ಮೂಢನಂಬಿಕೆಯಿಂದ ಬಾಣಂತಿ ಹಾಗೂ ಹಸುಗೂಸನ್ನು ಊರಿನ ಹೊರಗಿನ ಗುಡಿಸಲಿನಲ್ಲಿ ಇಡುವುದು ಅಕ್ಷಮ್ಯ ಹಾಗೂ ಕಾನೂನು ಬಾಹಿರ ಎಂದು ನ್ಯಾಯಮೂರ್ತಿ ಉಂಡಿ ಮಂಜುಳಾ ಶಿವಪ್ಪ ತಿಳಿಸಿದರು.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಿ ಎಸ್ ಪುರ ಹೋಬಳಿ ಗೊಲ್ಲರಹಟ್ಟಿಯ ಊರಿನ ಹೊರಗೆ ಇದ್ದ ಬಾಣಂತಿ ಬಿಡುವ ಗುಡಿಸಲನ್ನು ಪೊಲೀಸರೊಂದಿಗೆ ಸೇರಿ ಕಾರ್ಯಾಚರಣೆ ನಡೆಸಿ ನಾಶಪಡಿಸಿದ ನಂತರ ಅವರು ಮಾತನಾಡಿದರು.
“ಗೊಲ್ಲ ಸಮುದಾಯ ಮೂಢನಂಬಿಕೆಯನ್ನೇ ಸಂಪ್ರದಾಯ ಎಂದು ಭಾವಿಸಿರುವುದು ದುರದೃಷ್ಟಕರ. ಬಾಣಂತಿ – ಮಕ್ಕಳನ್ನು ಊರಿನ ಹೊರಗೆ ಇಡುವುದು ಅಮಾನವೀಯ, ಸಮುದಾಯವು ಮಾನವೀಯ ನೆಲೆಯಲ್ಲಿ ಯೋಚಿಸಬೇಕಿದೆ” ಎಂದು ಹೇಳಿದರು.
“ಆಧುನಿಕ ಜಗತ್ತಿನಲ್ಲಿ ಇನ್ನೂ ಮೂಢನಂಬಿಕೆ ಆಚರಣೆ ತರವಲ್ಲ. ಹಳೆಯ ಸಂಪ್ರದಾಯವನ್ನೇ ನಂಬಿ ಕೂರುವುದು ಒಳಿತಲ್ಲ. ಗೊಲ್ಲ ಸಮುದಾಯ ಮೂಢನಂಬಿಕೆ ತೊರೆದು ಅಭಿವೃದ್ಧಿ ಹೊಂದುವತ್ತ ಚಿಂತಿಸಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು” ಎಂದು ಕಿವಿಮಾತು ಹೇಳಿದರು.
“ಸಮುದಾಯದ ಸುಶಿಕ್ಷಿತರು ಇಂತಹ ಮೂಢನಂಬಿಕೆಗಳ ಬಗ್ಗೆ ಸಮುದಾಯದವರಲ್ಲಿ ಜಾಗೃತಿ ಮೂಡಿಸಬೇಕಿದೆ. ತಾಲೂಕಿನ ಯಾವುದೇ ಭಾಗದಲ್ಲಿ ಇಂತಹ ಪ್ರಕರಣ ಕಂಡುಬಂದಲ್ಲಿ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ನ್ಯಾಯಮೂರ್ತಿ ಉಂಡಿ ಮಂಜುಳಾ ಶಿವಪ್ಪ ಎಚ್ಚರಿಸಿದರು.
“ಇಂತಹ ಪದ್ಧತಿ ಹೆಣ್ಣಿನ ಮೇಲೆ ನಡೆಸುವ ಶೋಷಣೆಯಾಗಿದ್ದು, ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಜನಕಲ್ಯಾಣ ಯೋಜನೆ; ಕೈಪಿಡಿ ರಚನೆಗೆ ನ್ಯಾ. ರಾಜೇಶ್ವರಿ ಎನ್. ಹೆಗಡೆ ಸೂಚನೆ
ಈ ಬಗ್ಗೆ ಗ್ರಾಮಸ್ಥರು ಪ್ರತಿಕ್ರಿಯಿಸಿದ್ದು, “ಹಲವು ತಲೆಮಾರುಗಳಿಂದ ರೂಢಿಸಿಕೊಂಡು ಬಂದಿರುವ ಪದ್ಧತಿಯನ್ನು ಏಕಾಏಕಿ ಬಿಡಲು ಕಷ್ಟವಾದರೂ ಮುಂದೆ ಇಂತಹ ಪ್ರಕರಣ ನಡೆಯದಂತೆ ಎಚ್ಚರ ವಹಿಸುತ್ತೇವೆ. ಗೊಲ್ಲರ ಹಟ್ಟಿಗಳಲ್ಲಿ ಕಾನೂನು ಅರಿವು ಮೂಡಿಸಿದರೆ ಇಂತಹ ಪ್ರಕರಣ ಕಡಿಮೆಯಾಗಲು ಸಾಧ್ಯವಾಗಲಿದೆ” ಎಂದು ಕೋರಿದರು.
ಕಾರ್ಯಾಚರಣೆಯಲ್ಲಿ ಗುಬ್ಬಿ ಪಿಎಸ್‌ಐ ದೇವಿಕಾ ರಾಣಿ ಸೇರಿದಂತೆ ಪೊಲೀಸ್ ಸಿಬ್ಬಂದಿ, ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಸಿಬ್ಬಂದಿ ಇದ್ದರು.