ ಸಂಚಾಲಕ ಹಂದ್ರಾಳ್ ನಾಗಭೂಷಣ್ ಸಭೆಗೆ ಮನವಿ ಮಾಡಿದರು.

“ತುಮಕೂರು ನಗರದ ಹೃದಯಭಾಗದಲ್ಲಿರುವ ಸರ್ಕಾರಿ ಚಿತ್ರಕಲಾ ಕಾಲೇಜಿಗೆ ಸ್ವಂತ ಕಟ್ಟಡವಿಲ್ಲದೆ ಮೂಲ ಸೌಕರ್ಯಗಳಿಲ್ಲದೆ ಪ್ರತಿ ವರ್ಷ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕ್ಷೀಣಿಸುತ್ತಿದ್ದು, ಪ್ರಸ್ತುತ ನಡೆಯುತ್ತಿರುವ ಕಾಲೇಜಿನ ನಿವೇಶನವನ್ನು ಸರ್ಕಾರಿ ಚಿತ್ರಕಲಾ ಕಾಲೇಜಿನ ಹೆಸರಿಗೆ ಖಾತೆ ಮಾಡಿಸಿಕೊಡಬೇಕು” ಎಂದು ಹೋರಾಟ ಸಮಿತಿ ಸಭೆಗೆ ಮನವಿ ಮಾಡಿತು.

ತುಮಕೂರು ತಾಲೂಕಿನ ಕೋರಾ ಹೋಬಳಿ ಶಂಭೋನಹಳ್ಳಿ ಗ್ರಾಮದ ವಾಸಿ ರಾಮಯ್ಯ ಅವರು ಸಾಗುವಳಿ ಚೀಟಿ, ಖಾತೆ, ಪಹಣಿಗಾಗಿ ಮನವಿ ಸಲ್ಲಿಸಿದ್ದು, ಪರಿಗಣಿಸಲು ತುರ್ತಾಗಿ ಕ್ರಮಕೈಗೊಳ್ಳಬೇಕೆಂದು ಸಭೆಗೆ ಮನವಿ ಮಾಡಲಾಯಿತು. ಅದೇ ರೀತಿ ಕೊರಟಗೆರೆ ತಾಲೂಕು ಓಬನಹಳ್ಳಿ, ಹೊಳವನಹಳ್ಳಿ, ನೀಲಗೊಂಡನಹಳ್ಳಿ, ಇರಕಸಂದ್ರ ಕಾಲೋನಿ, ಮತ್ತಿತರ ಗ್ರಾಮಗಳಲ್ಲಿ ವಾಸಿಸುತ್ತಿರುವ ಎಲ್ಲ ಸಮುದಾಯದ ಬಡ ಜನರಿಗೆ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಸಭೆಗೆ ನಿವೇದಿಸಿತು.

ಹೋರಾಟ ಸಮಿತಿಯ ಮನವಿಗಳಿಗೆ ಸ್ಪಂದಿಸಿ ಮಾತನಾಡಿದ ಜಿಲ್ಲಾಧಿಕಾರಿ, “ಮಧುಗಿರಿ ತಾಲೂಕಿನಲ್ಲಿ 10 ತಿಂಗಳು ಕಳೆದರೂ ಆಶ್ರಯ ಸಮಿತಿ ಸಭೆಯನ್ನು ನಡೆಸಿಲ್ಲ. ಮುಂದಿನ ಜುಲೈ 5ರಂದು ಸಮಿತಿ ಸಭೆ ನಡೆಸಿ ನಿವೇಶನ ವಂಚಿತ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಪಟ್ಟಿ ಸಲ್ಲಿಸಬೇಕು” ಎಂದು ತಹಶೀಲ್ದಾರ್ ಸಿಬ್ಗತುಲ್ಲಾ ಹಾಗೂ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಅವರಿಗೆ ನಿರ್ದೇಶನ ನೀಡಿದರು.

ತುಮಕೂರು ನಗರದ ವಿವಿಧ ಬಡಾವಣೆಗಳಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸ ಮಾಡುತ್ತಿರುವ ಸುಮಾರು 15 ಹಂದಿಜೋಗಿ ಕುಟುಂಬಗಳಿಗೆ ಜಿಲ್ಲಾಡಳಿತದಿಂದ ಅಮಲಾಪುರ ಗ್ರಾಮದಲ್ಲಿ 1 ಎಕರೆ ಭೂಮಿಯನ್ನು ಮಂಜೂರು ಮಾಡಿದ್ದು, ಈವರೆಗೂ ಅಭಿವೃದ್ಧಿ ಕಾರ್ಯ ಕೈಗೊಳ್ಳದೆ ಹಕ್ಕುಪತ್ರ ವಿತರಣೆ ಮಾಡಿಲ್ಲವೆಂದು ಹೋರಾಟ ಸಮಿತಿ ದೂರು ನೀಡಿದೆ. ಕೈಗೊಂಡ ಕ್ರಮದ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರನ್ನು ಪ್ರಶ್ನಿಸಿದಾಗ ಅಮಲಾಪುರದಲ್ಲಿ ಮಂಜೂರು ಭೂಮಿಯನ್ನು ಅಭಿವೃದ್ಧಿಪಡಿಸಲು ₹15 ಲಕ್ಷ ಅನುದಾನ ಒದಗಿಸಲು ರಾಜೀವ್‌ ಗಾಂಧಿ ವಸತಿ ಅಭಿವೃದ್ಧಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆಯಾದ ಕೂಡಲೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳ ಅವಗಾಹನೆಗೆ ತಂದರು.

ಅಮಲಾಪುರದಲ್ಲಿ ತಾತ್ಕಾಲಿಕವಾಗಿ ಕಲ್ಪಿಸಿರುವ ವಿದ್ಯುತ್ ಸಂಪರ್ಕದಿಂದ ಹಾನಿ ಸಂಭವಿಸಬಹುದಾದ್ದರಿಂದ ಸೂಕ್ತ ಕ್ರಮಕೈಗೊಳ್ಳಲು ಹೋರಾಟ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಯವರ ಮನವೊಲಿಸಿದಾಗ ಶುಭ ಕಲ್ಯಾಣ್ ತಕ್ಷಣವೇ ಬೆಸ್ಕಾಂ ಕಾರ್ಯ ನಿರ್ವಹಣಾಧಿಕಾರಿಗಳಿಗೆ ದೂರವಾಣಿ ಕರೆ ಮೂಲಕ ಒಂದು ದಿನದೊಳಗಾಗಿ ಸಮರ್ಪಕ ವಿದ್ಯುತ್ ಸಂಪರ್ಕಕ್ಕೆ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.

“ನಿವೇಶನ ವಂಚಿತ ಅರ್ಹ ಬಡ ಫಲಾನುಭವಿಗಳಿಗೆ ನಿವೇಶನ ಸೌಲಭ್ಯ ಕಲ್ಪಿಸಲು ಜಿಲ್ಲೆಯಲ್ಲಿ ಈವರೆಗೂ 2000 ಎಕರೆ ಪ್ರದೇಶವನ್ನು ಗುರುತಿಸಲಾಗಿದ್ದು, ಇದರಿಂದ ಸುಮಾರು 30,000 ನಿವೇಶನಗಳನ್ನು ಹಂಚಿಕೆ ಮಾಡಬಹುದಾಗಿದೆ. ಎಲ್ಲ ತಾಲೂಕಿನಲ್ಲಿ ಆಶ್ರಯ ಸಮಿತಿ ಸಭೆ ನಡೆಸಿ ಆಯ್ಕೆಯಾದ ಫಲಾನುಭವಿಗಳಿಗೆ ನಿಯಮಾವಳಿಯನ್ವಯ ಪಾರದರ್ಶಕವಾಗಿ ಹಾಗೂ ವ್ಯವಸ್ಥಿತವಾಗಿ ನಿವೇಶನ ಹಂಚಿಕೆ ಮಾಡಲಾಗುವುದು” ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ ಪ್ರಭು ಮಾತನಾಡಿ, “ಈಗಾಗಲೇ ಬಡವರಿಗೆ ಹಂಚಿಕೆ ಮಾಡಲು ಗ್ರಾಮೀಣ ಪ್ರದೇಶದಲ್ಲಿ ಗುರುತಿಸಲಾದ ನಿವೇಶನಗಳನ್ನು ಅಭಿವೃದ್ಧಿಪಡಿಸಲು ನಗರ ಯೋಜನಾ ಇಲಾಖೆಗೆ ಜವಾಬ್ದಾರಿ ವಹಿಸಲಾಗಿದೆ. ಸುಸಜ್ಜಿತ ಬಡಾವಣೆಗಳಾಗಿ ಅಭಿವೃದ್ಧಿಪಡಿಸಿದ ನಂತರ ಅರ್ಹರಿಗೆ ಹಕ್ಕುಪತ್ರ ನೀಡಲಾಗುವುದು” ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ವಿ ಅಶೋಕ್ ಮಾತನಾಡಿ, “ಪ್ರತಿಭಟನೆ ನಡೆಸುವವರು ಮಕ್ಕಳು-ಮರಿ, ಸಾಕು ಪ್ರಾಣಿಗಳನ್ನು ಪ್ರತಿಭಟನಾ ಸ್ಥಳಕ್ಕೆ ಕರೆತರುವುದನ್ನು ಕಾನೂನು ಪ್ರಕಾರ ಅಪರಾಧವೆಂದು ಪರಿಗಣಿಸಲಾಗುತ್ತದೆ. ಯಾವುದೇ ಪ್ರತಿಭಟನಾಕಾರರು ತಮ್ಮೊಂದಿಗೆ ಮಕ್ಕಳು ಹಾಗೂ ಪ್ರಾಣಿಗಳನ್ನು ಕರೆತಂದರೆ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ” ಎಂದು ಹೋರಾಟ ಸಮಿತಿಗೆ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಎಲ್ಲ ತಹಶೀಲ್ದಾರರು,  ಉಪವಿಭಾಗಾಧಿಕಾರಿಗಳು, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು. ಸಂಜೆಗತ್ತಲಾಗಿದ್ದರಿಂದ ಪ್ರತಿಭಟನೆ ಹಿಂಪಡೆದವರು ಸುರಕ್ಷಿತವಾಗಿ ಮನೆಗೆ ತೆರಳಲು ಜಿಲ್ಲಾಡಳಿತದಿಂದ ಸಾರಿಗೆ ವ್ಯವಸ್ಥೆ ಕಲ್ಪಿಸಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ನಿವೇಶನ-ಹಕ್ಕುಪತ್ರದ ಹಕ್ಕಿಗಾಗಿ ಹೋರಾಟ; ನಾಲ್ಕನೇ ದಿನಕ್ಕೆ ಕಾಲಿಟ್ಟ ಧರಣಿ

ಬೇಡಿಕೆಗಳನ್ನು ಈಡೇರಿಸಿರುವ ಜಿಲ್ಲಾಡಳಿತಕ್ಕೆ ಅಭಿನಂದನೆ ತಿಳಿಸಿರುವ ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿಯ ಹಂದ್ರಾಳು ನಾಗಭೂಷಣ್, “ಈ ಕುರಿತು ಈ ದಿನ.ಕಾಮ್‌ ‘ಅಲೆಮಾರಿಗಳ ಅಳಲು; ಮನೆ ಕೊಡಿ ಅಥವಾ ವಿಷ ಕೊಟ್ಟು ಸಾಯಿಸಿ’ ಎಂಬ ಶೀರ್ಷಿಕೆ ಅಡಿ ವಿಡಿಯೋ ಸುದ್ದಿ ಪ್ರಸಾರ ಮಾಡಿತ್ತು. ಅಹೋರಾತ್ರಿ ಧರಣಿ ಕುರಿತು ವಿಸ್ತೃತ ವರದಿಯನ್ನೂ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿಯಲ್ಲಿಯೂ ನಮ್ಮ ಆಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಯಶಸ್ವಿಗೆ ಕಾರಣವಾಗಿದೆ” ಎಂದು ಅಭಿನಂದಿಸಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X